ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-20 : ಬಿಂದು ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲಾರೆ

Pinterest LinkedIn Tumblr

Pa go collage

ಯಾವ ಜನ್ಮದ ಮೈತ್ರಿಯೋ ಏನೋ ಪ.ಗೋಪಾಲಕೃಷ್ಣ ನನ್ನಂಥ ಕಿರಿಯನ ಜೊತೆ ಮಿಳಿತವಾಗಿ ಸ್ನೇಹದ ಜೊತೆಗೆ ವೃತ್ತಿಗೆ ಸಾಣೆಹಿಡಿದರು. ಬಹುಷ ಅವರ ಒಡನಾಟವಿಲ್ಲದಿದ್ದರೆ ಕಸುಬಿನಲ್ಲಿ ಹೊಸತನ, ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ ಎನ್ನುವುದು ಈಗ ನನಗೆ ಚೆನ್ನಾಗಿ ಅರ್ಥವಾಗುತ್ತಿದೆ.

ನಿನ್ನ ಕೈಯ್ಯಲ್ಲಿ ಪೆನ್ನು ಇರುವತನಕ ನಿನ್ನ ಹಿಂದೆ ಮುಂದೆ ಎಲ್ಲರೂ ಇರುತ್ತಾರೆ, ಕೈಯಿಂದ ಪೆನ್ನು ಜಾರಿದರೆ ನಿನ್ನವರೂ ಇರಲಾರರು ಎನ್ನುತ್ತಿದ್ದ ಪ.ಗೋ ಸ್ವತಂತ್ರವಾಗಿ ಚಿಂತಿಸಿ ಅನುಭವದಿಂದ ಹೇಳುತ್ತಿದ್ದ ಮಾತುಗಳು ಸಾರ್ವಕಾಲಿಕವಾಗಿಯೂ ಮೌಲ್ಯಯುತವಾದವು ಎನ್ನುವುದನ್ನು ನಾನಂತೂ ಒಪ್ಪಿಕೊಂಡಿದ್ದೇನೆ.

ಪ.ಗೋ ಪತ್ರಕರ್ತರಾಗಿ ನಾಲ್ಕು ದಶಕಗಳ ಕಾಲ ದುಡಿದರೂ ಆಯಾಸವೆಂದು ಹೇಳಿಕೊಂಡವರಲ್ಲ. ದೇಹ ದಣಿದರೂ ಮನಸ್ಸು ಮಾತ್ರ ಅಷ್ಟೇ ಉಲ್ಲಸಿತವಾಗಿರುತ್ತಿತ್ತು ಎನ್ನುವುದಕ್ಕೆ ಅವರ ಬರಹಗಳೇ ಸಾಕ್ಷಿಯಾಗಿದ್ದವು. ವೃತ್ತಿ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿರುವ ನಾನು ಮುಂಗಾರು ಕಣ್ಮುಚ್ಚುವ ಹಂತದಲ್ಲಿ ಅನಿವಾರ್ಯವಾಗಿ ಬೇರೆ ಪತ್ರಿಕೆಯತ್ತ ಮುಖ ಮಾಡಿದೆ, ಆದರೆ ನನ್ನ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿದ್ದ ಪ.ಗೋ ಹುರಿದುಂಬಿಸಿ ಹೊಸ ಕಚೇರಿಗೆ, ಕೆಲಸದ ವಾತಾವರಣಕ್ಕೆ ಒಗ್ಗಿಕೊಳ್ಳುವಂತೆ ಮಾಡಿದರು.

ಅನಿವಾರ್ಯತೆ ಎನ್ನುವ ಪದಕ್ಕೆ ಅದೆಷ್ಟು ಅರ್ಥವಿದೆಯೋ ಗೊತ್ತಿಲ್ಲ, ಆದರೆ ಪ.ಗೋ ಇಂಥ ಅನಿವಾರ್ಯತೆಯನ್ನು ಅನುಭವಿಸಿದ್ದರು ಮಾತ್ರವಲ್ಲ ನಾನೂ ಒಗ್ಗಿಕೊಳ್ಳುವುದಕ್ಕೆ ನೆರವಾದರು. ಆದರೂ ನಾನು ನಿತ್ಯವೂ ಚಡಪಡಿಸುತ್ತಿದ್ದೆ. ಇಂಥ ಚಡಪಡಿಕೆಯನ್ನು ಮೊದಲ ಸಲ ಅನುಭವಿಸಿದ್ದ ನಾನು ಪ.ಗೋ ಅವರಿಗೆ ಬಾಯಿಬಿಟ್ಟು ಹೇಳಿಕೊಂಡಿದ್ದೆ.

ಪತ್ರಿಕೆ ಮಾರುವ ಹುಡುಗನ ಕೈಕೆಳಗೆ ದುಡಿಯುವಂಥ ಅನಿವಾರ್ಯತೆಯನ್ನು ಹೇಳಿಕೊಂಡಾಗ ಪ.ಗೋ ಅದು ನಿನ್ನ ಕರ್ಮ, ಅನುಭವಿಸಲೇ ಬೇಕು ಎಂದಿದ್ದರು. ಹಾಗೇ ಅವರು ಹೇಳಿದ್ದರಲ್ಲೂ ಅರ್ಥವಿತ್ತು. ನನಗೆ ಅನ್ಯಮಾರ್ಗವಿರಲಿಲ್ಲ ಆ ಸಂದರ್ಭದಲ್ಲಿ. ಸರಿ ಸುಮಾರು ಎರಡು ವರ್ಷ ಅವಮಾನವೆಂದುಕೊಂಡರೂ ಅವುಡುಗಚ್ಚಿ ಸಹಿಸಬೇಕಾದ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದಕ್ಕೆ ಪ.ಗೋ ಕಿವಿಮಾತೇ ಕಾರಣವಾಗಿತ್ತು.

ಪ.ಗೋ ವೃತ್ತಿ ಬದುಕಿನಲ್ಲಿ ಸಹಿಸಿಕೊಳ್ಳದ ಸಂಗತಿಗಳೆಂದರೆ ಸುಳ್ಳು ಹೇಳುವುದು, ವಂಚನೆ ಮಾಡುವುದು. ಸುಳ್ಳು ಸುದ್ದಿ ಕೊಟ್ಟರೆ ಕೆಂಡಾಮಂಡಲವಾಗುತ್ತಿದ್ದರು, ಸುಳ್ಳು ಹೇಳಿದರೂ ಅಷ್ಟೇ. ಸತ್ಯ ಹೇಳಿದರೆ ಮರಣ ಬರಬಹುದೇನೋ ಅದಕ್ಕೇ ಸುಳ್ಳು ಹೇಳುತ್ತಾರೆ ಎಂದು ಹೇಳುತ್ತಿದ್ದರು.

ನಾನು ಕನ್ನಡಪ್ರಭ ಸೇರಿಕೊಂಡೆ.ಆಗ ನಾನು ಮತ್ತು ಉಭಯರು ಒಂದೇ ಕಚೇರಿಯಲ್ಲಿ ಸಹೋದ್ಯೋಗಿಗಳಾಗಿದ್ದೆವು. ಅವರು ಉಭಯರ ಜೊತೆ ಮಾತು ಬಿಟ್ಟಿದ್ದರು. ಅದು ಅವರ ಬೇಸರಕ್ಕೆ ಕಾರಣವಾಗಿತ್ತು. ಆದರೆ ನಾನು ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದ ಮೇಲೆ ಸಮಾಧಾನಗೊಂಡು ನಿನಗೆ ಅಗತ್ಯ ಬಿದ್ದಾಗಲೆಲ್ಲಾ ನನ್ನ ಮನೆಯ ಬಾಗಿಲು ತೆರೆದಿದೆ, ನನ್ನ ಸಲಹೆಗಳೂ ನಿನಗಾಗಿ ಮೀಸಲಿರುತ್ತವೆ ಎನ್ನುವ ಮಾತು ಕೊಟ್ಟರು.

ಇಷ್ಟಾದರೂ ಪ.ಗೋ ನನ್ನ ಪತ್ನಿ ಮತ್ತು ಮಗಳ ಜೊತೆ ಮಾತ್ರ ಅದೆಷ್ಟು ಅನ್ಯೋನ್ಯವಾಗಿದ್ದರೆಂದರೆ ದಿನಂಪ್ರತಿ ತಾವಾಗಿಯೇ ಮನೆಗೆ ಫೋನ್ ಮಾಡಿ ಊಟ, ತಿಂಡಿ ಬಗ್ಗೆ ಕೇಳಿ ತಮಾಷೆ ಮಾಡಿ, ಮಗಳನ್ನು ರೇಗಿಸಿ ಖುಷಿ ಪಡುತ್ತಿದ್ದರು.

ನನ್ನ ಮಗಳ ಹೆಸರು ಲಹರಿ. ಪ.ಗೋ ಅವಳನ್ನು ಛೇಡಿಸಲು ತಿರುಚಿ ಕರೆದು ಪದೇ ಪದೇ ಅವಳಿಂದ ಹೆಸರು ಹೇಳಿಸಿ ಕಾಡುತ್ತಿದ್ದರು. ಒಂದು ದಿನ ಪ.ಗೋ ಫೋನ್ ಬರದಿದ್ದರೆ ಅಜ್ಜನಿಗೆ ಯಾರೋ ಕೆಲಸ ಜೋರಾಗಿ ಕೊಟ್ಟಿರಬೇಕು ಎನ್ನುತ್ತಿದ್ದಳು ಮಗಳು. ಸ್ವಲ್ಪ ಹೊತ್ತಲ್ಲಿ ಫೋನ್ ರಿಂಗಣಿಸಿದರೆ ಅದು ಪ.ಗೋ ಅವರದ್ದೇ ಆಗಿರುತ್ತಿತ್ತು. ನಾನು ಕನ್ನಡ ಪ್ರಭಕ್ಕೆ ಸೇರಿದ ಮೇಲೆ ಪ.ಗೋ ಮನೆಗೆ ತಾವಾಗಿಯೇ ಫೋನ್ ಮಾಡಿ ಮನೆಯವರೊಂದಿಗೆ ಮಾತನಾಡುತಿದ್ದರು. ಆದರೆ ನನ್ನೊಂದಿಗೆ ಮಾತ್ರ ಫೋನ್ ನಲ್ಲಿ ಮಾತನಾಡುತ್ತಿರಲಿಲ್ಲ. ಮಗಳು ಅಪ್ಪ ಇದ್ದಾರೆ ಫೋನ್ ಕೊಡಲೇ ಎಂದರೂ ನಾನು ನಿನ್ನೊಂದಿಗೆ ಮಾತಾಡಲು ಫೋನ್ ಮಾಡಿದ್ದು ನಿನ್ನಪ್ಪನೊಂದಿಗಲ್ಲ ಎಂದು ಹೇಳಿಬಿಡುತ್ತಿದ್ದರು.

ಈ ಮಾತುಗಳನ್ನು ಹೇಳಿದ ಉದ್ದೇಶ ಪ.ಗೋ ಅವರ ಒಡನಾಟ ನನಗೆ ಮಾತ್ರ ಸಿಕ್ಕಿದ್ದಲ್ಲ, ನನ್ನ ಮಗಳಿಗೂ ಸಿಕ್ಕಿತ್ತು. ಅಕ್ಕರೆಯಿಂದ ಪ.ಗೋ ಅವರನ್ನು ಬೀಡಿ ಅಜ್ಜ ಎನ್ನುತ್ತಿದ್ದಳು ಮಗಳು.

ಬೀಡಿ ಮತ್ತು ಚಹಾ ಪ.ಗೋ ಅವರ ಜೀವನ ಸಂಗಾತಿ. ಊಟ, ತಿಂಡಿ ಇಲ್ಲದಿದ್ದರೆ ಅವರು ಚಡಪಡಿಸುತ್ತಿರಲಿಲ್ಲ, ಬೀಡಿ ಸೇದಿ ಹೊಗೆ ಬಿಡದಿದ್ದರೆ ಚಡಪಡಿಸುತ್ತಿದ್ದರು. ಅವರು ಪುಸು ಪುಸನೆ ಹೊಗೆ ಬಿಟ್ಟು ಟೈಪ್ ರೈಟರ್ ಮುಂದೆ ಕುಳಿತರೆ ತಮ್ಮ ನೆನಪುಶಕ್ತಿಯಿಂದಲೇ ಅದೆಷ್ಟೋ ವರ್ಷಗಳ ಹಳೆ ನೆನಪುಗಳನ್ನು ಕೆದಕಿ ಲೇಖನ ಬರೆಯುತ್ತಿದ್ದರು. ಇದನ್ನು ಕಂಡೇ ನಾನು ಅವರನ್ನು ನಿಮ್ಮ ತಲೆಯೊಳಗಿನ ಪುಸ್ತಕದ ಹಾಳೆಗಳು ತೆರೆದುಕೊಳ್ಳಬೇಕಾದರೆ ಒಂದು ಬೀಡಿ ಸಾಕು ಎನ್ನುತ್ತಿದ್ದೆ.

ಕೇವಲ ಒಂದು ಬೀಡಿ ಸೇದುವುದನ್ನು ತಡೆದರೂ ಅವರಿಗೆ ಅಸಾಧ್ಯವಾದ ಸಿಟ್ಟು ಬರುತ್ತಿತ್ತು. ಬೀಡಿ ಸೇದ ಬೇಡಿ ಎಂದು ಕೆಲವರು ಬುದ್ಧಿ ಹೇಳಿ ಬೈಸಿಕೊಂಡು ತಪ್ಪಾಯಿತೆಂದು ಕ್ಷಮೆ ಕೇಳಿದ ಉದಾಹರಣೆಗಳು ಸಾಕಷ್ಟಿವೆ.

ಸಕ್ರಿಯ ಪತ್ರಿಕಾ ವರದಿಗಾರಿಕೆಯಿಂದ 1994 ರಲ್ಲಿ ನಿವೃತ್ತರಾದ ಪ.ಗೋ ಬರವಣಿಗೆಯನ್ನು ನಿಲ್ಲಿಸಲಿಲ್ಲ. ಬೇರೆ ಬೇರೆ ಪತ್ರಿಕೆಗಳಿಗೆ ಅಂಕಣ ಬರೆಯುವ ಮೂಲಕ ಸಮಕಾಲೀನ ವಿಚಾರಗಳ ಮೇಲೆ ಬೆಳಕು ಚೆಲ್ಲತೊಡಗಿದರು. ಅವರ ಬರಹಗಳಲ್ಲಿದ್ದ ವಿಡಂಬನೆ, ಓದಿಸಿಕೊಂಡು ಹೋಗುವ ಬಹರದ ಗುಣ ಕೊನೆಗಾಲದಲ್ಲಿ ಕನ್ನಡದಲ್ಲಿ ಅನಾವರಣಗೊಂಡವು.

ಆದರೆ ಅವರು ಕಡೆಗಾಲದಲ್ಲಿ ದೊಡ್ಡ ಮಹತ್ವಾಕಾಂಕ್ಷೆಯ ಕಾದಂಬರಿ ಬರೆಯುವ ಆಸೆಯನ್ನು ನನ್ನೊಂದಿಗೆ ಹೇಳಿಕೊಂಡಿದ್ದರು. ಆ ಆಸೆ ಮಾತ್ರ ಕೈಗೂಡಲಿಲ್ಲ.

ಪ.ಗೋ ವೃತ್ತಿಯಿಂದ ನಿವೃತ್ತರಾಗಿದ್ದರೂ ಅವರ ಗೈರುಹಾಜರಿಯನ್ನು ರಾಜಕಾರಣಿಗಳು, ಕಾರ್ಯಕ್ರಮದ ಸಂಘಟಕರು ನೆನಪಿಸಿಕೊಳ್ಳುತ್ತಿದ್ದರು. ಒಂದೇ ಮಾತಲ್ಲಿ ಹೇಳುವುದಾದರೆ ಪ.ಗೋ ವರದಿಗಾರಿಕೆಯಲ್ಲಿ ಎಲ್ಲರ ಮನಸ್ಸಿನಲ್ಲಿ ಅಳಿಸಲಾಗದ ಮುದ್ರೆಯೊತ್ತಿದ್ದರು. ವೈಯಕ್ತಿಕವಾಗಿ ನನ್ನ ವೃತ್ತಿ ಬದುಕಿನಲ್ಲಿ ನೆರಳಾಗಿದ್ದವರು ಪ.ಗೋ ಎಂದೂ ಆಸ್ಪತ್ರೆಯಲ್ಲಿ ಒಳರೋಗಿಯಾಗಿರದವರು ಅಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದರು.

ನಿರುಮ್ಮುಳವಾಗಿ ಮಲಗಿದಲ್ಲಿಯೂ ಪ.ಗೋ ಯೋಚಿಸುತ್ತಿದ್ದರೇನೋ ಮೌನವಾಗಿ. ಕೊನೆಗಾಲದ ಆಸೆಯನ್ನೆಲ್ಲಾ ಹೇಳಿಕೊಳ್ಳದ ಪ.ಗೋ ಕೇಳಿದರಂತೆ ಒಂದೇ ಒಂದು ಬೀಡಿಯನ್ನು ಹೊಗೆ ಬಿಡಲು. ಕೊಡದಿದ್ದಾಗ ಎಲ್ಲವನ್ನೂ ಬಿಟ್ಟೆ ಬೀಡಿಗೂ ತಿಲಾಂಜಲಿ ಬಿಟ್ಟೆ ಎನ್ನುತ್ತಾ ಕಣ್ಮುಚ್ಚಿದವರು ಇಹಲೋಕವನ್ನೇ ತ್ಯಜಿಸಿದ್ದರು.

ಹಗಲೂ ರಾತ್ರಿ ಸಾವಿರಾರು ಜನ ದುಡಿದು ಮುದ್ರಿಸಿದ ಪತ್ರಿಕೆ ಓದುಗನ ಕೈ ಸೇರಿದ ಮೇಲೆ ಅದು ಅವನ ಸೊತ್ತು. ನಾಲ್ಕು ದಶಕಗಳ ಕಾಲ ಊರೂರು ತಿರುಗಾಡಿ, ಕೇರಿ ಕೇರಿ ಅಲೆದಾಡಿ ಪ.ಗೋ ಕಟ್ಟಿಕೊಟ್ಟ ಅನುಭವದ ಬುತ್ತಿಯನ್ನು ಕಾಪಿಟ್ಟುಕೊಂಡು ಬರುತ್ತಿದ್ದೇನೆ, ಈಗ ನಿಮ್ಮೆದುರು ಹೇಳಿಕೊಂಡಿದ್ದೇನೆ ಇದು ಇನ್ನು ನಿಮ್ಮ ಸೊತ್ತು.

ಕಟ್ಟಕಡೆಯದಾಗಿ ಪ.ಗೋ ಅವರ ಬುದ್ಧಿಮತ್ತೆಗೆ ಬೆಲೆ ಕಟ್ಟಲಾರೆ, ತಿದ್ದಿ ಬುದ್ಧಿ ಹೇಳಿದ ಅವರ ಋಣ ತೀರಿಸಲಾರೆ, ಅವರ ನೆನಪಲ್ಲಿ ಜಾರುವ ಈ ಬಿಂದು ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲಾರೆ. (ಮುಗಿಯಿತು)

Chidambara-Baikampady

– ಚಿದಂಬರ ಬೈಕಂಪಾಡಿ

Write A Comment