ಕರಾವಳಿ

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

Pinterest LinkedIn Tumblr

TEACHER ARE WRITTING THE ALL TICKET NUMBERS FOR SSLC EXAM IN CITY

ಬೆಂಗಳೂರು: ಪ್ರಸಕ್ತ ವರ್ಷ 8.49 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

‘ಪರೀಕ್ಷೆಗಳು ಬುಧವಾರದಿಂದ (ಮಾರ್ಚ್ 30) ಆರಂಭವಾಗಿ ಏಪ್ರಿಲ್ 13ರವರೆಗೆ ನಡೆಯುತ್ತವೆ. ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆ ಮತ್ತು ವಿದ್ಯಾರ್ಥಿಗಳು, ಪೋಷಕರಿಗೆ ಗೊಂದಲ ಆಗದಂತೆ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್. ಸತ್ಯಮೂರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಬಾರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ವೀಕ್ಷಕರಿಗೆ ₹500 ಸಂಭಾವನೆ ನೀಡಲಾಗುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಧಿಯಿಂದ ಪ್ರತಿ ಜಿಲ್ಲೆಯ ಉಪನಿರ್ದೇಶಕರಿಗೆ ₹ 2 ಲಕ್ಷ ಮಿತಿಗೊಳಿಸಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಜಾಗೃತ ದಳ: ಜಿಲ್ಲಾ ವಿಚಕ್ಷಣಾ ಜಾಗೃತ ದಳಕ್ಕಾಗಿ 402, ರಾಜ್ಯ ಹಾಗೂ ವಿಭಾಗ ಮಟ್ಟದ ವೀಕ್ಷಕರನ್ನಾಗಿ 20, ಜಿಲ್ಲಾ ವೀಕ್ಷಕರನ್ನಾಗಿ 34, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ 6,164 ಮತ್ತು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರ ಕಚೇರಿಯಲ್ಲಿರುವ ಅಧಿಕಾರಿಗಳನ್ನು ವಿಚಕ್ಷಣಾ ಜಾಗೃತ ದಳವನ್ನಾಗಿ 102 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಒಟ್ಟು 3,082 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಇದರಲ್ಲಿ 111 ಸೂಕ್ಷ್ಮ, 27 ಅತೀ ಸೂಕ್ಷ್ಮ ಕೇಂದ್ರಗಳಿವೆ. 187 ಸರ್ಕಾರಿ, 559 ಅನುದಾನಿತ ಮತ್ತು 442 ಅನುದಾನ ರಹಿತ ಸೇರಿ 1,188 ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ ಎಂದರು.

ಏಪ್ರಿಲ್ 18ರಿಂದ ಮೌಲ್ಯಮಾಪನ: ರಾಜ್ಯದ ಎಲ್ಲ ಜಿಲ್ಲೆಗಳಿಂದ 218 ಮೌಲ್ಯಮಾಪನ ಕೇಂದ್ರಗಳನ್ನು ರಚಿಸಲಾಗಿದೆ. ಏಪ್ರಿಲ್ 18ರಿಂದ ಮೌಲ್ಯಮಾಪನ ಆರಂಭವಾಗುತ್ತದೆ. ಮೌಲ್ಯಮಾಪಕರ ಬೇಡಿಕೆಗಳಿದ್ದರೆ ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರೀಕ್ಷಾ ಸಿಬ್ಬಂದಿಗೂ ಮೊಬೈಲ್‌ ನಿಷೇಧ: ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಸ್ಥಾನಿಕ ಜಾಗೃತ ದಳ, ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಸಿಬ್ಬಂದಿ ಕೇಂದ್ರಕ್ಕೆ ಹಾಜರಾದ ತಕ್ಷಣ ಮುಖ್ಯ ಅಧೀಕ್ಷಕರು ಕಡ್ಡಾಯವಾಗಿ ಅವರ ಮೊಬೈಲ್‌ಗಳನ್ನು ಪಡೆದು ಅಲ್ಮೆರಾದಲ್ಲಿಟ್ಟು ಬೀಗ ಹಾಕಿ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳು ಮೊಬೈಲ್‌ ತರದಂತೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಸೂಚನೆ ನೀಡಬೇಕು. ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಗಳನ್ನು ಬಿಡುವ ಸಂದರ್ಭದಲ್ಲಿ ಮೊಬೈಲ್‌ ಮತ್ತು ನಕಲು ಪ್ರತಿಗಳನ್ನು ಪರಿಶೀಲಿಸಿ ನಂತರ ಕಳುಹಿಸಬೇಕು ಎಂದು ನಿರ್ದೇಶಿಸಲಾಗಿದೆ.

ಅವ್ಯವಹಾರ ಕಂಡರೆ ದೂರು ನೀಡಿ
ಪರೀಕ್ಷೆ ನಡೆಯುವ ಅವಧಿ ಮಾರ್ಚ್ 30ರಿಂದ ಏಪ್ರಿಲ್ 13ರವರೆಗೆ ಪರೀಕ್ಷಾ ಅವ್ಯವಹಾರದ ಬಗ್ಗೆ ಏನಾದರೂ ದೂರುಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಬಹುದು. ದೂರವಾಣಿ:080–23310075, 23310076.

‘ಪರೀಕ್ಷಾ ಕೇಂದ್ರ 200 ಮೀಟರ್‌ ಸುತ್ತ ನಿಷೇಧಾಜ್ಞೆ ಪ್ರದೇಶವೆಂದು ಘೋಷಿಸಲು ಮತ್ತು ಕೇಂದ್ರಗಳ ಹತ್ತಿರದ ಜೆರಾಕ್ಸ್‌ ಕೇಂದ್ರಗಳನ್ನು ಮುಚ್ಚಿಸಲು ಈಗಾಗಲೇ ಆದೇಶಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ವದಂತಿಗಳಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಿವಿಗೊಡಬಾರದು.

ವದಂತಿ ಹಬ್ಬಿಸುವವರ ಮತ್ತು ಕುಚೋದ್ಯ ಚಟುವಟಿಕೆಗಳಿಗೆ ಅವಕಾಶ ನೀಡುವವರ ಬಗ್ಗೆ ಗಮನಕ್ಕೆ ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ಹೇಳಿದ್ದಾರೆ.

Write A Comment