ಕರಾವಳಿ

ತುಂಬೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಸ್ವಲ್ಪ ಹೆಚ್ಚಳ : ದೂರವಾಗುವುದೇ ನಾಗರೀಕರ ಆತಂಕ

Pinterest LinkedIn Tumblr

Thumbe-vented-Dam

ಮಂಗಳೂರು: ಮಂಗಳೂರು ನಗರಕ್ಕೆ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ತುಂಬೆ ಕಿಂಡಿ ಅಣೆಕಟ್ಟೆಯ ನೀರಿನ ಮಟ್ಟ ಸೋಮವಾರ ಸಂಜೆಯ ವೇಳೆಗೆ 6.2 ಅಡಿಗೆ ಏರಿಕೆಯಾಗಿದೆ. ಸತತ ಪಂಪಿಂಗ್‌ ನಡುವೆಯೇ ನೀರಿನ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ಈಗಿನಂತೆ ಮೂರು ದಿನಕ್ಕೊಮ್ಮೆ ನೀರು ಪೂರೈಸಿದರೂ ಜೂನ್‌ 10ರವರೆಗೆ ಸಾಕಾಗಬಹುದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಎಚ್‌.ಎನ್‌.ಗೋಪಾಲಕೃಷ್ಣ ತಿಳಿಸಿದ್ದಾರೆ.

ಪುತ್ತೂರು ಸಮೀಪದ ನೆಕ್ಕಿಲಾಡಿ ಅಣೆಕಟ್ಟೆಯಿಂದ ಮೇ 17ರಂದು ಕುಮಾ ರಧಾರ ನದಿಗೆ ನೀರು ಹರಿಸಲಾಗಿತ್ತು. ಈ ನೀರು ನೇತ್ರಾವತಿ ನದಿಯನ್ನು ಸೇರಿ ಅಲ್ಲಿಂದ ತುಂಬೆ ಅಣೆಕಟ್ಟೆಗೆ ಹರಿಯುತ್ತಿದೆ. ಮೂರು ದಿನಗಳಿಂದ ತುಂಬೆ ಅಣೆಕಟ್ಟೆಯ ಮಟ್ಟದಲ್ಲಿ ನಿರಂತರವಾದ ಏರಿಕೆ ಕಂಡುಬಂದಿದೆ. ಭಾನುವಾರ ಬೆಳಿಗ್ಗೆಯಿಂದ ಅಣೆಕಟ್ಟೆಯಿಂದ ನಿರಂತರವಾಗಿ ನೀರೆತ್ತಲಾಗುತ್ತಿದೆ. ಅದರ ನಡುವೆಯೇ ಅಣೆಕಟ್ಟೆಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

Thumbe_dyam_1

ಭಾನುವಾರ ಬೆಳಿಗ್ಗೆ ಪಂಪ್‌ ಚಾಲನೆ ಮಾಡುವ ಸಮಯದಲ್ಲಿ ಅಣೆಕಟ್ಟೆಯ ನೀರಿನ ಮಟ್ಟ 5.4 ಅಡಿ ಇತ್ತು. ಮಧ್ಯಾಹ್ನ 12 ಗಂಟೆಯ ವೇಳೆಗೆ ನೀರಿನ ಮಟ್ಟ 6 ಅಡಿಗೆ ಹೆಚ್ಚಳವಾಗಿತ್ತು. ಸೋಮವಾರ ಸಂಜೆ 6 ಗಂಟೆಯ ವೇಳೆಗೆ ನೀರಿನ ಮಟ್ಟ 6.4 ಅಡಿ ಇದೆ. ಇನ್ನೂ ಮೂರು ದಿನಗಳ ಕಾಲ ಒಳಹರಿವು ಇರಲಿದ್ದು, ನೀರಿನ ಮಟ್ಟ ಏಳು ಅಡಿಗೆ ತಲುಪುವ ಸಾಧ್ಯತೆ ಕಾಣುತ್ತಿದೆ ಎಂದವರು ಹೇಳಿದ್ದಾರೆ.

ಜೂನ್‌ 10ರವರೆಗೆ ಸಾಕು: ಈಗ ಮೂರು ದಿನಕ್ಕೊಮ್ಮೆ ತುಂಬೆಯಿಂದ ನೀರು ಪಂಪ್‌ ಮಾಡಿ ನಗರದ ವಿವಿಧ ಪ್ರದೇಶಗಳಿಗೆ ಕೊಳವೆ ಮಾರ್ಗದ ಮೂಲಕ ಸರಬರಾಜು ಮಾಡಲಾಗುತ್ತಿದೆ. ನೀರಿನ ಮಟ್ಟ ನಾಲ್ಕು ಅಡಿಗೆ ಕುಸಿಯುವವರೆಗೂ ನಿರಂತರವಾಗಿ ನೀರೆತ್ತಲು ಸಾಧ್ಯವಿದೆ. ಇನ್ನು ಐದು ಬಾರಿ ಪಂಪಿಂಗ್‌ ಮಾಡಲು ಅವಕಾಶ ದೊರೆಯಲಿದೆ. ಮೂರು ದಿನಗಳಿಗೊಮ್ಮೆ ನೀರೆತ್ತಿದರೆ 15 ದಿನಗಳ ಕಾಲ ಈ ನೀರು ಸಾಕಾಗುತ್ತದೆ. ಅಲ್ಲಿಗೆ ಜೂನ್‌ 10ರ ವರೆಗೆ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಸುಬ್ರಹ್ಮಣ್ಯ, ಬಂಟ್ವಾಳ ಮತ್ತಿತರ ಪ್ರದೇಶಗಳಲ್ಲಿ ಮಳೆ ಬೀಳುತ್ತಿತ್ತು. ಇದರಿಂದ ಕುಮಾರಧಾರ ನದಿಯ ಹರಿವಿನಲ್ಲಿ ಅಲ್ಪ ಏರಿಕೆ ಯಾಗಿತ್ತು. ಆದರೆ, ಎರಡು ದಿನಗಳಿಂದ ಆ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜೂನ್‌ ಮೊದಲ ವಾರದ ಕೊನೆ ಯಲ್ಲಿ ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈಗ ತುಂಬೆ ಅಣೆಕಟ್ಟೆಯಲ್ಲಿರುವ ನೀರನ್ನು ವ್ಯವಸ್ಥಿತ ವಾಗಿ ಬಳಕೆ ಮಾಡಿದರೆ ಮಂಗಳೂರು ನಗರಕ್ಕೆ ಹೆಚ್ಚು ತೊಂದರೆ ಆಗುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

Comments are closed.