ಅಂತರಾಷ್ಟ್ರೀಯ

ನಾವು ನೀರು ಏಕೆ ಕುಡಿಯಬೇಕು…ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನೀರಿನ ಪಾತ್ರವೇನು ? ಇದನ್ನು ಓದಿ…

Pinterest LinkedIn Tumblr

Woman Drinking Water

ನೀರು ಮಾನವನ ಜೀವನದ ಅವಿಭಾಜ್ಯ ಅಂಗ. ಕುಡಿಯಲು, ದಿನಬಳಕೆಗೆ, ಮನುಷ್ಯನ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ನೀರು ಅವಶ್ಯವಾಗಿರದೆ ನಮ್ಮ ದೇಹ ಸದೃಢವಾಗಿರಲು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ.

ನಮ್ಮ ದೇಹದಲ್ಲಿ ಶೇಕಡಾ 60ರಿಂದ 70 ಭಾಗದಷ್ಟು ನೀರಿನ ಅಂಶ ಸೇರ್ಪಡೆಯಾಗಿರುತ್ತದೆ. ರಕ್ತದಲ್ಲಿ, ಮೂಳೆ, ಶ್ವಾಸಕೋಶ ಮತ್ತು ಮೆದುಳಿನಲ್ಲಿ ಸಹ ನೀರಿರುತ್ತದೆ. ದೇಹದಲ್ಲಿ ಉಷ್ಣತೆಯನ್ನು ಸಮ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು, ಪೋಷಕಾಂಶಗಳು ದೇಹದ ಎಲ್ಲಾ ಅಂಗಗಳಿಗೂ, ಜೀವಕಣಗಳಿಗೂ ತಲುಪಲು ನೀರು ಸಹಾಯ ಮಾಡುವುದಲ್ಲದೆ, ಆಮ್ಲಜನಕವನ್ನು ನಮ್ಮ ದೇಹದ ಕೋಶಗಳಿಗೆ ಮುಟ್ಟಿಸಿ ದೇಹದಲ್ಲಿರುವ ಅನಪೇಕ್ಷಿತ ವಸ್ತುಗಳನ್ನು ಹೊರಹಾಕುವುದರಲ್ಲಿ ನೆರವಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ನಮ್ಮ ದೇಹದಿಂದ ಮೂತ್ರ, ಬೆವರಿನ ಮೂಲಕ ಹೊರಹೋಗುತ್ತದೆ.

ಎಷ್ಟು ನೀರು ಅತ್ಯಗತ್ಯ: ನಮ್ಮ ದೇಹದ ಪ್ರತಿ ಕಣಕ್ಕೂ ನೀರಿನ ಅಂಶ ತಲುಪಲು ನಾವು ಕಡ್ಡಾಯವಾಗಿ ನೀರು ಕುಡಿಯಲೇ ಬೇಕು. ಒಬ್ಬ ಮನುಷ್ಯನಿಗೆ ದಿನದಲ್ಲಿ ಕಡಿಮೆಯೆಂದರೆ ಎರಡು ಲೀಟರ್ ನೀರು ಬೇಕು. ನೀರು ಮಾನವನ ತೂಕಕ್ಕೆ ಅನುಗುಣವಾಗಿರುತ್ತದೆ. ಮನುಷ್ಯನ ತೂಕದ ಅರ್ಧದಷ್ಟು ನೀರು ದೇಹದಲ್ಲಿ ಇರಬೇಕೆನ್ನುತ್ತದೆ ವೈದ್ಯಕೀಯ ಅಧ್ಯಯನ. ಅಷ್ಟು ನೀರನ್ನು ಒಮ್ಮೆಯೇ ಕುಡಿಯಲು ಸಾಧ್ಯವಾಗುವುದಿಲ್ಲ. ಗಂಟೆಗೊಮ್ಮೆ ನೀರು ಕುಡಿಯುತ್ತಲೇ ಇರಬೇಕು.

ಗರ್ಭಿಣಿಯರಂತೂ ನೀರು ಕುಡಿದಷ್ಟು ಅವರ ಆರೋಗ್ಯಕ್ಕೆ ಉತ್ತಮ. ಮನುಷ್ಯನಿಗೆ ನೀರು, ಶೇಕಡಾ 20 ಭಾಗ ತಿನ್ನುವ ಆಹಾರದಿಂದ ಸಿಗುತ್ತದೆ. ನಮಗೆ ಬಾಯಾರಿಕೆಯಾಗುವುದು ನೀರಿನ ಅಗತ್ಯದ ಲಕ್ಷಣ. ಮನುಷ್ಯನ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಅನೇಕ ಕಾಯಿಲೆಗಳು ಕಂಡುಬರುತ್ತದೆ. ತಲೆನೋವು, ಮಂಡಿನೋವು, ಬೆನ್ನುನೋವು, ಮೈ ಕೈ ನೋವು, ಕರುಳು ಬೇನೆ, ಉರಿಮೂತ್ರ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಕುಡಿದ ನೀರು ಕಲ್ಮಷವಾದಾಗ ಕಾಮಾಲೆ, ಹಳದಿ ಕಾಯಿಲೆಯಂಥ ರೋಗಗಳು ಕಾಣಿಸಿಕೊಳ್ಳುತ್ತವೆ. ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು ನೀರಿನ ಅಗತ್ಯತೆ ಲಕ್ಷಣ.

ಯಾವಾಗ ಕುಡಿಯಬಾರದು: ನೀರು ಕುಡಿಯಲು ಸರಿಯಾದ ಕ್ರಮವಿರುತ್ತದೆ. ಆಹಾರ ತೆಗೆದುಕೊಳ್ಳುವಾಗ ಕಡಿಮೆ ನೀರು ಸೇವಿಸುವುದು ಉತ್ತಮ. ಊಟದ ಸ್ವಲ್ಪ ಹೊತ್ತು ಮೊದಲು ಹಾಗೂ ಊಟವಾದ ನಂತರ ನೀರು ಕುಡಿಯುವುದು ಒಳ್ಳೆಯದು. ಆಹಾರ ತೆಗೆದುಕೊಳ್ಳುವಾಗ ನೀರು ಕುಡಿದರೆ ಹೊಟ್ಟೆಯಲ್ಲಿ ಉತ್ಪತ್ತಿಗೊಳ್ಳುವ ಆಮ್ಲಗಳ ಶಕ್ತಿ ಕಮ್ಮಿಯಾಗಿ ಆಹಾರ ಜೀರ್ಣವಾಗಲು ಕಷ್ಟವಾಗುತ್ತದೆ. ಹೊರಗಡೆ ಹೋದ ಸಂದರ್ಭದಲ್ಲಿ ಬಾಯಾರಿಕೆಯಾದಾಗ ಸಿಹಿ ತಂಪು ಪಾನೀಯಗಳನ್ನು ಸಾಮಾನ್ಯವಾಗಿ ಕುಡಿಯುತ್ತಾರೆ . ಆದರೆ ಇದು ಹಾನಿಕರ. ಇದು ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆಯೇ ಹೊರತು ಪೌಷ್ಠಿಕಾಂಶವನ್ನು ಒದಗಿಸುವುದಿಲ್ಲ. ಬಾಯಾರಿದಾಗ ನೀರು ಬಿಟ್ಟರೆ ಎಳನೀರು ಉತ್ತಮ ಎನ್ನುತ್ತಾರೆ ಆಯುರ್ವೇದ ವೈದ್ಯ ಡಾ. ಸತ್ಯನಾರಾಯಣ. ಬಾಯಾರಿದಾಗ ಎಲ್ಲ ದ್ರವ ಪದಾರ್ಥಗಳಿಗಿಂತಲೂ ಮಾನವನ ದೇಹಕ್ಕೆ ನೀರು ಉತ್ತಮ. ನಾವು ಬಹಳ ಬಳಲಿದಾಗ ನೀರಿನ ಜೊತೆ ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿ ಜಗಿದರೆ ದೇಹ ಉಲ್ಲಸಿತವಾಗುತ್ತದೆ.

ಕ್ರೀಡಾಪಟುಗಳು ಆಯಾಸಗೊಂಡಾಗ ಖನಿಜಾಂಶಯುಕ್ತ ನೀರನ್ನು ಕುಡಿಯುತ್ತಾರೆ, ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಣ್ಣು ಮತ್ತು ತರಕಾರಿ ಜ್ಯೂಸ್‍ಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಮತ್ತು ಟೀ ಸೇವನೆ ಹಾನಿಕರ.

ನೀರನ್ನು ಬಳಸುವ ವಿಧಾನ: ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆದು ಖಾಲಿ ಹೊಟ್ಟೆಗೆ ನೀರು ಕುಡಿದರೆ ಒಳ್ಳೆಯದು. ಹೊಟ್ಟೆ ಖಾಲಿಯಿರುವುದರಿಂದ ನೀರು ಕರುಳು ಸೇರಿ ಮಲ ವಿಸರ್ಜನೆಗೆ ನೆರವಾಗುತ್ತದೆ. ಹೊರಗಡೆ ಎಲ್ಲಿಗೆ ಹೋಗುವುದಿದ್ದರೂ ಕೈಯಲ್ಲಿ ಒಂದು ನೀರಿನ ಬಾಟಲಿ ಹಿಡಿದುಕೊಂಡು ಹೋಗುವುದು ಉತ್ತಮ. ಕಂಡಲ್ಲಿ ಸಿಕ್ಕಿದ ನೀರು ಕುಡಿಯುವುದು ಸುರಕ್ಷತೆ ದೃಷ್ಠಿಯಿಂದ ಉತ್ತಮವಲ್ಲ. ಬೇಸಿಗೆ ಕಾಲದಲ್ಲಂತೂ ಕುಡಿಯುವ ನೀರಿನ ಬಳಕೆ ಬಗ್ಗೆ ತುಂಬಾ ಎಚ್ಚರಿಕೆಯಿಂದಿರಬೇಕು. ಕುದಿಸಿ ಆರಿಸಿದ ನೀರು ಉತ್ತಮ.

ವಾರಪೂರ್ತಿ ಆಹಾರ ಸೇವಿಸಿ ಒಂದು ದಿನ ಉಪವಾಸ ಮಾಡುವವರಿಗೆ ನೀರು ಶಕ್ತಿಮದ್ದು ಇದ್ದಂತೆ. ಪದೇ ಪದೇ ನೀರನ್ನು ಕುಡಿಯುತ್ತ ಬೇರೆ ಯಾವುದೇ ಆಹಾರ ಸೇವಿಸದಿದ್ದರೆ ಹೊಟ್ಟೆ ಸ್ವಚ್ಛವಾಗಿ ದೇಹವನ್ನು ಶುಭ್ರಗೊಳಿಸುತ್ತದೆ. ಹೀಗೆ ಸ್ವಚ್ಛ, ಶುದ್ಧ ನೀರು ಸೇವನೆ ನಮ್ಮ ಆರೋಗ್ಯದ ಕೀಲಿ ಕೈ.

Write A Comment