ಅಂತರಾಷ್ಟ್ರೀಯ

ಕೂದಲು ವೇಗವಾಗಿ ಬೆಳೆಯಲು ಇಲ್ಲಿದೆ ಟಿಪ್ಸ್…

Pinterest LinkedIn Tumblr

long hair

ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಿಸುವ ಕೇಶರಾಶಿ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿರುವುದು ಅತ್ಯ ಅವಶ್ಯಕ….. ಇತ್ತೀಚಿನ ಯುಗದಲ್ಲಿ ರಾಸಾಯನಿಕ ಶಾಂಪೂ, ಕೇಶ ವಿನ್ಯಾಸ ಎಂದು ಅತಿಹೆಚ್ಚು ಮಂದಿ ತಮ್ಮ ಸೌಂದರ್ಯ ರಹಸ್ಯವನ್ನು ಹಾಳುಗೆಡುವುತ್ತಿದ್ದಾರೆ.

ತಮ್ಮ ಕೂದಲ ರಕ್ಷಣೆಗಾಗಿಯೂ ಮಾರಕ ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದ ಕೂದಲು ಉದುರುವುದು ಸಹಜವಾಗಿದೆ. ಈ ಯುಗದಲ್ಲಿ ದಟ್ಟವಾದ ಕೂದಲು ಯಾರಿಗೆ ಇಷ್ಟವಿಲ್ಲ? ಕೆಲವು ಕಾರಣಕ್ಕೆ ಗಿಡ್ಡವಾಗಿದ್ದ ಕೂದಲಿನ ಉದ್ದ ಹೆಚ್ಚಿಸಿಕೊಳ್ಳುವುದು ಎಲ್ಲರ ಕನಸು. ಆದರೆ ಕೂದಲು ಬೆಳೆಯುವ ವೇಗದ ಗತಿ ಆಮೆವೇಗಕ್ಕಿಂತಲೂ ಅತಿ ನಿಧಾನವಾಗುವ ಕಾರಣ ಹೆಚ್ಚಿನ ಸಂದರ್ಭದಲ್ಲಿ ನಿರಾಸೆಯೇ ಗತಿಯಾಗುತ್ತದೆ.

ಆದರೆ ಇದಕ್ಕೆ ಕಾರಣ ಕೂದಲಿಗೆ ನಾವು ನೀಡುವ ಆರೈಕೆಯಲ್ಲಿ ಮಾಡುವ ಕೊರತೆ. ಆದರೆ ಈಗ ಹೆಚ್ಚು ಚಿಂತಿಸಬೇಕಾಗಿಲ್ಲ. ಅದಕ್ಕಾಗಿ ಕೆಲ ಟಿಪ್ಸ್ ಇಲ್ಲಿದೆ.

ಚೆನ್ನಾಗಿ ಕಳಿತ ಬಾಳೆಹಣ್ಣಿನ ತಿರುಳನ್ನು ಕಿವುಚಿ ಅರ್ಧ ಲಿಂಬೆಯ ರಸವನ್ನು ಸೇರಿಸಬೇಕು.ಜೊತೆಗೆ ಮೊಟ್ಟೆಯ ಹಳದಿ ಭಾಗವನ್ನು ಪ್ರತ್ಯೇಕಿಸಿ ಸೇರಿಸಿ ಮಿಶ್ರಣ ಮಾಡಿ ದಪ್ಪನಾದ ಲೇಪನ ತಯಾರಿಸಿ. ಈ ಲೇಪನವನ್ನು ಕೂದಲಿಗೆ ಬುಡದಿಂದ ತುದಿಯವರೆಗೂ ಆವರಿಸುವಂತೆ ಹಚ್ಚಿ. ಒಂದು ಘಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸುವ ಮೂಲಕ ಇದರಿಂದ ಪಡೆಯುವ ಪರಿಣಾಮ ನಿಮ್ಮ ಮೊಗದಲ್ಲಿ ಹರ್ಷ ಮೂಡಿಸುವುದು ಖಂಡಿತ.

ಹರಳೆಣ್ಣೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಮತ್ತು ಕೊಬ್ಬಿನ ತೈಲವಿದೆ. ಆಗಾಗ ಹರಳೆಣ್ಣೆಯಿಂದ ತಲೆಗೆ ನಯವಾದ ಮಸಾಜ್ ಮಾಡುವ ಮೂಲಕ ಕೂದಲ ಉದ್ದ ಹೆಚ್ಚಲು ಸಾಧ್ಯವಾಗುತ್ತದೆ. ದೇಹಕ್ಕೆ ಅಗತ್ಯವಿರುವಂತೆಯೇ ಕೂದಲ ಬೆಳವಣಿಗೆಗೂ ಪ್ರೋಟೀನು, ಖನಿಜಗಳು ಮತ್ತು ವಿಟಮಿನ್‌ಗಳ ಅಗತ್ಯವಿದೆ. ಇದಕ್ಕಾಗಿ ಮೊಟ್ಟೆ, ಹಾಲು, ಮೊಸರು, ಚೀಸ್, ಪಾಲಕ್ ಸೊಪ್ಪು, ಸಾಲ್ಮನ್ ಮೀನು, ಎಲೆಕೋಸು, ಓಟ್ಸ್, ಬೆಣ್ಣೆಹಣ್ಣು, ಕಂದು ಬ್ರೆಡ್ ಮೊದಲಾದವುಗಳನ್ನು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ.

ಕೂದಲ ಬೆಳವಣಿಗೆಯ ಬದ್ದ ವೈರಿ ಎಂದರೆ ಮಾನಸಿಕ ಒತ್ತಡ. ಆದ್ದರಿಂದ ಯಾವುದೇ ಪರಿಸ್ಥಿತಿ ಇದ್ದರೂ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಇದರಿಂದ ಕೂದಲ ಬೆಳವಣಿಗೆ ಶೀಘ್ರ ಮತ್ತು ಉತ್ತಮವಾಗಿ ಆಗುತ್ತದೆ.

ತಲೆಗೂದಲ ಬೆಳವಣಿಗೆಗೆ ಅಡ್ಡಿಪಡಿಸುವ ಇನ್ನೊಂದು ಕಾರಣವೆಂದರೆ ತಲೆಹೊಟ್ಟು. ಇದರ ಮೂಲಕ ತಲೆಗೂದಲ ಬುಡಕ್ಕೆ ಹಲವು ಸೋಂಕುಗಳು ಎದುರಾಗಬಹುದಾಗಿದ್ದು ಕೂದಲ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಕೂದಲು ಉದುರಲೂ ಕಾರಣವಾಗುತ್ತದೆ. ಆದ್ದರಿಂದ ತಲೆಹೊಟ್ಟು ನಿವಾರಿಸುವ ಸಮರ್ಥ ವಿಧಾನವನ್ನು ಅನುಸರಿಸಿ.

ಕೂದಲ ಆರೈಕೆಗೆ ಸೌಮ್ಯವಾದ ಕಂಡೀಶನರ್ ನಿಯಮಿತವಾಗಿ ಬಳಸಿ. ಇದರಿಂದ ನಿಮ್ಮ ಕೂದಲು ಆರೋಗ್ಯಕರ ಮತ್ತು ಮೃದುವಾಗಿಯೂ ಇರುತ್ತದೆ.

ಕೂದಲ ಬುಡಕ್ಕೆ ಉತ್ತಮ ಪ್ರಮಾಣದ ರಕ್ತಸಂಚಾರ ಅಗತ್ಯವಾಗಿದೆ. ಇದರಿಂದ ಇಲ್ಲಿ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗಿ ಕೂದಲ ಬೆಳವಣಿಗೆಯನ್ನು ವೃದ್ದಿಸುತ್ತದೆ. ನಯವಾದ ಮಸಾಜ್ ಮೂಲಕ ರಕ್ತಸಂಚಾರವನ್ನು ಹೆಚ್ಚಿಸಿ ಹೆಚ್ಚಿನ ಪೋಷಣೆ ಪಡೆಯಬಹುದು.

ಕೆಲವೊಮ್ಮೆ ಆರೈಕೆಯ ಕೊರತೆಯಿಂದ ಕೂದಲ ತುದಿಗಳು ಸೀಳಿರುವುದನ್ನು ಕಾಣಬಹುದು. ಇದನ್ನು ಹಾಗೇ ಬಿಟ್ಟರೆ ಸೀಳು ತಲೆಗೂದಲ ಬುಡದವರೆಗೂ ಬರಬಹುದು. ಆದ್ದರಿಂದ ಸೀಳು ಪ್ರಾರಂಭವಾಗಿರುವಲ್ಲಿಂದ ಕೊಂಚವೇ ಮೇಲೆ ಕತ್ತರಿಸುವ ಮೂಲಕ ಕೂದಲು ಉತ್ತಮವಾದ ಬೆಳವಣಿಗೆ ಪಡೆಯಲು ಸಾಧ್ಯವಾಗುತ್ತದೆ.

Write A Comment