ಅಂತರಾಷ್ಟ್ರೀಯ

ಮಕ್ಕಳಿಗೆ ಹಲ್ಲು ಉಜ್ಜಿಸುವುದು ಕಷ್ಟವಾ?

Pinterest LinkedIn Tumblr

teeth1

ಬೆಳಗಿನ ಹೊತ್ತು ಅಪ್ಪ-ಅಮ್ಮ ಇಬ್ಬರಿಗೂ ಕಚೇರಿಗೆ ಹೋಗುವ ಆತುರ. ಅವರಿಗೇ ಬ್ರಶ್ ಮಾಡಲು ಪುರುಸೊತ್ತಿಲ್ಲ. ಮೂರರ ಪೋರನಿಗೆ ಹಲ್ಲು ಉಜ್ಜಿಸುವ ತಲೆ ಭಾರ ಬೇರೆ!. ಬೇಡ ಬೇಡ ಎಂದು ಓಡುವ ತುಂಟನನ್ನು ಹಿಡಿಯುವವರಾರು? ಪರಿಣಾಮ ಈಗಾಗಲೇ ಮುದ್ದುಮುಖದ ಮಗುವಿನ ಹಾಲು ಹಲ್ಲುಗಳು ಹಾಳು!

‘ಹಲ್ಲು ಬ್ರಶ್ ಮಾಡಬೇಕು ಅಂದ್ರೆ ಕೇಳೋದೇ ಇಲ್ಲ, ಬೈದೂ ಬೈದೂ ಸಾಕಾಗಿದೆ. ಏನು ಮಾಡೋದು?’ ಇದು ಪುಟ್ಟ ಮಕ್ಕಳಿರುವ ಪೋಷಕರ ದೂರು. ನಿಜವೇ, ಸದಾ ಚಟುವಟಿಕೆಯಿಂದ ಅಲ್ಲಿ-ಇಲ್ಲಿ ಕುಣಿದಾಡುವ ಮಕ್ಕಳಿಗೆ ದಿನಕ್ಕೆರಡು ಬಾರಿ ಗಂಭೀರವಾಗಿ ಒಂದೆಡೆ ನಿಂತು ಬ್ರಶ್ ಮಾಡು ಎಂದರೆ ಬೇಡ ಅನ್ನುವುದು ಸಹಜ,. ಹಾಗೆಂದು ಬ್ರಶ್ ಮಾಡುವುದೇ ಬೇಡ ಎಂದು ಬಿಡಲು ಸಾಧ್ಯವೇ?

ಖಂಡಿತಾ ಇಲ್ಲ. ಏಕೆಂದರೆ ಹಲ್ಲುಗಳನ್ನು ಬ್ರಶ್ ಮಾಡುವ ಸರಳ ಕ್ರಿಯೆಯಿಂದ ಹಲ್ಲು-ವಸಡುಗಳು ಆರೋಗ್ಯವಾಗಿರುತ್ತವೆ. ಹಾಗಾಗಿ ಬಾಲ್ಯದಿಂದಲೇ ಮಕ್ಕಳಿಗೆ ಬ್ರಶಿಂಗ್ ರೂಢಿಯಾಗಬೇಕು. ಹಾಗೆ ಮಾಡುವಲ್ಲಿ ಪೋಷಕರ ಪಾತ್ರ ಹಿರಿದಾದದ್ದು.

ಶಿಶುವಾಗಿದ್ದಾಗಲೇ ಆರಂಭ
ಮಗುವಿಗೆ ಹುಟ್ಟಿದಾಗ ಸಾಮಾನ್ಯವಾಗಿ ಯಾವುದೇ ಹಲ್ಲುಗಳಿರುವುದಿಲ್ಲ. ಆದರೂ ಕುಡಿಯುವ ಹಾಲು, ವಸಡುಗಳ ಮೇಲೆ ಶೇಖರಣೆಯಾಗುತ್ತದೆ. ಇದನ್ನು ತೆಗೆಯಲು ಪೋಷಕರು ತಮ್ಮ ತೋರುಬೆರಳಿಗೆ ಮೃದುವಾದ ಹತ್ತಿ ಬಟ್ಟೆಯನ್ನು ಸುತ್ತಿ ಮಗುವಿನ ವಸಡುಗಳನ್ನು ಶುಚಿಗೊಳಿಸಬೇಕು. ಹೀಗೆ ಮಾಡುವುದರಿಂದ ವಸಡುಗಳು ಆರೋಗ್ಯಕರವಾಗಿ ಇರುತ್ತವೆ. ಜತೆಗೇ ಮಗುವು ತೀರಾ ಸಣ್ಣಂದಿನಿಂದಲೇ ಬಾಯಿಯನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಹೊಂದಿಕೊಳ್ಳುತ್ತದೆ.

ಪೋಷಕರ ಮೇಲ್ವಿಚಾರಣೆ
ಸುಮಾರು ಆರು ತಿಂಗಳಾದಾಗ ಮಗುವಿನ ಬಾಯಲ್ಲಿ ಮೊದಲು ಹಾಲು ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಆ ಸಮಯದಿಂದಲೇ ಬ್ರಶ್‌ನ ಬಳಕೆ ಸೂಕ್ತ. ಮೃದುವಾದ ಎಳೆಗಳುಳ್ಳ, ಮಕ್ಕಳಿಗೆಂದೇ ವಿನ್ಯಾಸಗೊಳಿಸಲಾದ ವಿಶೇಷ ಬ್ರಶ್‌ಗಳನ್ನು ಉಪಯೋಗಿಸಬೇಕು. ಎರಡು ವರ್ಷದ ಮಗು ತನ್ನ ಬ್ರಶ್ ತಾನೇ ಹಿಡಿದುಕೊಂಡರೂ, ಕೈ-ಬಾಯಿ ಹೊಂದಾಣಿಕೆ ಏರ್ಪಟ್ಟು ಸರಿಯಾಗಿ ಬ್ರಶ್ ಮಾಡಲು ಏಳೆಂಟು ವರ್ಷವಾದರೂ ಬೇಕು. ಅಲ್ಲಿಯತನಕ ಪೋಷಕರ ಮೇಲ್ವಿಚಾರಣೆ – ನಿಗಾ ಬೇಕು.

ಹಿರಿಯರ ಅನುಕರಣೆ: ಇನ್ನೊಬ್ಬರನ್ನು ಅನುಕರಿಸುವ ಪ್ರವೃತ್ತಿ ಮಕ್ಕಳಲ್ಲಿ ಅತ್ಯಂತ ಸಹಜ. ಹೀಗಾಗಿ ಪೋಷಕರು, ಸಹೋದರ/ರಿಯರು ಮನೆಯಲ್ಲಿ ದಿನಕ್ಕೆರಡು ಬಾರಿ ತಪ್ಪದೇ ಬ್ರಶ್ ಮಾಡಿದಾಗ ಮಕ್ಕಳೂ ಅದನ್ನು ಅನುಕರಿಸುತ್ತಾರೆ. ‘ಸಮಯವಿಲ್ಲ, ಲೇಟಾಯಿತು, ಸುಸ್ತಾಗಿದೆ, ಒಂದಿನ ಮಾಡದಿದ್ರೆ ಏನೂ ಆಗಲ್ಲ’ ಎಂಬ ನೆಪ ನೀಡಿ ಹಿರಿಯರು ಬ್ರಶಿಂಗ್ ಮಾಡದಿರುವುದು ಸರಿಯಲ್ಲ. ಪೋಷಕರು ಹಾಗೆ ಮಾಡಿದಾಗ ಮಕ್ಕಳಿಗೆ ತಾವೂ ಹಾಗೆ ಮಾಡಬಹುದು ಎಂಬ ಸಂದೇಶ ಸಿಗುತ್ತದೆ.

ಬ್ರಶಿಂಗ್ ಎಂಬ ಆಟ
ಮಗುವಿಗೆ ಯಾವುದೇ ವಿಷಯವನ್ನಾದರೂ ಗಂಭೀರ – ಅತಿ ಶಿಸ್ತಿನಿಂದ ಹೇಳಿದಾಗ ಅದು ನೀರಸವಾಗಿ, ಬೇಡವಾಗುತ್ತದೆ. ಅದೇ ಕುತೂಹಲ ಕೆರಳಿಸುವ, ಸ್ವಾರಸ್ಯಕರ ಆಟವನ್ನಾಗಿ ಮಾಡಿದಾಗ ಬೇಗ ಕಲಿಯುತ್ತದೆ. ಉದಾಹರಣೆಗೆ, ಹಾಡು…
ಬ್ರಶ್ ಮಾಡುವ ಮುಂಚೆ ಪುಟ್ಟ ಹಾಡು ಹೇಳಿ ಹಲ್ಲುಜ್ಜುವ ಹಾಗೆ ಅಭಿನಯಿಸಿದರೆ ಮಕ್ಕಳಿಗೆ ಬಲು ಮೋಜು.

‘ಹಲ್ಲು ಬೆಳ್ಳಗೆ ಬೇಕಪ್ಪ
ಎರಡು ಸಲ ಉಜ್ಜಪ್ಪ
ಮೂರು ನಿಮಿಷ ಸಾಕಪ್ಪಾ’
ಕತೆ ಹೇಳಿ…

ಕತೆ ಎಂದೊಡನೆ ಮಕ್ಕಳ ಕಿವಿ ನಿಮಿರುತ್ತದೆ. ಆದ್ದರಿಂದ ಬ್ರಶಿಂಗ್ ಕೂಡಾ ಹೇಗೆ ಒಳ್ಳೆಯದು ಅಂತ ಕತೆ ಮೂಲಕ ಹೇಳಿದರೆ ಮಕ್ಕಳ ಮನಸ್ಸಿಗೆ ನಾಟುತ್ತದೆ.

ನಗು ರಾಜ್ಯದ ಜನರ ಮೇಲೆ ಹುಳುಕು ಪ್ರಾಣಿಗಳ ದಾಳಿ. ಅವರನ್ನು ಓಡಿಸಲು ನೂರಾರು ಸೈನಿಕರು ಬ್ರಶ್‌ನಲ್ಲಿ ಕುಳಿತು ಎರಡು ನಿಮಿಷ ಚೆನ್ನಾಗಿ ತಿಕ್ಕಿದರು. ಅಷ್ಟೇ, ಎಲ್ಲಾ ಪ್ರಾಣಿ ನಾಶ.

ಬಹುಮಾನ ಕೊಡಿ
ಸರಿಯಾಗಿ ಬ್ರಶ್ ಮಾಡಿದಾಗ ಮೆಚ್ಚುಗೆಯ ಮಾತು, ಹೊಗಳಿಕೆ ಸಣ್ಣ-ಪುಟ್ಟ ಬಹುಮಾನ ಕೊಡಿ. (ಸಿಹಿ ತಿಂಡಿ, ಚಾಕೋಲೇಟ್ ಅಲ್ಲ, ಹೊಸ ಆಟ – ಕತೆ, ಪುಸ್ತಕ ಹೀಗೆ)

ಆಯ್ಕೆ: ಮಗುವಿಗೆ ತನಗೆ ಬೇಕಾದ ಬಣ್ಣ- ವಿನ್ಯಾಸದ ಬ್ರಶ್, ಇಷ್ಟವಾಗುವ ರುಚಿಯ ಪೇಸ್ಟ್ ಆಯ್ಕೆ ಮಾಡುವ ಅವಕಾಶ ಇರಲಿ. ಖುಷಿಯಿಂದ ಆರಿಸಿ ಸಂತೋಷದಿಂದ ಬ್ರಶ್ ಮಾಡುತ್ತಾರೆ.

ಈ ಎಲ್ಲಾ ವಿಧಾನ ಅನುಸರಿಸಿದಾಗ ಬ್ರಶಿಂಗ್ ಮಾಡಿಸುವುದು ಮಕ್ಕಳಿಗೆ ಖಂಡಿತ ಕಷ್ಟವಲ್ಲ.
ಬ್ರಶಿಂಗ್ ಮಾಡಿಸುವಾಗ ಪುಟ್ಟ ಮಗುವಾಗಿದ್ದರೆ ತೊಡೆಯ ಮೇಲೆ ಕೂರಿಸಿಕೊಂಡು, ದೊಡ್ಡ ಮಕ್ಕಳಾದರೆ ಹಿಂದೆ ನಿಂತು ಬ್ರಶ್ ಮಾಡಿಸಿ.

ಮಾಡಿಸುವ ನಿಮಗೆ ಮತ್ತು ಮಗುವಿಗೆ ಸ್ಪಷ್ಟವಾಗಿ ಕಾಣಿಸುವ ಹಾಗೆ ಮುಂದೆ ಬೆಳಕಿರುವ, ದೊಡ್ಡ ಕನ್ನಡಿ ಇರಲಿ.
ಚಿಕ್ಕ ಮಕ್ಕಳಿಗೆ ಅಕ್ಕಿ ಕಾಳಿನಷ್ಟು ಪೇಸ್ಟ್/ ದೊಡ್ಡವರಿಗೆ (ಆರು ವರ್ಷದ ನಂತರ) ಬಟಾಣಿ ಕಾಳಿನಷ್ಟು ಪೇಸ್ಟ್ ಹಾಕಿ.
ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮುನ್ನ ಹೀಗೆ ದಿನಕ್ಕೆರಡು ಬಾರಿ ಬ್ರಶ್ ಮಾಡಿಸುವುದು ಕಡ್ಡಾಯ.

ಕೆಳಗಿನ ಹಿಂದಿನ ಹಲ್ಲುಗಳಿಂದ ಆರಂಭಿಸಿ ಎಲ್ಲಾ ಹಲ್ಲುಗಳ ಭಾಗಗಳನ್ನು (ಹಿಂಭಾಗ, ಮುಂಭಾಗ, ಅಗಿಯುವ ಮೇಲ್ಮೈ) ಬ್ರಶ್ ಮಾಡಿಸಿ.
ಚಿಕ್ಕ ಚಿಕ್ಕ ವರ್ತುಲಗಳಲ್ಲಿ ಬ್ರಶ್ ಚಾಲಿಸಿ ಹಲ್ಲನ್ನು ಶುಚಿಗೊಳಿಸಿ.

ವಸಡುಗಳನ್ನು ಬ್ರಶ್ ಆದ ಕೂಡಲೇ ಬೆರಳಿನಿಂದ ಮಸಾಜ್ ಮಾಡಿ. ಹಾಗೇ ನಾಲಿಗೆಯನ್ನು ಆಗಾಗ್ಗೆ ಸ್ವಚ್ಛಗೊಳಿಸಿ.
ಬ್ರಶ್ ಆದ ನಂತರ, ತಿಂಡಿ – ಊಟದ ನಂತರ ಶುದ್ಧ ನೀರಿನಿಂದ ಬಾಯಿ ತೊಳೆಸಿ.

ಪ್ರತಿ ಮೂರು ತಿಂಗಳಿಗೊಮ್ಮೆ ಮಗುವಿನ ಬ್ರಶ್ ಬದಲಾಯಿಸಿ. ಹೀಗೆ ನಿಯಮಿತವಾಗಿ ಬ್ರಶ್ ಮಾಡಿಸುವುದರ ಜತೆ ಮಗುವಿನ ಮೊದಲ ಹುಟ್ಟುಹಬ್ಬದ ಒಳಗೆ ದಂತವೈದ್ಯರನ್ನು ಭೇಟಿಯಾಗಿ ಬಾಯಿಯ ಪರೀಕ್ಷೆ ಮಾಡಿಸಿ ಸಲಹೆ ಪಡೆಯಬೇಕು. ಬ್ರಶ್ ಮಾಡುವುದು ದಂತ ಮತ್ತು ಸಾಮಾನ್ಯ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ.

ಮಕ್ಕಳಿಗೆ ಬ್ರಶಿಂಗ್ ಮಾಡಿಸುವಾಗ ರೂಢಿ ಮಾಡಲು ಆ ಕ್ರಿಯೆಯನ್ನು ಆಕರ್ಷಕವನ್ನಾಗಿ ಮಾಡಬೇಕು. ಮಗುವಿನ ವಯಸ್ಸು, ಸ್ವಭಾವ, ಆಸಕ್ತಿಗೆ ಅನುಗುಣವಾಗಿ ಪೋಷಕರು ಯಾವುದೇ ವಿಧಾನವನ್ನಾದರೂ ಅನುಸರಿಸಬಹುದು. ಆದರೆ ಎಲ್ಲದರ ಗುರಿ ಮಕ್ಕಳು ಸ್ವತಂತ್ರರಾಗಿ ಸರಿಯಾಗಿ ಬ್ರಶ್ ಮಾಡುವುದರ ಜತೆ ಅದರ ಮಹತ್ವವನ್ನು ಅರಿತು ಪಾಲಿಸುವುದು. ಮಕ್ಕಳ ಆರೋಗ್ಯದ ಕಾಳಜಿ, ಸತತ ಪ್ರಯತ್ನ ಮತ್ತು ತಾಳ್ಮೆ ಎಲ್ಲವು ಬ್ರಶಿಂಗ್ ಕಲಿಸುವಾಗ ಬೇಕೇ ಬೇಕು.

ಡಾ. ಕೆ.ಎಸ್. ಚೈತ್ರಾ

Write A Comment