ಬೆಂಗಳೂರು: ಜನತೆಯ ಒತ್ತಡ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರ ಮನವಿಗೆ ಮಣಿದಿರುವ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ಕೂಡ್ಲಿಗಿಗೆ ಡಿವೈಎಸ್ಪಿಯಾಗಿ ಮರುನೇಮಕ ಮಾಡಿ ಆದೇಶ ಹೊರಡಿಸಿದೆ.
ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರಿಗೆ ತೀವ್ರ ಮುಖಭಂಗವಾಗಿದ್ದು, ಎಸ್ ಪಿ ಅನುಪಮಾ ಶೆಣೈ ವರ್ಗಾವಣೆಯನ್ನು ರದ್ದುಗೊಳಿಸಿರುವ ಸರ್ಕಾರ ಕೂಡ್ಲಿಗಿ ಡೈವೈಎಸ್ಪಿಯಾಗಿ ಮರುನೇಮಕ ಮಾಡಿ ಆದೇಶ ಹೊರಡಿಸಿದೆ.
ವಿಜಯಪುರದ ಇಂಡಿಗೆ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಕೂಡ್ಲಿಗಿ ಜನತೆ ಪ್ರತಿಭಟನೆ ನಡೆಸಿದ್ದು, ಬಂದ್ ಗೆ ಕರೆ ನೀಡಿದ್ದರು.
ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಫೋನ್ ಕರೆ ಸ್ವೀಕರಿಸದ ಕಾರಣಕ್ಕೆ ಐಪಿಎಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ವಿಜಯಪುರದ ಇಂಡಿಗೆ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಅಲ್ಲಿ ಅಧಿಕಾರ ಸ್ವೀಕರಿಸುವ ಮೊದಲೇ ಅವರಿಗೆ 15 ದಿನಗಳ ಕಾಲ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚನೆ ನೀಡಲಾಗಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
ಅನುಪಮಾ ಶೆಣೈ ಪರ ನಿಂತ ಮಾಜಿ ಸಂಸದೆ ರಮ್ಯಾ
ಇನ್ನೊಂದೆಡೆ ಅನುಪಮಾ ಶೆಣೈ ಅವರನ್ನು ಮತ್ತೆ ಕೂಡ್ಲಿಗಿ ಡಿವೈಎಸ್ಪಿಯಾಗಿ ಮರುನೇಮಕ ಮಾಡುವಂತೆ ಮಾಜಿ ಸಂಸದೆ ರಮ್ಯಾ ಅವರು ಗೃಹ ಸಚಿವ ಡಾ.ಜಿ ಪರಮೇಶ್ವರ ಅವರೊಂದಿಗೆ ಮಾತನಾಡಿದ್ದು, ಅನುಪಮಾ ಅವರನ್ನು ಮರು ವರ್ಗಾವಣೆ ಮಾಡಿ ಕೂಡ್ಲಿಗಿಗೆ ಮತ್ತೆ ಡಿವೈಎಸ್ಪಿಯಾಗಿ ನೇಮಕ ಮಾಡುವ ಭರವಸೆ ನೀಡಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದರು. ಇದಾದ ಕೆಲ ಗಂಟೆಗಳ ನಂತರ ಶೆಣೈ ಅವರ ವರ್ಗಾವಣೆ ಆದೇಶದ ಬಗ್ಗೆ ಅಧಿಕೃತ ಹೇಳಿಕೆ ಪ್ರಕಟವಾಗಿದೆ.