ಕರಾವಳಿ

ನಾಳೆ ಭಾರತ್ ಬಂದ್ : ಅಸ್ತವ್ಯಸ್ತಗೊಳ್ಳಲಿದೆ ಜನಜೀವನ

Pinterest LinkedIn Tumblr

Bharath bandh

ಬೆಂಗಳೂರು,ಸೆ.1: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ರಸ್ತೆ ಸುರಕ್ಷತಾ ಮಸೂದೆ ವಾಪಸಾತಿಗೆ ಆಗ್ರಹಿಸಿ 10 ಕಾರ್ಮಿಕ ಸಂಘಟನೆಗಳು ನಾಳೆ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸಂಚರಿಸುವುದಿಲ್ಲ. ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ, ಅಂಚೆ ಕಚೇರಿಗಳು ಸ್ಥಗಿತಗೊಳ್ಳವೆ. ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ಇದೆ. ಒಟ್ಟಾರೆ ನಾಳೆ ಬಂದ್ ಜನಸಾಮಾನ್ಯರಿಗೆ ಬಿಸಿ ಮುಟ್ಟಿಸಲಿದ್ದು, ಸಾರ್ವಜನಿಕರು ತಮ್ಮ ಕೆಲಸಗಳೇನೇ ಇದ್ದರೂ ಮುಂಜಾಗ್ರತೆಯಾಗಿ ಇಂದೇ ಮಾಡಿಕೊಳ್ಳುವುದು ಸೂಕ್ತ. ಅಗತ್ಯ ಸೇವೆಗಳಲ್ಲಿ ಸಾಕಷ್ಟು ವ್ಯತ್ಯಯವಾಗುವ ಸಾಧ್ಯತೆ ಇದೆ. ಈ ಬಂದ್‌ನಿಂದಾಗಿ ಸಾರಿಗೆ, ಬ್ಯಾಂಕ್, ವಿಮೆ, ಅಂಚೆ ಹಾಗೂ ಕೈಗಾರಿಕಾ ವಲಯಗಳಲ್ಲಿ ಸೇವೆ ಅಸ್ವಸ್ಥವಾಗಲಿದೆ.

ರೈಲು ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಅದನ್ನು ಹೊರತುಪಡಿಸಿದರೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ, ಆಟೋಗಳು ಓಡಾಡುವುದಿಲ್ಲ. ಸಾರಿಗೆ ಸುರಕ್ಷತಾ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ಬಿಎಂಟಿಸಿ ಕೂಡ ಮುಷ್ಕರ ನಡೆಸುತ್ತಿರುವುದರಿಂದ ಬೆಂಗಳೂರು ಮಹಾನಗರದಲ್ಲಿ ಸಾರಿಗೆ ವ್ಯತ್ಯಯವಾಗಲಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಲಿದೆ. ಈ ಮುಷ್ಕರಕ್ಕೆ ಆಟೋ ಚಾಲಕರು ಕೂಡ ಬೆಂಬಲ ನೀಡಿದ್ದಾರೆ. ನಾಳೆ ನಗರದಾದ್ಯಂತ ಆಟೋಗಳು ಓಡಾಡುವುದಿಲ್ಲ. ಹಾಗಾಗಿ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಲಿದೆ.

ಲಾರಿ ಚಾಲಕರು- ಮಾಲೀಕರ ಸಂಘ, ಲಾರಿ-ಚಾಲಕರುಗಳ ಸಂಘಗಳ ಒಕ್ಕೂಟ ಮುಷ್ಕರಕ್ಕೆ ಬೆಂಬಲ ಸೂಚಿಸಿ ಈಗಾಗಲೇ ಲಾರಿಗಳ ಸಂಚಾರವನ್ನು ನಿಲ್ಲಿಸಿದೆ. ಟ್ಯಾಕ್ಸಿ ಚಾಲಕರ ಸಂಘಟನೆಗಳು ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಮುಷ್ಕರದಲ್ಲಿ ಪಾಲ್ಗೊಳ್ಳುವ ಸಂಘಟನೆಗಳು: ಅಂಗನವಾಡಿ, ಬಿಸಿಯೂಟ ನೌಕರರು ಮತ್ತು ಬೀಡಿ ಕಾರ್ಮಿಕರು, ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಪಿಯುಸಿ, ಟಿಯುಸಿಸಿ, ಎಲ್‌ಪಿಎಫ್, ಫೆಡರೇಷನ್ ಆಫ್ ಎಂಪ್ಲಾಯಸ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ ಚಾಲಕರ ಸಂಘಟನೆಗಳು, ಬ್ಯಾಂಕ್ ಸಂಘಟನೆಗಳ ಐಕ್ಯ ಹೋರಾಟ ವೇದಿಕೆ, ಆಶಾ ಕಾರ್ಯಕರ್ತೆಯರ ಸಂಘ, ಇನ್ಸೂರೆನ್ಸ್ ಸಂಘಟನೆಗಳು ಪಾಲ್ಗೊಳ್ಳಲಿವೆ.

ಬೇಡಿಕೆಗಳು:

* ಸಾರಿಗೆ ಸುರಕ್ಷತಾ ಮಸೂದೆ 2015ನ್ನು ವಾಪಸ್ ಪಡೆಯಬೇಕು.

* ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬಾರದು, ಬೆಲೆ ಏರಿಕೆ ನಿಯಂತ್ರಿಸಬೇಕು,

* ನಿರುದ್ಯೋಗ ನಿಯಂತ್ರಣ, ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತರಬೇಕು,

* ಗುತ್ತಿಗೆ ಕಾರ್ಮಿಕ ಪದ್ಧತಿ ತಡೆ, ಕನಿಷ್ಠ ವೇತನ 15 ಸಾವಿರ ರೂ. ಜಾರಿ,

* ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ,

* ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಷೇರು ಬಂಡವಾಳ ಹಿಂತೆಗೆತ ಮಾಡಬಾರದು,

* ಕಾರ್ಮಿಕ ವಿರೋಧಿ ಹಾಗೂ ಪ್ರತಿಗಾಮಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಬೇಡ.

Write A Comment