ಅಂತರಾಷ್ಟ್ರೀಯ

ಫೈಬ್ರಾಯಿಡ್ ಗಡ್ಡೆ: ಗರ್ಭಕೋಶ ನಷ್ಟದ ಭಯ ಬೇಡ

Pinterest LinkedIn Tumblr

fibroid

ಫೈಬ್ರಾಯಿಡ್ ಗಡ್ಡೆ ಸಮಸ್ಯೆ ಮಹಿಳೆಯರಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ. ಇದು ವಾಸಿ ಮಾಡಬಹುದಾದ ಕಾಯಿಲೆ. ಸಂತಾನೋತ್ಪತ್ತಿ ಕಾಲದಲ್ಲಿ ಅನೇಕ ಮಹಿಳೆಯರಲ್ಲಿ ಫೈಬ್ರಾಯಿಡ್ ಗಡ್ಡೆಗಳು ಕಾಣಿಸಬಹುದು. ಮುಖ್ಯವಾಗಿ ವಂಶಾವಳಿ ಕಾರಣದಿಂದ ಅಂದರೆ ತಾಯಿಯಿಂದ ಮಗಳಿಗೆ ಫೈಬ್ರಾಯಿಡ್ ಗಡ್ಡೆಗಳು ಮರುಕಳಿಸುವ ಸಾಧ್ಯತೆ ಇದೆ. ಸುಮಾರು 30-35 ವಯಸ್ಸಿನ ಮಹಿಳೆಯರು ಈ ಕಾಯಿಗೆ ತುತ್ತಾಗುತ್ತಾರೆ.

ಈ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಲಕ್ಷಣಗಳು

ಈ ರೋಗದ ಲಕ್ಷಣ ಎಂದರೆ ಮುಟ್ಟಿನ ದಿನಗಳಲ್ಲಿ ಅಧಿಕ ಋತುಸ್ರಾವ, ಇದು ಹತ್ತಾರು ದಿನಗಳ ಕಾಲ ಮುಂದುವರಿಯುತ್ತದೆ. ಇದರಿಂದ ಒಂದು ಮುಟ್ಟಿಗೂ ಇನ್ನೊಂದು ಮುಟ್ಟಿಗೂ ವ್ಯತ್ಯಾಸವಾಗುತ್ತದೆ.

ಸೋಂಕು ಉಂಟಾಗಿ ಕೀವು, ಬಿಳಿ ಸ್ರಾವ ಹಾಗೂ ರಕ್ತಮಿಶ್ರಿತ ಸ್ರಾವ ಆಗಬಹುದು. ಸಂಭೋಗ ಸಂದರ್ಭದಲ್ಲಿ ತೀವ್ರ ನೋವು ಕಾಣಿಸುತ್ತದೆ. ಮೂತ್ರ ಮಾಡಲಿಕ್ಕು ತೊಂದರೆ, ಮಲ ವಿಸರ್ಜನೆಗೆ ತೊಂದರೆ, ಬೆನ್ನುನೋವು, ಗರ್ಭ ಧರಿಸಲು ತೊಂದರೆಯಾಗುವುದು.

ಈ ಫೈಬ್ರಾಯಿಡ್ ಗಡ್ಡೆಗಳನ್ನು ಉದರ ಪರೀಕ್ಷೆ, ಸ್ಕ್ಯಾನಿಂಗ್ ಮೂಲಕ ಪತ್ತೆಹಚ್ಚಬಹುದು. ಹೊಟ್ಟೆಯಲ್ಲಿ ಗಡ್ಡೆಗಳು ಇದ್ದ ಪಕ್ಷದಲ್ಲಿ ಅದುಮಿದಾಗ ಗಟ್ಟಿ ಅನುಭವ ಆಗುತ್ತದೆ ಮತ್ತು ಮುಟ್ಟಿನ ಸಂದರ್ಭದಲ್ಲಿ ಅಧಿಕ ಋತುಸ್ರಾವ ಆಗುತ್ತಿದ್ದರೆ ಅದು ನಾರುಗಡ್ಡೆ ಎಂದು ವೈದ್ಯರು ತೀರ್ಮಾನಿಸುತ್ತಾರೆ.

ಪೆಲ್ವಿಕ್ ಪರೀಕ್ಷೆ ಸಹ ಮಾಡಿ, ನಂತರ ಸ್ತ್ರೀರೋಗ ತಜ್ಞರು ಮುಟ್ಟಿನ ವಿವರ, ಉದರದ ನೋವಿನ ಪ್ರಮಾಣ ಹಾಗೂ ಮಗುವನ್ನು ಹೊಂದುವ ಅಭಿಲಾಷೆ ಇದೆಯೇ? ಎಂಬುದನ್ನು ಅರಿತು ಚಿಕಿತ್ಸೆಯ ನಿರ್ಧಾರ ಮಾಡುತ್ತಾರೆ.

ಫೈಬ್ರಾಯಿಡ್ ಗಡ್ಡೆಗಳು ದೊಡ್ಡದಾದಾಗ ಶಸ್ತ್ರ ಚಿಕಿತ್ಸೆ ಒಂದೇ ಮಾರ್ಗ. ಕೆಲವು ಸಂದರ್ಭದಲ್ಲಿ ಗಡ್ಡೆಗಳು ಮಿತಿ ಮೀರಿ ಬೆಳೆದಿದ್ದರೆ ಗರ್ಭಕೋಶ ಎಂದು ತೆಗೆಯುವ ಅನಿವಾರ್ಯತೆ ಇರುತ್ತದೆ. ಚಿಕ್ಕ ವಯಸ್ಸಿನ ಮಹಿಳೆಯರಿಗೆ ಗರ್ಭಕೋಶ ಉಳಿಸುವ ಆಧುನಿಕ ಚಿಕಿತ್ಸೆ ಸಹ ಈಗ ಲಭ್ಯವಿದೆ.

ಅವುಗಳಲ್ಲಿ ಮಯೋಮೆಕ್ಟಮಿ ಮುಖ್ಯ ಶಸ್ತ್ರ ಚಿಕಿತ್ಸೆಯಾಗಿದ್ದು, ಈ ಮೂಲಕ ಗರ್ಭಕೋಶ ಉಳಿಸಿ ಮಗುವನ್ನು ಪಡೆಯಲು ಸಹಾಯಕ.

ಕೆಲವು ಸಲ ಗಡ್ಡೆಗಳು ಗರ್ಭಾಶಯದ ಒಳಗಿದ್ದಾಗ ಯೋನಿ ಮಾರ್ಗದ ಮೂಲಕ ಹಿಸ್ಟ್ರಿವಿಸ್ಕೋಪಿ, ಮಯೋಮೆಕ್ಟಮಿ ಚಿಕಿತ್ಸೆ ಮೂಲಕ ತೆಗೆಯಬಹುದು. ಅಕಸ್ಮಾತ್ ಗರ್ಭಕೋಶದ ಹೊರಗಿದ್ದರೆ ಱ್ಯಾಪರೋನಸ್ಕೋಪಿ ಮಯೋಕ್ಟಮಿ ಮೂಲಕ ತೆಗೆಯಬಹುದು. ಗರ್ಭಿಣಿ ಇದ್ದಾಗ ಫ್ರೈಬ್ರಾಯಿಡ್ ಗಡ್ಡೆ ಹೆಚ್ಚಾಗಿ ಬೆಳೆಯಬಹುದು ಆದರೆ, ಹೆದರುವ ಅಗತ್ಯವಿಲ್ಲ. ವೈದ್ಯರನ್ನು ಸಂಪರ್ಕಿಸಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯಬಹುದು. ಹಾಗಾಗಿ ಫ್ರೈಬ್ರಾಯಿಡ್ ಗಡ್ಡೆ ಬಗ್ಗೆ ಭಯ ಆತಂಕ ಅನಗತ್ಯ.

– ಡಾ. ರಮೇಶ್

ಆಲ್ಟಿಯಸ್ ಹಾಸ್ಪಿಟಲ್

Write A Comment