”ನಿಮ್ಮ ಪಾದಗಳ ಮೇಲೆ ದೃಢವಾಗಿರಿ, ಮಂಡಿಗಳ ಮೇಲಲ್ಲ” ಸಾರ್ವಜನಿಕ ಕಾರ್ಯಕ್ರಮ
ಜುಬೈಲ್, ಫೆ. 29: ಭಾರತ ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ ಅಸಹಿಷ್ಣುತೆ, ಅರಾಜಕತೆ, ಅಸಮಾನತೆಯ ವಿರುದ್ಧ ಪ್ರತಿಯೊಬ್ಬ ನಾಗರಿಕನೂ ತನ್ನ ಪಾದದ ಮೇಲೆ ದೃಢವಾಗಿ ನಿಂತು ಹೋರಾಟ ನಡೆಸಬೇಕಾದ ಅಗತ್ಯ ಇದೆ. ಹೋರಾಟದ ರಾಜಕೀಯ ನಡೆಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಾಗರಿಕರ ಹೋರಾಟಕ್ಕೆ ನೇತೃತ್ವ ನೀಡುತ್ತಿದೆ. ದೇಶದಲ್ಲಿ ಜಾತ್ಯತೀತ ಸಂವಿಧಾನವಿದ್ದು ಪ್ರಜಾಸತ್ತಾತ್ಮಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ. ಫ್ಯಾಶಿಷ್ಟ್ ಶಕ್ತಿಗಳ ಎದುರು ಯಾರೂ ಮಂಡಿಯೂರಬೇಕಾದ ಅಗತ್ಯವಿಲ್ಲ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಕರೆ ನೀಡಿದರು.
ಅವರು ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಜುಬೈಲ್ ಕುಕ್ಸೋನ್ ಸಭಾಂಗಣದಲ್ಲಿ ನಡೆದ ”ನಿಮ್ಮ ಪಾದಗಳ ಮೇಲೆ ದೃಢವಾಗಿರಿ, ಮಂಡಿಗಳ ಮೇಲಲ್ಲ” ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಪೊರೇಟ್ ಶಕ್ತಿಗಳು ಮತ್ತು ಫ್ಯಾಶಿಷ್ಟ್ ಶಕ್ತಿಗಳು ಒಂದಾಗಿ ಆಡಳಿತ ನಡೆಸುತ್ತಿವೆ. ಇದು ಜನಸಾಮಾನ್ಯರ ತಿನ್ನುವ, ಮಾತನಾಡುವ, ನ್ಯಾಯ ಕೇಳುವ ಹಕ್ಕನ್ನೇ ಕಸಿದುಕೊಂಡಿದೆ. ದಲಿತರು, ಅಲ್ಪಸಂಖ್ಯಾತರು, ಪ್ರಗತಿಪರರು, ಹಿಂದುಳಿದ ವರ್ಗಗಳು ಏಕಕಾಲಕ್ಕೆ ಪ್ರಭುತ್ವದ ದೌರ್ಜನ್ಯಕ್ಕೆ ಒಳಗಾಗಿವೆ. ಇದು ಸರ್ವಾಧಿಕಾರಿ ಆಡಳಿತದ ಸ್ಪಷ್ಟ ಲಕ್ಷಣವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನರಿಗೆ ಸ್ಥೈರ್ಯ, ಧೈರ್ಯ ತುಂಬುವ ಕೆಲಸವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಹಮ್ಮಿಕೊಂಡಿದೆ ಎಂದು ಇಲ್ಯಾಸ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸಲೀಂ ದಾವಣಗೆರೆ ಮಾತನಾಡಿ, ಐಎಸ್ಎಫ್ ಅನಿವಾಸಿ ಭಾರತೀಯರಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಿದ್ದು, ಅನಿವಾಸಿಗರು ವೇದಿಕೆಯೊಂದಿಗೆ ಕೈಜೋಡಿಸುವಂತೆ ಕೋರಿದರು.
ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿಯ ಅಧ್ಯಕ್ಷ ವಾಸೀಮ್ ಅಹ್ಮದ್, ಐಎಸ್ಎಫ್ ಜುಬೈಲ್ ಅಧ್ಯಕ್ಷ ಸಲೀಂ ಉಡುಪಿ, ಇಂಡಿಯಾ ಫ್ರಟರ್ನಿಟಿ ಫೋರಂ ಈಸ್ಟರ್ನ್ ಪ್ರೊವಿನ್ಸ್- ಕರ್ನಾಟಕ ಚಾಪ್ಟರ್ ಅಧ್ಯಕ್ಷ ಅಶ್ರಫ್ ಕೂಳೂರು ಮುಂತಾದವರು ಉಪಸ್ಥಿತರಿದ್ದರು.
ಸೋಶಿಯಲ್ ಫೋರಂ ಜುಬೈಲ್ ಸಮಿತಿ ಸದಸ್ಯ ಅಬ್ದುಲ್ ಸಮತ್ ಸ್ವಾಗತಿಸಿದರು. ಸನಾವುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಸಲೀಂ ಉಡುಪಿ ಧನ್ಯವಾದ ಸಲ್ಲಿಸಿದರು.