ಕರಾವಳಿ

ಈ ಬಾರಿ ಅಕ್ಷಯ ತೃತೀಯದಂದು ಚಿನ್ನದ ಖರೀದಿಯಲ್ಲಿ ಇಳಿಮುಖವಾಗುವ ಸಾಧ್ಯತೆ !

Pinterest LinkedIn Tumblr

gold

ಮುಂಬೈ: ಚಿನ್ನದ ಬೆಲೆ ಮತ್ತೆ ಹೆಚ್ಚಿರುವುದರಿಂದ ಈ ಬಾರಿಯ ಅಕ್ಷಯ ತೃತೀಯದಂದು ಹಳದಿ ಲೋಹ ಖರೀದಿ ಭರಾಟೆ ಕಡಿಮೆಯಾಗುವ ಸಾಧ್ಯತೆಗಳಿವೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಯಾಗಲಿದೆ ಎಂಬ ನಂಬಿಕೆಯಂತೆ ಹಿಂದೂಗಳು ಅಕ್ಷಯ ತೃತೀಯಂದು ಮುಗಿಬಿದ್ದು ಚಿನ್ನ ಖರೀದಿಸುವುದು ವಾಡಿಕೆ. ಇತ್ತೀಚೆಗೆ ಚಿನ್ನದ ಬೆಲೆ ಕುಸಿದಿತ್ತು. ಆದರೆ ತೃತೀಯಕ್ಕೆ ಕೇವಲ ಎರಡುಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಚಿನ್ನದ ಬೆಲೆ ಗ್ರಾಂಗೆ ಮೂರು ಸಾವಿರ ರೂ.ಗಳ ಏರಿಕೆ ಕಂಡಿದೆ.

ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದುಬಿದ್ದಿರುವ ಸಂದರ್ಭದಲ್ಲೇ ಚಿನ್ನದ ಬೆಲೆ ತನ್ನಿಂದತಾನೆ ಏರಿಕೆ ಕಂಡಿರುವುದರಿಂದ ಈ ಬಾರಿ ಚಿನ್ನದ ವ್ಯಾಪಾರ ಚುರುಕುಗೊಳ್ಳುವ ಸಾಧ್ಯತೆಗಳಿಲ್ಲ ಎನ್ನುತ್ತಾರೆ ಭಾರತೀಯ ಚಿನ್ನಾಭರಣ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು. ಕಳೆದ ಬಾರಿ ಭಾರೀ ಮೌಲ್ಯದ ಚಿನ್ನಾಭರಣ ಮಾಡುಸುತ್ತಿದ್ದ ಗ್ರಾಹಕರು ಹಳದಿ ಲೋಹದ ಬೆಲೆ ಏರಿಕೆಯಾಗುತ್ತಿದ್ದಂತೆ ಸಣ್ಣಪುಟ್ಟ ಪ್ರಮಾಣದ ಒಡವೆಗಳನ್ನು ಮಾಡಿಸುತ್ತಿರುವುದು ಈ ಬಾರಿಯ ಅಕ್ಷಯ ತೃತೀಯದಂದು ಭರ್ಜರಿ ವ್ಯಾಪಾರ ನಡೆಯುವುದಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಶ್ರೀಧರ್.ಜಿ.ವಿ.

ಕಳೆದ ಫೆಬ್ರವರಿಯಲ್ಲಿ ಪ್ರತಿ 10 ಗ್ರಾಂಗೆ 26 ಸಾವಿರ ರೂ.ನಿಂದ ಚಿನ್ನದ ಬೆಲೆ ಈಗ 30 ಸಾವಿರಕ್ಕೆ ಹೆಚ್ಚಳಗೊಂಡಿರುವುದೇ ಚಿನ್ನದ ವ್ಯಾಪಾರ ಕುಸಿಯಲು ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮಕ್ಕಳ ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಅಕ್ಷಯ ತೃತೀಯದಲ್ಲೇ ಭಾರೀ ಪ್ರಮಾಣದ ಚಿನ್ನ ಖರೀದಿಸಿ ಸಂಗ್ರಹಿಸಿಡುತ್ತಿದ್ದವರು ಈ ಬಾರಿ ಕೇವಲ ಒಂದು ಗ್ರಾಂ ಚಿನ್ನದ ನಾಣ್ಯ ಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ ಶ್ರೀಧರ್.

Write A Comment