
ಅಬುಧಾಬಿ : ಮಂಗಳೂರು ಕಪ್ – 2016 ಚತುರ್ಥ ಋತುವಿನ ಕ್ರಿಕೆಟ್ ಪಂದ್ಯಾಟ ನಿರೀಕ್ಷೆಯಂತೆ ಪೈಪೋಟಿಯುತವಾಗಿ ನಡೆಯಿತು. ಅನಿವಾಸಿ ಕನ್ನಡಿಗರ ಕ್ರೀಡಾ ಪ್ರೇಮಕ್ಕೆ ಇಂಬು ನೀಡುವಂತೆ ಅರಬ್ ಸಂಯುಕ್ತ ಸಂಸ್ಥಾನದ ಏಳು ಎಮಿರಟುಗಳಿಂದ ಆಗಮಿಸಿದ ಬರೋಬ್ಬರಿ 20 ಕ್ರಿಕೆಟ್ ತಂಡಗಳು ಜಿದ್ದಾ ಜಿದ್ದಿನ ಹೋರಾಟದ ಮೂಲಕ ಕದನ ಕುತೂಹಲ ಕೆರಳಿಸಿತ್ತು.










ಶೇಖ್ ಝಾಯೆದ್ ಓವೆಲ್ ಹುಲ್ಲು ಹಾಸಿನ ಕ್ರೀಡಾಂಗಣದಲ್ಲಿ ಒಟ್ಟು ಸೇರಿದ್ದ ಅನಿವಾಸಿ ಕನ್ನಡಿಗರಿಗೆ ಹಬ್ಬದ ವಾತಾವರಣ. ಕರ್ನಾಟಕ ಕರಾವಳಿ, ಕಾಸರಗೋಡು ಮತ್ತು ಘಟ್ಟ ಪ್ರದೇಶದ ಹೆಚ್ಚಿನ ತಂಡಗಳು ಭಾಗವಹಿಸಿದ್ದ ಈ ಕ್ರೀಡಾ ಕೂಟ ನಿಜಕ್ಕೂ ಅನಿವಾಸಿಗಳಿಗೆ ರಸದೌತಣ ವನ್ನೇ ಉಣಬಡಿಸಿತು . ತಾಯ್ನಾಡಿನ ತಂಡಗಳ ನಡುವಿನ ಕ್ರಿಕೆಟ್ ಸಮರ ಹುಮ್ಮಸು ಒಂದೆಡೆಯಾದರೆ. ವಾರಾಂತ್ಯದಲ್ಲಿ ಸಿಗುವ ಸಮಯದಲ್ಲಿ ತನ್ನೂರಿನ ಗಡಣದ ಜೊತೆ ಬೆರೆಯುವ ಖುಷಿ ನೆರೆದಿದ್ದ ಜನಸಂದಣಿಯ ವದನಗಳಲ್ಲಿ ಎದ್ದು ಕಾಣುತಿತ್ತು. ಅಂದಹಾಗೆ ಅನಿವಾಸಿಗಳನ್ನು ಬಿಟ್ಟೂ ಬಿಡದೆ ಕಾಡುವ ತಾಯ್ನಾಡಿನ ನೆನಪು, ಮೂಲದೆಡೆಗಿನ ತುಡಿತ, ವಾಂಛೆಗಳು ಸಾಕಾರವಾದಂತಿತ್ತು, ನೆರೆದಿದ್ದವರು ಕನ್ನಡ, ತುಳು, ಬ್ಯಾರಿ, ಕೊಂಕಣಿ ಬಾಷೆಯಲ್ಲಿ ಜನರು ಉಭಯ ಕುಶಲೋಪರಿ ನಡೆಸುತ್ತಾ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತಿದ್ದರು. ಒಟ್ಟಾರೆಯಾಗಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕನ್ನಡಿಗರ ಈ ಝಲಕ್ ಕಣ್ಮನ ಸೆಳೆಯುವಂತಿತ್ತು.












ರಾಯಲ್ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ನ ಮುಖ್ಯಸ್ಥ ವಿನ್ಸೆಂಟ್ ಡಿಸಿಲ್ವರವರು ಮಂಗಳೂರು ಕ್ರಿಕೆಟ್ ಕ್ಲಬ್ನ ಅಧ್ಯಕ್ಷ ಲತೀಫ್ ಕೆ. ಹೆಚ್. ಜಂಟಿಯಾಗಿ ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ನೀಡಿದರು. ವಿನ್ಸೆಂಟ್ ಡಿಸಿಲ್ವರವರು ಮಾತನಾಡಿ ಎಂಸಿಸಿಯ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು.
ಫ್ರೈಡೆ ಚಾರ್ಜರ್ಸ್ ತಂಡ, ಲೀಗ್ ಹಂತದ ಪಂದ್ಯದಲ್ಲಿ ಬಲಿಷ್ಠ ಪೆಸಿಫಿಕ್ ಸ್ಟಾರ್ ತಂಡಕ್ಕೆ ಸೋಲುಣಿಸಿದ ಬಳಿಕ. ಕ್ರಮವಾಗಿ ಕ಼್ವಾಟರ್ ಮತ್ತು ಸೆಮಿ ಫೈನಲ್ ಗಳಲ್ಲಿ ಸನನ್ ಸ್ಟಾರ್ ಮತ್ತು ಕ್ಯಾಪ್ಚರ್ ಯುನೈಟೆಡ್ ತಂಡಗಳನ್ನು ಬಗ್ಗು ಬಡಿದು ಅಂತಿಮ ಸುತ್ತಿನ ಹಣಾಹಣಿಗೆ ತೇರ್ಗಡೆ ಹೊಂದಿತ್ತು. ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಫ್ರೈಡೆ ಚಾರ್ಜರ್ಸ್ ತಂಡ ಉತ್ತಮ ಪ್ರದರ್ಶನದೊಂದಿಗೆ ಎದುರಾಳಿ ಆಕ್ಸ್ಫರ್ಡ್ ಮರೀನ್ ತಂಡದ ವಿರುದ್ದ ರೋಚಕ ಗೆಲುವು ಸಾಧಿಸಿತು. ಈ ಮೂಲಕ ವಿನ್ನರ್ ಟ್ರೋಫಿ ಮತ್ತು 8000/- AED (ದಿರ್ಹಂ) ಬಹುಮಾನ ಮೊತ್ತವನ್ನು ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಕ್ಸ್ಫರ್ಡ್ ಮರೀನ್ ತಂಡ ಫೈನಲ್ ನಲ್ಲಿ ಅತಿಥೇಯ ಫ್ರೈಡೆ ಚಾರ್ಜರ್ಸ್ ತಂಡಕ್ಕೆ ಮಣಿಯುವ ಮೂಲಕ ರನ್ನರ್ ಅಪ್ ಆಗಿ ಮೂಡಿಬಂತು. ಈ ಮೂಲಕ ರನ್ನರ್ ಅಪ್ ಟ್ರೋಫಿ ಮತ್ತು 5000/- AED (ದಿರ್ಹಂ) ಬಹುಮಾನ ಮೊತ್ತವನ್ನು ತನ್ನದಾಗಿಸಿಕೊಂಡಿತು.












ಕ್ರೀಡಾವಳಿಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಮಂಗಳೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಲತೀಫ್ ಕೆ. ಹೆಚ್ ರವರು, ಕ್ರೀಡಾಕೂಟದ ಪ್ರಾಯೋಜಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕ್ರೀಡಾಕೂಟದ ಮುಖ್ಯ ಪ್ರಾಯೋಜಕರಾದ ಹಿಸ್ನ ಇಂಟರ್ನ್ಯಾಷನಲ್ ಕಾರ್ಯನಿರ್ವಹಣಾ ಮುಖ್ಯಸ್ಥ ರೊನಾಲ್ಡ್ ಪಿಂಟೋ, ಮಾತನಾಡಿದ ಸತತ ನಾಲ್ಕು ವರ್ಷಗಳಿಂದ ಅಚ್ಚುಕಟ್ಟಾಗಿ ,ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡು ಬರುತ್ತಿರುವ ಎಂಸಿಸಿಯ ಸಾಧನೆ ಸ್ತುತ್ಯರ್ಹ ಎಂದರು ವಿಜೇತ ತಂಡಗಳನ್ನು ಅಭಿನಂದಿಸಿದ ಅವರು; ಯಾವುದೇ ಒಂದು ಪಂದ್ಯಾವಳಿಯಲ್ಲಿ ಗೆಲುವು – ಸೋಲು ಇದ್ದದ್ದೇ ಆದರೆ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.












ಯುಎಇ ಯ ಎಲ್ಲೆಡೆಯಿಂದ ಸಾಮಾಜಿಕ ಸಂಘ ಸಂಸ್ಥೆ ಗಳ ನೇತಾರರು. ಖ್ಯಾತ ಉದ್ಯಮಿಗಳು ಈ ಕಾರ್ಯಕ್ರಮ ಪ್ರಾಯೋಜಕತ್ವದಲ್ಲಿ ಕೈ ಜೋಡಿಸಿದ್ದು ವಿಶೇಷವಾಗಿತ್ತು, ಕಾರ್ಯಕ್ರಮದ ಪ್ರಾಯೋಜಕತ್ವದಲ್ಲಿ ಸಹಭಾಗಿತ್ವ ವಹಿಸಿದ್ದ ಅಕ್ರಮ್ ಕಾರ್ಯನಿರ್ವಹಣಾ ಮುಖ್ಯಸ್ಥರು ಅಲ್ ಸಿತಾರ ಗ್ರೂಪ್, ವಾಲ್ಟರ್ ಅಲ್ಮೆಡಾ ಪ್ರಧಾನ ವ್ಯವಸ್ಥಾಪಕರು ರೀಗಲ್ ಫ಼ರ್ನಿಶಿಂಗ್ ಅಂಡ್ ಸ್ಟೋರೇಜ್ ಸಿಸ್ಟಮ್, ಆಸೀಫ್ ವ್ಯವಸ್ಥಾಪಕ ನಿರ್ದೇಶಕ ಸಂಟೆಕ್ ಮಲ್ಟಿ ಲೈನ್ ಟ್ರೇಡಿಂಗ್ ಮುಸಫ್ಫಾ, ನೂರುದ್ದೀನ್ ಮತ್ತು ರಫೀಕ್ ಬಿನ್ದರೈ ಕಂಪನಿ, ಸುಭಾಷ್ ಮುಖ್ಯಸ್ಥರು ಸ್ಪೇಸ್ ಲಿಂಕ್ ಜನರಲ್ ಕಾಂಟ್ರಾಕ್ಟಿಂಗ್, ಸನಿಲ್ ಅರವಿಂದ್ ವ್ಯವಸ್ಥಾಪಕ ನಿರ್ದೇಶಕರು ಫಿಯೋನಿಕ್ಸ್ ಇಂಟರ್ನ್ಯಾಷನಲ್ ಇಂಟೀರಿಯರ್ ದುಬೈ, ಯುಎಇ ಎಕ್ಸ್ಚೇಂಜ್ ಪ್ರತಿನಿಧಿ ಮನೋಜ್ ಯೂಸುಫ್ ಅಲ್ ಶಮಿ – ರಾಯಲ್ ಎಲೆಕ್ಟ್ರಾನಿಕ್ ವ್ಹೀಲ್ ಬ್ಯಾಲೆನ್ಸ್ ಕಂಪನಿ, ಅಬುಬಕ್ಕರ್ ಸ್ಟೈಲ್ ಲೈನ್ ಫ್ಯಾಷನ್ಸ್, ಕೆ ಎಚ್, ಹಕೀಮ್ – ವ್ಯವಸ್ಥಾಪಕ ನಿರ್ದೇಶಕರು ರಾಯಲ್ ಸಮೂಹದ ಕಂಪನಿಗಳು. ಮೊಹ್ಸಿನ್ ವ್ಯವಸ್ಥಾಪಕ ನಿರ್ದೇಶಕ ಆರ್ಟ್ ಡಿಜಿಟಲ್ ಮುದ್ರಣ ಕೇಂದ್ರ ಮತ್ತು ಸಚಿನ್ ನೊರೊನ್ಹಾ – ಬ್ರಾಡ್ವೇ ಇವೆಂಟ್ ಮ್ಯಾನೇಜ್ಮೆಂಟ್ ಮುಂತಾದ ಗಣ್ಯರು ವಿಜೇತರಿಗೆ ವಿಶೇಷ ಪ್ರಶಸ್ತಿ ಮತ್ತು ಪಾಲ್ಗೊಂಡ ತಂಡಗಳಿಗೆ ಪ್ರೋತ್ಸಾಹ ದಾಯಕ ಬಹುಮಾನ ನೀಡಿ ಅಭಿನಂದಿಸಿದರು.










ವಿಶೇಷ ಬಹುಮಾನ ವಿಜೇತರ ವಿವರ ಇಂತಿದೆ :
ಫೈನಲ್ ಪಂದ್ಯಾವಳಿಯ ಪಂದ್ಯ ಪುರುಷೋತ್ತಮ – ಉಣ್ಣಿ ಫ್ರೈಡೆ ಚಾರ್ಜರ್ಸ್
ಪಂದ್ಯಾವಳಿಯ ಮನಮೋಹಕ ಕ್ಯಾಚ್ : ಸುಜಿತ್ ಅಬುಧಾಬಿ ಇಂಡಿಯನ್ಸ್
ಪಂದ್ಯಾವಳಿಯ ಅತ್ಯುತ್ತಮ ಫೀಲ್ಡರ್ : ಸದಾಕ್ ಕ್ಯಾಪ್ಚರ್ ಯುನೈಟೆಡ್
ಪಂದ್ಯಾವಳಿಯ ಅತ್ಯುತ್ತಮ ವಿಕೆಟ್ ಕೀಪರ್ : ಯೆಂಜೆಲೋ ಅಬುಧಾಬಿ ಇಂಡಿಯನ್ಸ್
ಪಂದ್ಯಾವಳಿಯ ಅತ್ಯುತ್ತಮ ಬೌಲರ್ : ಅರ್ಷದ್ ಫ್ರೈಡೆ ಚಾರ್ಜರ್ಸ್
ಪಂದ್ಯಾವಳಿಯ ಅತ್ಯುತ್ತಮ ದಾಂಡಿಗ : ತೌಫೀಕ್ ಫ್ರೈಡೆ ಚಾರ್ಜರ್ಸ್
ಸರಣಿ ಪುರುಷೋತ್ತಮ : ಪ್ರವೀಣ್ , ಆಕ್ಸ್ಫರ್ಡ್ ಮರೀನ್ ದುಬೈ
ಸೇಫ್ ಲೈನ್ ಅಬು ಧಾಬಿ, ಅವಿವಾ ಹಾಸ್ಪಿಟಲ್ ತಂಡ, ಸಂಟೆಕ್ ಅಬುಧಾಬಿ, ಅಲ್ ಸಿತಾರ ಕ್ರಿಕೆಟರ್ಸ್ ಅಬುಧಾಬಿ – ನಾಲ್ಕು ತಂಡಗಳು ಪವರ್ ಪ್ಲೇ ಪ್ರಶಸ್ತಿಗೆ ಭಾಜನರಾದರು.
ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿಯ ಅಧ್ಯಕ್ಷ ಲತೀಫ್ ಕೆ ಯಚ್ ಕಕ್ಕಿಂಜೆ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶೇಖರ್ ಶೆಟ್ಟಿ -ವ್ಯವಸ್ಥಾಪಕ ನಿರ್ದೇಶಕರು ಅರಬ್ ಉಡುಪಿ, ಸಂತೋಷ್ ರೈ – ರಾಮಿ ಗ್ರೂಪ್ ಆಫ್ ಹೋಟೆಲ್ಸ್, ಸುಧೀರ್ ಶೆಟ್ಟಿ – ಮುಖ್ಯ ನಿರ್ವಹಣಾ ಅಧಿಕಾರಿ ಯುಎಇ ಎಕ್ಸ್ಚೇಂಜ್, ಥಾನಿ ಮುರ್ಷಿ –ಯುನಿಲಿವರ್ ನ ಹೆರಾಲ್ಡ್ ನಜರೇತಿ – ಅಲ್ ಅಹಲ್ಯ ಗಲ್ಫ್ ಲೈನ್ ಜನರಲ್ ಟ್ರೇಡಿಂಗ್, ಮನೋಜ್ ಮೆನೆಜಸ್- ಬ್ರಾಡ್ವೇ ಇವೆಂಟ್ ಮ್ಯಾನೇಜ್ಮೆಂಟ್, ರಘುನಾಥ್ ಸುಭಿಕ್ಷಾ ರೆಸ್ಟೋರೆಂಟ್ ಮತ್ತು ಕ್ರಿಕೆಟ್ ಕೌನ್ಸಿಲ್ (ಎಡಿಸಿಸಿ)ನ ಅಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು. ಎಂಸಿಸಿ ಕಾರ್ಯದರ್ಶಿ ರಶೀದ್ ನ್ಯಾಷನಲ್ ಮಾಧ್ಯಮ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು. ನಿಝಾರ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಯಹ್ಯಾ ಅಬ್ಬಾಸ್ ಉಜಿರೆ