ಅಂತರಾಷ್ಟ್ರೀಯ

ಬಾಯಿ ದುರ್ವಾಸನೆ ನಿವಾರಣೆ ಹೇಗೆ?

Pinterest LinkedIn Tumblr

1

ಬಾಯಿಯಿಂದ ದುರ್ವಾಸನೆ ಬರುವುದು ಚಿಕ್ಕ ಮಕ್ಕಳಿಂದ ಮೊದಲುಗೊಂಡು ಎಲ್ಲ ವಯಸ್ಸಿನವರಲ್ಲೂ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ, ಆತ್ಮೀಯರೊಡನೆ ಕುಳಿತು ಮಾತನಾಡುತ್ತಿರುವಾಗ, ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗುತ್ತದೆ. ಬಾಯಿಯಲ್ಲಿ ದುರ್ವಾಸನೆ ಉಂಟಾಗಲು ಹಲವು ಕಾರಣಗಳಿವೆ.

*ಘಾಟು ವಾಸನೆಯುಳ್ಳ ಈರುಳ್ಳಿ, ಬೆಳ್ಳುಳ್ಳಿ ತಿಂದಾಗ ಅವು ಜೀರ್ಣಕ್ರಿಯೆಯಲ್ಲಿ ರಕ್ತಪ್ರವಾಹದ ಮೂಲಕ ಶ್ವಾಸಕೋಶವನ್ನು ಸೇರುತ್ತವೆ. ನಮ್ಮ ನಿಶ್ವಾಸದ ವಾಯುವಿನ ಮೂಲಕ ಹೊರಬಂದಾಗ ದುರ್ವಾಸನೆಗೆ ಕಾರಣವಾಗುತ್ತವೆ.

*ನಾವು ಸೇವಿಸುವ ಆಹಾರ ಪದಾರ್ಥಗಳ ತುಣುಕುಗಳು ಬಾಯಿಯಲ್ಲೇ ಉಳಿದಾಗ ಅವು ದುರ್ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ತಾಣಗಳಾಗುತ್ತವೆ. ಆದ್ದರಿಂದ ಬಾಯಿಯಲ್ಲಿ ದುರ್ವಾಸನೆ ಉಂಟಾಗುತ್ತದೆ.

*ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಬಾಯಿಯ ಒಳಭಾಗ ಹಾಗೂ ಹಲ್ಲುಗಳನ್ನು, ಶುಚಿಗೊಳಿಸದಿದ್ದರೆ, ನಾಲಿಗೆಯನ್ನು ಉಜ್ಜದಿದ್ದರೆ, ಅಲ್ಪ ಸಮಯದಲ್ಲೇ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ.

*ನಾಲಿಗೆಯಲ್ಲಿ ಉತ್ಪತ್ತಿಯಾಗುವ ಜೊಲ್ಲುರಸವು ನೈಸರ್ಗಿಕ ಶುಚಿಕಾರಕದಂತೆ ವರ್ತಿಸಿ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಆದರೆ ಯಾವುದೇ ಕಾರಣದಿಂದ ಜೊಲ್ಲುರಸದ ಪ್ರಮಾಣವು ಕಡಿಮೆಯಾದರೆ, ದುರ್ವಾಸನೆಯುಂಟಾಗುವ ಸಂಭವವೂ ಹೆಚ್ಚುತ್ತದೆ.

*ಆಲ್ಕೋಹಾಲ್ ಹಾಗೂ ಹಲವು ಮಾತ್ರೆಗಳ ಸೇವನೆ, ಪಯೋರಿಯಾದಂತಹ ವಸಡಿಗೆ ಸಂಬಂಧಪಟ್ಟ ರೋಗಗಳು ಹಾಗೂ ಬಾಯಿಯ ಮೂಲಕ ಉಸಿರಾಟಗಳೂ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ಬಾಯಿಯಲ್ಲಿ ದುರ್ವಾಸನೆ ಬರುತ್ತಿದೆಯೆಂದು ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭೋಪಾಯ ಅನುಸರಿಸುವುದರಿಂದ ಅದನ್ನು ನಿವಾರಿಸಿಕೊಳ್ಳಬಹುದು.
*ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಗಳನ್ನು ಉಜ್ಜಬೇಕು.

*ತಿಂಡಿ ಅಥವಾ ಊಟದ ನಂತರ ಹಲ್ಲು ಉಜ್ಜಿ, ಸಂದುಗಳಲ್ಲಿ ಆಹಾರದ ಕಣಗಳು ಉಳಿಯದಂತೆ ನೋಡಿಕೊಳ್ಳಬೇಕು ಹಾಗೂ ನಾಲಗೆಯನ್ನೂ ತಿಕ್ಕಬೇಕು.

*ಆಗಾಗ ದಂತವೈದ್ಯರನ್ನು ಭೇಟಿ ಮಾಡಿ ಯಾವುದೇ ರೀತಿಯ ವಸಡಿಗೆ ಸಂಬಂಧಪಟ್ಟ ರೋಗವಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

*ಹಲ್ಲುಗಳು ಹುಳುಕಾಗಿ ನೋವು ಕೊಡುತ್ತಿದ್ದರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ಅಗತ್ಯವಿದ್ದಲ್ಲಿ ಅವುಗಳನ್ನು ಕೀಳಿಸಬೇಕು ಅಥವಾ ರೂಟ್ ಕೆನಾಲ್ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

*ಬಾಯಿ ಒಣಗಿದ ಅನುಭವವಾಗುತ್ತಿದ್ದರೆ ಹೆಚ್ಚು ನೀರನ್ನು ಕುಡಿಯಬೇಕು, ಸಕ್ಕರೆರಹಿತ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಜೊಲ್ಲಿನ ಉತ್ಪತ್ತಿಯನ್ನು ಹೆಚ್ಚಿಸಬಹುದು.

*ಆಲ್ಕೋಹಾಲ್ ಹಾಗೂ ಕೆಫೀನ್ ಬೆರೆತಿರುವ ಪದಾರ್ಥಗಳ ಸೇವನೆ ವರ್ಜಿಸಬೇಕು. ಸತತವಾದ ಧೂಮಪಾನದಿಂದ ಅಥವಾ ಹಲ್ಲುಗಳನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ಹಲ್ಲುಗಳ ಮೇಲೆ ಕಂದುಬಣ್ಣದ ಕರೆಯುಂಟಾಗಿ ಅವು ಅಂದಗೆಡುತ್ತವೆ. ಆದ್ದರಿಂದ ಆಗಾಗ ವೈದ್ಯರ ಬಳಿಗೆ ಹೋಗಿ ಅವುಗಳನ್ನು ಶುಚಿಗೊಳಿಸಿಕೊಳ್ಳಬೇಕು. ಅಡುಗೆ ಸೋಡ ಬೆರೆತ ನೀರಿನಿಂದ ಬಾಯಿ ಮುಕ್ಕಳಿಸಬೇಕು

ಮಾಹಿತಿ: ಪದ್ಮಜಾ ಸುಂದರೇಶ್

Write A Comment