ಕರಾವಳಿ

ಈ ಬಾರಿ ಮಳೆ ! ಹವಾಮಾನ ಇಲಾಖೆ ಶುಭಸುದ್ದಿ…ಮೇ ಅಂತ್ಯದಲ್ಲಿ ಅಥವಾ ಜೂನ್ ಆರಂಭದಲ್ಲಿ ಕೇರಳಕ್ಕೆ ಅಪ್ಪಳಿಸಲಿರುವ ಮಾನ್ಸೂನ್ ಮಾರುತಗಳು

Pinterest LinkedIn Tumblr

Rain

ಬೆಂಗಳೂರು: ದೇಶಾದ್ಯಂತ ಭೀಕರ ಬರಗಾಲವಿದ್ದು, ವಿವಿಧ ರಾಜ್ಯಗಳು ನೀರಿಗಾಗಿ ಪರದಾಡುತ್ತಿರುವ ಸಂದರ್ಭದಲ್ಲೇ ಕೇಂದ್ರ ಹವಾಮಾನ ಇಲಾಖೆ ಶುಭಸುದ್ದಿ ನೀಡಿದ್ದು ಈ ಬಾರಿ ದೇಶಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದೆ.

ಅಂತೆಯೇ ಕರ್ನಾಟಕದಲ್ಲೂ ನಿರೀಕ್ಷೆಯಂತೆಯೇ ನಿಗದಿತ ಸಮಯದಲ್ಲೇ ಮುಂಗಾರು ಪ್ರವೇಶ ಮಾಡಲಿದ್ದು, ಕರ್ನಾಟಕದಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಕೇಂದ್ರ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಸಾಮಾನ್ಯಕ್ಕಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಮಳೆಯಾಗಲಿದ್ದು, ಕರ್ನಾಟಕದಲ್ಲಿ ಸಾಮಾನ್ಯವಾಗಿ 865 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 900 ಮಿ.ಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಹವಾಮಾನ ಇಲಾಖೆಯ ಈ ಮಾಹಿತಿ ನೀರಿಲ್ಲದೆ ಬೆಳೆ ನಾಶವಾಗಿ ಕಂಗಾಲಾಗಿರುವ ರೈತರ ಮೊಗದಲ್ಲಿ ನಗು ಮೂಡಿದ್ದು, ಮತ್ತೆ ಹೊಲ-ಗದ್ದೆಗಳತ್ತ ಸಂತೋಷದಿಂದ ಹೆಜ್ಜೆಹಾಕುತ್ತಿದ್ದಾರೆ. ಇದೇ ಮೇ ತಿಂಗಳ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿದ್ದು, ಕರಾವಳಿ ಮತ್ತು ಘಾಟ್ ಪ್ರದೇಶಗಳಲ್ಲಿ ಬಾರಿ ವರ್ಷಧಾರೆಯಾಗಲಿದೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿ ಎಂ ಬಿ ರಾಜೇಗೌಡ ಅವರು ಹೇಳಿದ್ದಾರೆ.

ಇದೇ ವೇಳೆ ರೈತರಿಗೆ ಹಲವು ಸಲಹೆಗಳನ್ನು ನೀಡಿರುವ ರಾಜೇಗೌಡ ಅವರು, ಭತ್ತ, ರಾಗಿ, ಮೆಕ್ಕೆ ಜೋಳ ಮತ್ತು ಸೂರ್ಯಕಾಂತಿ ಬೆಳೆಯುವಂತೆ ದಕ್ಷಿಣ ಕರ್ನಾಟಕದ ರೈತರಿಗೆ ಸಲಹೆ ನೀಡಿದ್ದು, ಉತ್ತರ ಕರ್ನಾಟಕದ ಭಾಗದ ರೈತರು ಶೇಂಗಾ, ಹೆಸರು ಬೇಳೆ, ಜೋಳ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳದಂತಹ ಬೆಳಗಳನ್ನು ಬೆಳೆಯಲು ಸಲಹೆ ಮಾಡಿದ್ದಾರೆ.

Write A Comment