ಬಹರೈನ್ ಶ್ರೀ ವಿಶ್ವಕರ್ಮ ಸೇವಾ ಬಳಗದ 6ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು 5ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 06-11-2015ರಂದು ಶುಕ್ರವಾರ ಮನಾಮದಲ್ಲಿರುವ “ಇಂಡಿಯನ್ ಕ್ಲಬ್” ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ 09.30ಕ್ಕೆ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವದ ಪ್ರಕ್ರಿಯೆ ಕಲಶ ಪ್ರತಿಷ್ಠೆಯೊಂದಿಗೆ ಸಂಪನ್ನವಾಯಿತು. ಪ್ರತಿ ವರ್ಷದಂತೆ ಈ ಬಾರಿ ಕೂಡಾ ವಿಶ್ವವಿಖ್ಯಾತ ವಾಸ್ತು ಶಾಸ್ತ್ರ ಪ್ರವೀಣ, ಸುಪ್ರಸಿದ್ಧ ಜ್ಯೋತಿಷಿ ಮತ್ತು ಅನರ್ಘ್ಯರತ್ನ ತಜ್ನರಾದ ಗುರೂಜಿ ಶ್ರೀ ಅಶೋಕ್ ಪುರೋಹಿತ್, ಮುಂಬಯಿ ಇವರ ದಕ್ಷ ಮಾರ್ಗದರ್ಶನ ಮತ್ತು ಪೌರೋಹಿತ್ಯದೊಂದಿಗೆ ಶುಭಾರಂಭವಾಯಿತು. ಶ್ರೀಯುತರ ನೇತೃತ್ವದಲ್ಲಿ ಬಳಗದ ಕಾರ್ಯಕಾರಿ ಸಮಿತಿಯವರಿಂದ ದಿವ್ಯಜ್ಯೋತಿಯನ್ನು ಬೆಳಗಿದ ನಂತರ, ಮಹಿಳಾ ಬಳಗದವರು ಶ್ರೀ ವಿಶ್ವಕರ್ಮ ಮತ್ತು ಶ್ರೀ ಮಾತೆ ಕಾಳಿಕಾಂಬಾ ಸ್ತೋತ್ರ ಪಠಣೆಗೈದರು. ತದನಂತರ ಭಕ್ತವೃಂದದವರಿಂದ ಶ್ರೀ ಪ್ರದೀಪ್ ಕಾರ್ಕಳ ಮತ್ತು ಶ್ರೀ ರಾಜೇಶ್ ಕೊಡತ್ತೂರು ಮತ್ತು ಕ್ರೀಡಾ ಕಾರ್ಯದರ್ಶಿ ಶ್ರೀ ಸಂತೋಷ್ ಆಚಾರ್ಯ ಇವರ ನೇತೃತ್ವದಲ್ಲಿ ಸುಮಾರು 150 ನಿಮಿಷಗಳ ನಿರಂತರ ಭಜನಾ ಕಾರ್ಯಕ್ರಮವು ಶ್ರೀ ದಿವ್ಯರಾಜ್ ರೈ ಇವರ ಕೀಬೋರ್ಡ್ ವಾದನ ಹಾಗೂ ಶ್ರೀ ಪ್ರದೀಪ್ ಕಾರ್ಕಳ ಮತ್ತು ಶ್ರೀ ಯತೀಶ್ ಶೆಟ್ಟಿ (ತಬಲಾ ಮತ್ತು ಡೋಲಕ್) ಯವರ ಹಿಮ್ಮೇಳದೊಂದಿಗೆ ಭಕ್ತಿಭಾವದೊಂದಿಗೆ ಜರಗಿತು.
ಈ ಪೂಜಾ ಸಮಾರಂಭಕ್ಕೆ ಶ್ರೀ ಉಳ್ಳಾಲ್ ಸತೀಶ್ ಆಚಾರ್ಯ ದಂಪತಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ಮಹಾಪೂಜೆ ಮತ್ತು ಪ್ರಸಾದವಿತರಣೆಯ ನಂತರ ಮಹಾಪ್ರಸಾದ ರೂಪದಲ್ಲಿ ಪುಷ್ಕಳಭೋಜನ “ಅನ್ನಸಂತರ್ಪಣೆ”ಯನ್ನು ಸವಿದ ಸದ್ಭಕ್ತರೆಲ್ಲರೂ ಸಂತೃಪ್ತಿಯ ನಗೆಬೀರಿದರು.
ಬಳಗದ 5ನೇ ವಾರ್ಷಿಕೋತ್ಸವದ ಅಂಗವಾಗಿ ಸಾಯಂಕಾಲ ಜರಗಿದ ಮನರಂಜನಾ ಕಾರ್ಯಕ್ರಮ ನೆರೆದ ಕಲಾಭಿಮಾನಿಗಳೆಲ್ಲರ ಮನಸೂರೆಗೊಂಡಿತ್ತು. ಕುಮಾರಿ ದಿವ್ಯಾ ದಾಮೋದರ್ ಇವರಿಂದ ಪ್ರಥಮಾರಾಧಕ ಶ್ರೀ ಗಣೇಶಸ್ತುತಿ ಹಾಗೂ ಕುಮಾರಿ ಅನನ್ಯ ರಾಜೇಶ್ ಇವರ “ಪುಷ್ಪಾಂಜಲಿ” ಸ್ವಾಗತನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು.
ಬಳಗದ ಅಧ್ಯಕ್ಷ ಶ್ರೀ ಸದಾಶಿವ ಆಚಾರ್ಯರು ತನ್ನ ಸ್ವಾಗತ ಭಾಷಣದಲ್ಲಿ ಬಳಗದ ಐದು ವರುಷಗಳ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವರದಿಯನ್ನು ಪ್ರಸ್ತುತಪಡಿಸಿದರು.
“ಎದೆತುಂಬಿ ಹಾಡುವೆನು” ಸಂಗೀತಸ್ಪರ್ಧೆಯ ವಿಜೇತ, ಶಾಸ್ತ್ರೀಯ ಹಿಂದುಸ್ತಾನಿ ವಿದ್ವಾನ್ ಮತ್ತು ಶಾಸ್ತ್ರೀಯ ಕರ್ನಾಟಕ, ಸುಗಮ ಸಂಗೀತ ಯುವಗಾಯಕ; “ಕನಸು” ಕನ್ನಡ ಚಲನಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿರುವ ಶ್ರೀ ಯಶವಂತ್ ಎಂ.ಜಿ. ಆಚಾರ್ಯ, ಉಡುಪಿ ಇವರ ಸಾರಥ್ಯದಲ್ಲಿ “ಸಂಸ್ಕೃತಿ ಸಂಭ್ರಮ-2015 ಸಂಗೀತ ರಸಸಂಜೆ ಕಾರ್ಯಕ್ರಮ ಅಧ್ಬುತವಾಗಿ ಮೂಡಿಬಂದಿತ್ತು. ಇವರ ಜತೆ ಸೇರಿದ ನಮ್ಮ ಸಮಾಜದ ಹೆಮ್ಮೆಯ ಕುವರಿ, ಗಾನಕೋಗಿಲೆ ಕುಮಾರಿ ಶೃತಿ, ಬೆಂಗಳೂರು; ಇವರೀರ್ವರೂ ನಿರ್ಮಿಸಿದ ’ನಾದಸೌರಭ’ಕ್ಕೆ ಕಲಶವಿಟ್ಟಂತೆ ತನ್ನ ವೈವಿದ್ಯಮಯ ಚಿತ್ರಕಲಾ ಪ್ರತಿಭೆಯನ್ನು “ದಾರಚಿತ್ರ”( thread art), ಫಾಸ್ಟ್ ಪೈಂಟಿಂಗ್ ಇತ್ಯಾದಿ ಪ್ರಯೋಗಗಳಿಂದ ಪ್ರೇಕ್ಷಕರನ್ನು ರಂಜಿಸಿದ ಉದಯೋನ್ಮುಖ ಚಿತ್ರಕಲಾವಿದ ಶ್ರೀ ಗಣೇಶ್ ಆಚಾರ್ಯ ಎಮ್.ಆರ್.,ಚಿಕ್ಕಮಗಳೂರು. ಗಾಯಕ-ಗಾಯಕಿಯರ ಸುಮಧುರ ಕಂಠಕ್ಕೆ ಅನುರೂಪವಾದ ಚಿತ್ರಬರೆದು ಕಲಾಕುಂಚದಲ್ಲಿ ಚಿತ್ರ-ಕಾವ್ಯದ ಮುನ್ನುಡಿ ಬರೆದ ಶ್ರೀ ಗಣೇಶ್ ಆಚಾರ್ಯ ನೆರೆದ ಕಲಾರಸಿಕರೆಲ್ಲರ ಮನಸೂರೆಗೈದರು.
ಬಳಗದ ಪುಟ್ಟ ಮಕ್ಕಳ “ಚಿಣ್ಣರ ನೃತ್ಯ”-ಟಪೋರಿ ಡ್ಯಾನ್ಸ್, ಬಾಲಿವುಡ್ ರಿಮಿಕ್ಸ್ ಹಾಗೂ ಎಂ.ಜೆ.ಸ್ಪೆಶಲ್ ನೃತ್ಯಗಳಿಗೆ ಹೆಜ್ಜೆಹಾಕಿದ ಸಾಹಿಲ್, ಸ್ವಪ್ನಿಲ್, ಅನನ್ಯ, ಆಶಿಷ್ ಮನೋಜ್, ಸಾಕ್ಷಿ, ಆಶಿಷ್ ಸದಾಶಿವ, ರೋನಿತ್, ಐಶ್ವರ್ಯ, ಶ್ರೀಯ, ಮನ್ವಿತ್, ಅಭಿನವ್, ಜೆನ್ನಿಫರ್, ಅನ್ಶುಲ್, ಆದಿತ್ಯ..ಇವರೆಲ್ಲರ ಅದ್ಭುತ ಪ್ರದರ್ಶನಕ್ಕೆ ಪ್ರೇಕ್ಷಕರ ಸಿಳ್ಳು-ಚಪ್ಪಾಳೆಗಳೇ ಸಾಕ್ಷಿರೂಪದಲ್ಲಿದ್ದುವು. ಈ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಶ್ರೀ ಸಂತೋಷ್ ಆಚಾರ್ಯ ಮತ್ತು ನೃತ್ಯ ನಿರ್ದೇಶಕ ಶ್ರೀ ಪ್ರೀತಮ್ ಅಚಾರ್ಯ, ಬಂಟ್ವಾಳ ಕೂಡಾ ಇವರ ನೃತ್ಯಗಳಲ್ಲಿ ಸಹಭಾಗಿಗಳಾಗಿದ್ದರು.
ಮುಂದೆ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅಶೋಕ ಪುರೋಹಿತ್, ಮುಂಬಯಿ ಇವರನ್ನು ಬಳಗದ ಪರವಾಗಿ ಶಾಲು, ಫಲವಸ್ತು ಹಾಗೂ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು. ಈ ಮುತ್ತಿನದ್ವೀಪ ಬಹರೈನ್ ನಲ್ಲಿ ಹಲವು ವರುಷಗಳಿಂದ ಎಲ್ಲಾ ಸಂಘ-ಸಂಸ್ಥೆಗಳ ಅದ್ದೂರಿ ಕಾರ್ಯಕ್ರಮಗಳಿಗೆ ಸದಾ ಸಹಾಯಹಸ್ತವನ್ನೀಯುತ್ತಾ ಬಂದಿರುವ ರಾಮೀ ಸಮೂಹ ಸಂಸ್ಥೆಗಳ ಮಹಾಪ್ರಬಂಧಕರಾದ ಶ್ರೀ ಶಾಂತರಾಮ ಶೆಟ್ಟಿ ದಂಪತಿಗಳನ್ನು ಕೂಡಾ ಶಾಲು, ಹಣ್ಣುಹಂಪಲು ಮತ್ತು ಸ್ಮರಣಿಕೆಗಳನ್ನು ನೀಡಿ, ಗುರೂಜಿ ಶ್ರೀ ಅಶೋಕ್ ಪುರೋಹಿತರು ಗೌರವಿಸಿದರು. ಸನ್ಮಾನಕ್ಕೆ ಉತ್ತರಿಸಿದ ಸನ್ಮಾನಿತರೀರ್ವರೂ ಬಳಗದ 5 ವರುಷಗಳ ಸಾಧನೆಯನ್ನು ಶ್ಲಾಘಿಸುತ್ತಾ, ಬಳಗದ ಉತ್ತರೋತ್ತರ ಅಭಿವೃದ್ಧಿಯನ್ನು ಹಾರೈಸಿದರು.
ಸುದೂರದ ನಮ್ಮ ನಾಡಿನಿಂದ ಆಗಮಿಸಿದಂತಹ ಅತಿಥಿ ಕಲಾವಿದರುಗಳಾದ ಗಾಯಕ/ಸಂಗೀತ ನಿರ್ದೇಶಕ ಶ್ರೀ ಯಶವಂತ್ ಎಮ್.ಜಿ. ಆಚಾರ್ಯ, ಉಡುಪಿ, ಕುಮಾರಿ ಶೃತಿ, ಬೆಂಗಳೂರು ಮತ್ತು ಚಿತ್ರಕಲಾವಿದ ಶ್ರೀ ಗಣೇಶ್ ಎಮ್.ಆರ್.ಆಚಾರ್ಯ, ಚಿಕ್ಕಮಗಳೂರು ಇವರನ್ನು ಕೂಡಾ ಹಣ್ಣುಹಂಪಲು, ಶಾಲು ಮತ್ತು ಸ್ಮರಣಿಕೆಗಳನ್ನಿತ್ತು ಆದರಿಸಲಾಯಿತು. ಇತ್ತೀಚೆಗೆ ಬಹರೈನ್ ಗೆ ಉದ್ಯೋಗನಿಮಿತ್ತ ಬಂದಿರುವ ಉದಯೋನ್ಮುಖ ನೃತ್ಯನಿರ್ದೇಶಕ ಶ್ರೀ ಪ್ರೀತಮ್ ಸಿ.ಆಚಾರ್ಯ, ಬಂಟ್ವಾಳ ಇವರನ್ನು ಶಾಲು, ಹಣ್ಣುಹಂಪಲು ಮತ್ತು ಸ್ಮರಣಿಕೆಗಳೊಂದಿಗೆ ಉಪಚರಿಸಲಾಯಿತು. ಆಮೇಲೆ ವೇದಿಕೆಯಲ್ಲಿ ಉಪಸ್ಥಿತರಿದ್ದ ದ್ವೀಪದ ಎಲ್ಲಾ ಸಾಂಸ್ಕೃತಿಕ ಸಂಘಟನೆಗಳ ಅಧ್ಯಕ್ಷರುಗಳಿಗೆ ಸ್ಮರಣಿಕೆಗಳನ್ನು ಹಸ್ತಾಂತರಿಸುವ ಮೂಲಕ ಗೌರವಿಸಲಾಯಿತು.
ಈ ಐದು ಸಂವತ್ಸರಗಳಲ್ಲಿ ಬಳಗ ನಡೆದು ಬಂದ ದಾರಿ ಹಾಗೂ ಸಾಧನೆಯನ್ನು ನೆನಪಿಸುವ ನಿಟ್ಟಿನಲ್ಲಿ, “ನಮನ” ಎಂಬ ಸುಂದರ ಸ್ಮರಣಸಂಚಿಕೆಯನ್ನು ಶ್ರೀ ಅಶೋಕ್ ಪುರೋಹಿತ್ ಮತ್ತು ಶ್ರೀ ಶಾಂತರಾಮ ಶೆಟ್ಟಿ ದಂಪತಿಗಳು ಬಹರೈನ್ ದ್ವೀಪದ ಎಲ್ಲಾ ಸಂಘಸಂಸ್ಥೆಗಳ ಅಧ್ಯಕ್ಷರುಗಳು ಹಾಗೂ ಬಳಗದ ಅಧ್ಯಕ್ಷ ಶ್ರೀ ಸದಾಶಿವ ಆಚಾರ್ಯ, ಮನರಂಜನಾ ಕಾರ್ಯದರ್ಶಿ ಶ್ರೀ ಸುಧೀರ್ ಆಚಾರ್ಯ ಮತ್ತು ಸ್ಥಾಪಕಾಧ್ಯಕ್ಷ ಶ್ರೀ ಕೆ.ಬಿ.ಜಗದೀಶ್ ಆಚಾರ್ ಇವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.
ಮನರಂಜನಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನೃತ್ಯನಿರ್ದೇಶಕ ಶ್ರೀ ಪ್ರೀತಮ್ ಆಚಾರ್ಯರ ದಕ್ಷ ನಿರ್ದೇಶನದಲ್ಲಿ ಮೂಡಿಬಂದ “ಶ್ರೀ ವಿಶ್ವಕರ್ಮ ನೃತ್ಯರೂಪಕ” ಸೇರಿದ್ದ ಸಮಸ್ತ ಕಲಾಭಿಮಾನಿಗಳಮೆಚ್ಚುಗೆಗೆ ಪಾತ್ರವಾಯಿತು. ಈ ಕಣ್ಮನ ತಣಿಸುವ ಅಮೋಘ ನೃತ್ಯರೂಪಕದಲ್ಲಿ ಬಳಗದ ಉತ್ಸಾಹೀ ಮಹಿಳೆಯರಾದ ಶ್ರೀಮತಿ ಸವಿತಾ ನಟೇಶ್, ಹರಿಣಿ ಸುನಿಲ್, ರೇಷ್ಮಾ ಸತೀಶ್, ಹೇಮಾ ಸುರೇಂದ್ರ, ಶರ್ವಾಣಿ ಮಂಜುನಾಥ್, ಮೋಹಿನಿ ಸದಾಶಿವ, ವಿನುತ ಹರೀಶ್, ಅಲ್ಲದೆ ಕುಮಾರಿ ಅನನ್ಯ ರಾಜೇಶ್,ಕುಮಾರಿ ಸಾಕ್ಷಿ ಶರತ್ ಮತ್ತು ಶ್ರೀ ಸಂತೋಷ್ ಆಚಾರ್ಯ, ಶ್ರೀ ಭಾಸ್ಕರ ಆಚಾರ್ಯ, ಶ್ರೀ ಕೇಶವ ಆಚಾರ್ಯ ಹಾಗೂ ಶ್ರೀ ಪ್ರೀತಮ್ ಆಚಾರ್ಯ ಇವರೆಲ್ಲರ ಅದ್ಭುತ ಪ್ರದರ್ಶನ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡಿರುತ್ತದೆ. ಹಾಗೆನೇ ಮತ್ತೊಂದು ಮನಮೋಹಕ ನೃತ್ಯ ಎಮ್.ಜೆ.ಸ್ಪೆಶಲ್, ಶ್ರೀ ಪ್ರೀತಮ್ ಆಚಾರ್ಯರ ಉತ್ತಮ ನೃತ್ಯಸಂಯೋಜನೆಗೆ ಸಾಕ್ಷಿಯಾಗಿತ್ತು.
ನಮ್ಮ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರಮುಖರಲ್ಲೊಬ್ಬರಾದ ಇನ್ ಲೆಂಡ್ ಗ್ರೂಪ್, ಮಂಗಳೂರು ಸಂಸ್ಥೆಯ ಮಾರಾಟವಿಭಾಗದ ಮುಖ್ಯಸ್ಥರಾದ ಶ್ರೀ ಉಲ್ಲಾಸ್ ಕದ್ರಿ ಅವರನ್ನು ಪುಷ್ಪಗುಚ್ಚದೊಂದಿಗೆ ಬರಮಾಡಿಕೊಳ್ಳಲಾಯ್ತು. ಅವರು ಸಭೆಯನ್ನುದ್ದೇಶಿಸಿ ಅವರ ಸಂಸ್ಥೆಯ ಧ್ಯೇಯ-ಧೋರಣೆಗಳನ್ನು ಸಭಿಕರಿಗೆಲ್ಲ ಮನಮುಟ್ಟುವಂತೆ ವಿವರಿಸಿದರು.
ನಮ್ಮ ಬಳಗದ ಮುಖ್ಯ ಉದ್ದೇಶದಂತೆ, ಪಂಚಮವರ್ಷದ ಈ ಶುಭಸಂದರ್ಭದಲ್ಲಿ ನಮ್ಮ ನಾಡಿನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ /ಪಿ.ಯು.ಸಿ ಯಲ್ಲಿ ವ್ಯಾಸಂಗಮಾಡುತ್ತಿರುವ ನಮ್ಮ ಸಮಾಜದ ನಾಲ್ಕು ಮಂದಿ ಪ್ರತಿಭಾವಂತ ಬಡವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗುರುತಿಸಿ, ನೀಡಲಾಗುವ “ಪ್ರತಿಭಾ ಪುರಸ್ಕಾರ -2015” ಪ್ರಶಸ್ತಿ ವಿಜೇತರನ್ನು ಘೋಷಿಸಲಾಯಿತು.
ಈ ಮಧ್ಯೆ ಅತಿಥಿಕಲಾವಿದತ್ರಯರ ಕಲಾನೈಪುಣ್ಯತೆಗೆ ಮಾರುಹೋದ ಬಹರೈನ್ ನಲ್ಲಿರುವ ಶ್ರೀ ಅರುಣ್ ಐರೋಡಿಯವರು, ಆ ಮೂವರಿಗೂ ಉಡುಗೊರೆ ನೀಡುವುದರೊಂದಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದಿನದ ಸಂಪೂರ್ಣ ಕಾರ್ಯಕ್ರಮವನ್ನು ಸಂಘಟಿಸಿ, ಉತ್ತಮರೀತಿಯಲ್ಲಿ ನಿರೂಪಿಸಿದ ಬಳಗದ ಸ್ಥಾಪಕಾಧ್ಯಕ್ಷ ಶ್ರೀ ಕೆ.ಬಿ.ಜಗದೀಶ್ ಆಚಾರ್, ಕೊನೆಯಲ್ಲಿ ಈ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತನು-ಮನ-ಧನಗಳಿಂದ ಸಹಕರಿಸಿದ ಸರ್ವರಿಗೂ ವಂದನೆಗಳನ್ನು ಸಲ್ಲಿಸುವುದರೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು































































