ಕುಂದಾಪುರ: ತಾಲೂಕಿನ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆರು ತಿಂಗಳ ಅವಧಿಯಲ್ಲಿ ಮತ್ತೆ ಎರಡನೇ ಬಾರಿಗೆ ಕಳ್ಳತನ ನಡೆದಿದ್ದು ಸಾರ್ವಜನಿಕರು ಹಾಗೂ ದೇವಳದ ಭಕ್ತರನ್ನು ಆತಂಕಕ್ಕೀಡು ಮಾಡಿದೆ.
ದೇವಳದಲ್ಲಿ ಸೋಮವಾರ ತಡರಾತ್ರಿ ಕಳ್ಳತನ ನಡೆದಿದ್ದು, ಬೆಳ್ಳಿಯ ಮುಖವಾಡ, 2 ಬೆಳ್ಳಿ ಕೊಡೆಗಳು, 2ಚಿನ್ನದ ಮೂಗೂತಿ, ಚಿನ್ನದ ಕರಿಮಣಿ, ಸರ, ಹಾಗೂ ಹುಂಡಿಯನ್ನು ಕಳವುಗೈಯಲಾಗಿದೆ. ಲಕ್ಷಾಂತರ ಮೌಲ್ಯದ ನಗ ನಗದು ಇದಾಗಿದ್ದು ಹುಂಡಿ ಹಾಗೂ ಸಣ್ಣ ಕರಿಮಣಿ ಸರವೊಂದು ದೇವಳದ ಎದುರುಗಡೆಯ ಪೊದೆ ಸಮೀಪ ಪತ್ತೆಯಾಗಿದೆ.

ಹೌದು.. ಕೆಲವು ತಿಂಗಳ ಹಿಂದಷ್ಟೇ ತಾಲೂಕು ಆಡಳಿತಕ್ಕೆ ಒಳಪಟ್ಟಿದ್ದ ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಕಳೆದ ಆಗಸ್ಟ್ 14ರ ರಾತ್ರಿ ಕನ್ನ ಹಾಕಿದ ಕಳ್ಳರು 50ಲಕ್ಷಕ್ಕೂ ಅಧಿಕ ನಗ-ನಗದು ದೋಚಿ ಪರಾರಿಯಾಗಿದ್ದರು. ಖುದ್ದು ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ ಅವರು ಶ್ರೀ ದೇವಳಕ್ಕೆ ಆಗಮಿಸಿ ಇಲ್ಲಿನ ಭದ್ರತೆ ಬಗ್ಗೆ ಗಮನ ವಹಿಸುವಂತೆಯೂ ಸೂಚಿಸಿದ್ದರು ಅಲ್ಲದೇ ಇವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸರು ಕಳ್ಳತನ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದ್ದರು. ದೇವಳದಲ್ಲೂ ಸಿ.ಸಿ. ಕ್ಯಾಮೆರಾ ಹಾಗೂ ಅಲರಾಂ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆರು ತಿಂಗಳ ಅವಧಿಯಲ್ಲಿ ಮತ್ತೆ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕಳ್ಳತನ ನಡೆದಿರುವುದು ಸದ್ಯ ಜನರಲ್ಲಿ ಭೀತಿ ಮೂಡಿಸಿದೆ, ದೇವಳದಲ್ಲಿದ್ದ ಅಲರಾಂ ಕೂಡ ಸದ್ದು ಮಾಡದಿರುವುದು ಹಾಗೂ ದೇವಳಕ್ಕೊಂದು ಭದ್ರತೆ ಕಲ್ಪಿಸದಿರುವುದರ ಕುರಿತು ಜನರು ತಮ್ಮ ಅಸಮಾಧಾವನ್ನು ಹೊರಹಾಕಿದ್ದಾರೆ. ತಡರಾತ್ರಿ ಕನ್ನ ಹಾಕಿದ ವೇಳೆ ದೇವಳದ ಒಳಗಡೆಯಿದ್ದ ಅನ್ನದಾನದ ಹುಂಡಿ, ಗರ್ಭಗುಡಿಯೊಳಗೆ ದೇವರ ಮೇಲಿದ್ದ ಬೆಳ್ಳಿಯ ಆಭರಣಗಳನ್ನು ಕಳವುಗೈಯಲಾಗಿದೆ. ದೇವಸ್ಥಾನದ ಮುಖ್ಯ ದ್ವಾರದ ಚಿಲಕ, ಒಳಬಾಗಿಲಿನ ಚಿಲಕ ಹಾಗೂ ಗರ್ಭಗುಡಿ ಸೇರಿದಂತೆ ಮೂರು ಬಾಗಿಲುಗಳ ಚಿಲಕವನು ಮುರಿದು ಒಳಪ್ರವೇಶಿಸಿ ಈ ಕಳ್ಳತನ ಮಾಡಲಾಗಿದೆ.
ಸಿ.ಸಿ. ಕ್ಯಾಮೆರಾದಲ್ಲಿ ಆರೋಪಿ ಸೆರೆ
ಇನ್ನು ಕಳೆದ ಬಾರಿ ಕಳ್ಳತನದ ತರುವಾಯ ದೇವಸ್ಥಾನಕ್ಕೆ ಸಿ.ಸಿ. ಟಿವಿ ಅಳವಡಿಸಲಾಗಿದ್ದು ಅದರಲ್ಲಿ ಕಳ್ಳನೊಬ್ಬನ ಚಿತ್ರ ಸೆರೆಯಾಗಿದೆ. ಅಂದಾಜು 45-50 ವರ್ಷ ಪ್ರಾಯದ ವ್ಯಕ್ತಿಯೋರ್ವನ ಮುಖ ಗೋಚರಿಸುತ್ತಿದ್ದು ಆತನೊಬ್ಬನೇ ಬಂದು ಕಳ್ಳತನ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನು ದೇವಸ್ಥಾನದ ಎದುರಿಗಿನ ಜಾಗವೊಂದರಲ್ಲಿದ್ದ ಕಬ್ಬಿಣದ ರಾಡುಗಳನ್ನು ಮುರಿದು ಅದನ್ನು ತನ್ನ ಕೃತ್ಯಕ್ಕಾಗಿ ಬಳಸಿರುವುದು ಕಂಡುಬಂದಿದೆ.
ಒಬ್ಬನೇ ಕಳ್ಳ?
ಸಿಸಿ. ಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಗಮನಿಸಿದರೇ ಓರ್ವನೇ ಈ ಕಳ್ಳತನ ನಡೆಸಿದ್ದಾನೆನ್ನಲಾಗಿದ್ದು ಆತ ಯಾವುದೇ ವಾಹನವನ್ನು ಉಪಯೋಗಿಸದೇ ನಡೆದು ಬಂದಿರುವುದು ತಿಳಿದುಬಂದಿದೆ. ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸುವಾಗ ದೇವಳದ ಹಿಂಭಾಗದಿಂದ ರಸ್ತೆ ಮೂಲಕ ಕಂಡ್ಲೂರು ದಾರಿಯತ್ತ ಸಾಗಿ ಬಳಿಕ ಗದ್ದೆ ಹಾಗೂ ಹಾಡಿ ಪ್ರದೇಶದಲ್ಲಿ ಕಳ್ಳ ಕಾಲ್ನಡಿಗೆ ಮೂಲಕ ಸಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಹಾವು ಬಂದರೇ ಕಳ್ಳತನವಾಗುತ್ತೆ!?
ಇನ್ನು ದೇವಳದ ಬಗ್ಗೆ ನಂಬಿಕೆ ಇಟ್ಟವರು ಹಾಗೂ ದೇವಳಕ್ಕೆ ಸಂಭಂದಿಸಿದವರು ಹೇಳುವ ಪ್ರಕಾರ ಕಳೆದ ಬಾರಿ ಕಳ್ಳತನವಾಗುವ ಮೂರು ದಿನದ ಹಿಂದೆ ನಾಗರ ಹಾವು ದೇವಳಕ್ಕೆ ಬಂದಿತ್ತು ಎನ್ನಲಾಗಿದೆ, ಮೊನ್ನೆ ಮೂರು ದಿನದ ಹಿಂದೆಯೂ ಹಾವೊಂದು ಬಂದಿದ್ದು ಆಗಲೇ ದೇವಳಕ್ಕೆ ಸಂಬಂದಪಟ್ಟವರು ಇದು ಅಶುಭ ದ ಮುನ್ಸೂಚನೆ ಎಂದುಕೊಂಡು ಜಾಗ್ರತೆ ಮಾಡಿಕೊಂಡಿದ್ದರೂ ಕೂಡ ಕಳ್ಳತನ ನಡೆದೇ ಹೋಗಿದೆ. ಇನ್ನು ದೇವಳದ ಇತಿಹಾಸದಲ್ಲಿ ಹತ್ತು ವರ್ಷಗಳ ಹಿಂದೊಮ್ಮೆ ಕಳ್ಳತನವಾದದ್ದು ಹೊರತುಪಡಿಸಿ ಈ ಆರು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಕಳ್ಳತನ ಇದಾಗಿದೆ.
ಭದ್ರತಾ ಸಿಬ್ಬಂದಿ ನೇಮಿಸಿ
ಸ್ಥಳಕ್ಕೆ ಬಂದ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರ ಬಳಿ ದೇವಳಕ್ಕೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿ, ಇಂತಹಾ ಘಟನೆಗಳಿಗೆ ಕಡಿವಾಣ ಹಾಕಿರಿ ಎಂದು ಸ್ಥಳೀಯರು ಒತ್ತಾಯಿಸಿದರು. ಈ ಬಗ್ಗೆ ತಹಶಿಲ್ದಾರ್ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಪೊಲೀಸರ ಭೇಟಿ,ಮುಂದುವರಿದ ತನಿಖೆ
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಕುಂದಾಪುರ ಠಾಣೆ ಉಪನಿರಿಕ್ಷಕ ನಾಸೀರ್ ಹುಸೇನ್. ಕ್ರೈಮ್ ವಿಭಾಗದ ಎಸ್.ಐ. ದೇವರಾಜ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.
ಚಿತ್ರ,ವರದಿ- ಯೋಗೀಶ್ ಕುಂಭಾಸಿ