ಕರಾವಳಿ

ಚಿದು ಬರೆಯುವ ಪ.ಗೋ ಸರಣಿ -15 : ಪತ್ರಕರ್ತನೊಳಗೊಬ್ಬ ಅದ್ಭುತ ಕಲಾವಿದನಿದ್ದ

Pinterest LinkedIn Tumblr

pa.gopalakrishna (1)

ಪ.ಗೋಪಾಲಕೃಷ್ಣ ಕೇವಲ ಪತ್ರಕರ್ತರೇ ಖಂಡಿತಕ್ಕೂ ಅಲ. ಅದು ಅವರಲ್ಲಿದ್ದ ಹಲವು ಪ್ರತಿಭೆಗಳಲ್ಲಿ ಒಂದು. ನಾವು ಅನೇಕ ಸಂದರ್ಭಗಳಲ್ಲಿ ಬಹುಮುಖ ಪ್ರತಿಭೆ ಎನ್ನುತ್ತೇವೆ. ಗೋವು ಕೂಡಾ ಬಹುಕಾರಣಗಳಲ್ಲಿ ಪ್ರಯೋಜನಕಾರಿ. ಇದನ್ನೇ ನಾನು ಪ.ಗೋ ಅವರನ್ನು ನಿಮ್ಮದು ಬಹುಮುಖ ಪ್ರತಿಭೆ ಎಂದರೆ ಸರಿಯಲ್ಲ, ಎಲ್ಲರಿಗೂ ಇದನ್ನೇ ಬಳಸುತ್ತಾರೆ, ನಿಮಗೆ ಒಂಥರಾ ಡಿಫರೆಂಟ್ ಆಗಿ ಹೆಸರಿಡುತ್ತೇನೆ ಎಂದಾಗ ನನ್ನಪ್ಪ ನನಗೆ ನಾಮಕರಣ ಮಾಡಿದ್ದಾನೆ, ನೀನು ನಾಮಕರಣ ಮಾಡುವುದು ಬೇಡವೆಂದರು.

ನಿಮ್ಮಪ್ಪ ಮಾಡಿದ ನಾಮಕರಣದ ಉದ್ದೇಶ ಮಗನನ್ನು ಕರೆಯಲು ಯಾವ ಹೆಸರು ಬೇಕೆನ್ನುವ ಕಾರಣಕ್ಕೆ ಆದರೆ ನಾನು ನಾಮಕರಣ ಮಾಡುವುದು ನಿಮ್ಮ ಪ್ರತಿಭೆಯನ್ನು ಕೊಂಡಾಡಲು, ನೀವು ಒಪ್ಪಿ ಬಿಡಿ ನಿಮ್ಮದು ಗೋಮುಖಪ್ರತಿಭೆ ಎಂದಿದ್ದೆ. ಆಗ ಅವರು ನಕ್ಕು ಬಚಾವ್ ನನ್ನನ್ನು ಗೋಮುಖವ್ಯಾಘ್ರ ಎನ್ನಲಿಲ್ಲವಲ್ಲ ಎಂದು ನಕ್ಕು ಬುಸ್ ಬುಸ್ ಎಂದು ಬೀಡಿ ಹೊಗೆ ಬಿಟ್ಟು ಬಾ ಚಹ ಕುಡಿಸು ಎಂದು ಕರೆದುಕೊಂಡೂ ಹೋಗಿ ತಾವೇ ಹಣಕೊಟ್ಟಿದ್ದರು.

ಪ.ಗೋ ಅವರ ಒಡನಾಟದಲ್ಲಿ ಸಲುಗೆಯಿಂದಲೇ ಇದ್ದರೂ ಅವರ ಬರವಣಿಗೆಯ ಕಲಾತ್ಮಕತೆಯನ್ನು ಗ್ರಹಿಸುತ್ತಿದ್ದೆ. ಬರವಣಿಗೆ ಪತ್ರಕರ್ತನ ಆತ್ಮತೃಪ್ತಿಗಾಗಿ ಅಲ್ಲ, ಓದುಗನ ಮಸ್ತಕಕ್ಕೆ ನಿಲುಕಬೇಕು ಎನ್ನುವುದನ್ನು ಪ.ಗೋ ಅವರಿಂದಲೇ ಕಲಿತೆ. ಕೆಲವೊಮ್ಮೆ ಸಾಹಿತ್ಯದ ಕಾರ್ಯಕ್ರಮಗಳನ್ನು ವರದಿ ಮಾಡುವಾಗ ಕ್ಲಿಷ್ಟವಾದ ಭಾಷೆಯನ್ನು ಬಳಸುತ್ತಿದ್ದೆ. ಆ ರೀತಿಯ ಬಳಕೆ ಉದ್ದೇಶಪೂರ್ವಕವಾಗಿ ಅಲ್ಲ. ನನ್ನ ಒಲವು ಸಾಹಿತ್ಯದ ಕಡೆಗಿದ್ದ ದೌರ್ಬಲ್ಯಕ್ಕೇ ಇರಬೇಕು. ಅಂಥ ಸಂದರ್ಭದಲ್ಲಿ ಪ.ಗೋ ನಾನು ಬರೆದ ವಾಕ್ಯಗಳನ್ನು ಗುರುತು ಮಾಡಿಕೊಂಡು ಬಂದು ನನಗೆ ತೋರಿಸಿ ಇದರೊಂದಿಗೆ ಕನ್ನಡ ಡಿಕ್ಷನರಿಯನ್ನೂ ನಿನ್ನ ಪತ್ರಿಕೆ ಓದುವವನಿಗೆ ಕಳುಹಿಸಿಕೊಡು ಎನ್ನುವ ಮೂಲಕ ನನ್ನ ತಪ್ಪನ್ನು ತಿದ್ದುತ್ತಿದ್ದರು.

ಈ ಸಂದರ್ಭದಲ್ಲಿ ನೆನಪಾದ ಘಟನೆ ಹೇಳುತ್ತೇನೆ.ತುಮಕೂರು ಅಥವಾ ಬಳ್ಳಾರಿ ಜಿಲ್ಲೆಯಲ್ಲೇ ಇರಬೇಕು. ದಲಿತರ ಮೇಲೆ ದೌರ್ಜನ್ಯ, ಅಮಾನುಷವಾಗಿ ನಡೆಸಿಕೊಂಡ ಘಟನೆ ನಡೆದಿತ್ತು. ಅದು ಆ ದಿನದ ಸುದ್ದಿ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿಯಾಗಿ ಸುದ್ದಿಗಳನ್ನು ಬರೆಯಲಾಗಿತ್ತು. ಆದರೆ ಎಲ್ಲ ಪತ್ರಿಕೆಗಳ ಸುದ್ದಿಯ ತಾತ್ಪರ್ಯವೂ ಒಂದೇ ಆಗಿತ್ತು.

ದಲಿತ ಯುವಕನನ್ನು ಕಟ್ಟಿ ಹಾಕಿ ಬಲಾತ್ಕಾರವಾಗಿ ಅಮೇಧ್ಯ (ದ್ಯ) ಪ್ರಾಶನ ಮಾಡಿಸಲಾಯಿತು ಎನ್ನುವುದು ಒಂದು ವಾಕ್ಯ. ಇದರಲ್ಲಿ ಎರಡು ಪದಗಳನ್ನು ಪ.ಗೋ ನನಗೆ ತೋರಿಸಿದರು. ಅಮೇಧ್ಯ ಮತ್ತೊಂದು ಪ್ರಾಶನ. ಯಾಕೆ ಈ ಪದ ಬಳಕೆ ಮಾಡಿದ್ದಾರೆ ಎನ್ನುವುದು ಪ.ಗೋ ಪ್ರಶ್ನೆ ಮತ್ತು ಸಾತ್ವಿಕ ಕೋಪ. ಅಮೇಧ್ಯ ಎಂದರೆ ಎಷ್ಟು ಜನರಿಗೆ ಅರ್ಥವಾಗುತ್ತದೆ?, ಪ್ರಾಶನ ಎನ್ನುವ ಪದ ಕೂಡಾ ಎಷ್ಟು ಓದುಗರಿಗೆ ಅರ್ಥವಾಗುತ್ತದೆ?. ಹೇಳು ನೀನೂ ಒಬ್ಬ ದಲಿತ, ಬಂಡಾಯಗಾರ ಬೇರೆ ಎಂದು ಕೆಣಕಿದರು.

ಅವರು ಬರೆದರೂ ಪ್ರಿಂಟ್ ಆಯ್ತು ಬಿಟ್ಟು ಹಾಕಿ ನಿಮಗೆ ಯಾಕೆ ಆ ಪದಗಳ ಉಸಾಬರಿ ಎಂದೆ. ಆದರೆ ಪ.ಗೋ ಬಿಡುತ್ತಾರೆಯೇ. ಅಲ್ಲ ಮಾರಾಯ ಪತ್ರಿಕೆ ಕೆಲಸ ಏನು?. ಸುದ್ದಿ, ಮಾಹಿತಿ ಮುಟ್ಟಿಸುವುದಷ್ಟೇ ಅಲ್ಲ ತಿಳ್ಕೋ?. ಇನ್ನೇನು ಎಂದೆ.

ಅದನ್ನೂ ನಾನೇ ಹೇಳ್ಬೇಕು ಕರ್ಮ ಕರ್ಮ ಎಂದು ಹಣೆಗೆ ಬಡಿದುಕೊಂಡು ಎಜುಕೇಟ್ ಮಾಡುವುದು ಅಂದ್ರೆ ಏನು? ಕೇಳಿದರು, ಕಲಿಸುವುದು ಎಂದೆ. ಅದನ್ನು ನೀನು ಪತ್ರಕರ್ತನಾಗಿ ನಿನ್ನ ಪತ್ರಿಕೆ ಮೂಲಕ ಮಾಡ್ತಾ ಇದ್ದೀಯಾ?. ಹಾಗೊಂದು ವೇಳೆ ಮಾಡ್ತಾ ಇದ್ರೆ ಇಂಥ ಪದ ಬಳಕೆ ಯಾಕೆ ಮಾಡಿದೆ?. ನಾನೆಲ್ಲಿ ಮಾಡಿದ್ದೇನೆ ಅದು ನನ್ನ ಪತ್ರಿಕೆಯಲ್ಲ ಎಂದೆ.

ಅದು ಗೊತ್ತು ಮಾರಾಯ, ಸರಿಯಾಗಿ ಕೇಳಿಸ್ಕೋ. ನೀನು ಅಂದ್ರೆ ಇಲ್ಲಿ ನೀನಲ್ಲ, ಪತ್ರಕರ್ತ, ಈ ಸುದ್ದಿ ಬರೆದ ಬ್ರಹ್ಮ ಎಂದರು . ಹಾಗೆ ಹೇಳಿ ಮತ್ತೆ ನನ್ನನ್ನು ನೀವು ಟಾರ್ಗೆಟ್ ಮಾಡ್ತೀರಿ.

ಈಗಿನ ಪಡ್ಡೆಗಳಿಗೆ ಕೋಪ ಮೂಗಿನ ತುದಿಯಲ್ಲಿರುತ್ತೆ. ನೋಡು ಅಮೇಧ್ಯ ಎನ್ನುವ ಬದಲು ಮಲ, ಪ್ರಾಶನ ಬದಲು ತಿನ್ನಿಸಿದರು ಎಂದರೇ ಏನಾಗುತಿತ್ತು?, ನಿನ್ನ ಗಂಟು ಹೋಗ್ತಾ ಇತ್ತೇ? ಕೇಳಿದರು.

ಹೌದಲ್ಲ ಜನರಿಗೆ ಅತ್ಯಂತ ಸುಲಭವಾಗಿ ಅರ್ಥವಾಗಿ ಬಿಡುವ ಪದಗಳು ಅನ್ನಿಸಿತು. ಇದನ್ನು ಪತ್ರಿಕೋದ್ಯಮ ಶಿಬಿರಗಳಲ್ಲಿ ಸುದ್ದಿ ಬರವಣಿಗೆ ಹೇಗಿರಬೇಕೆನ್ನುವ ಉಪನ್ಯಾಸ ಕೊಡುವ ಕಾರ್ಯಕ್ರಮ ಸಂದೇಶದಲ್ಲಿ ನಡೆದಿದ್ದಾಗ ನಾನು ಪ.ಗೋ ಅವರು ತೋರಿಸಿದ್ದ ಉದಾಹರಣೆಯನ್ನು ವಿವರಿಸಿದೆ. ದುರಾದೃಷ್ಟಕ್ಕೆ ಪ.ಗೋ ಕೂಡಾ ಹಿಂದಿನ ಸಾಲಿನಲ್ಲಿ ತಲೆಬಗ್ಗಿಸಿಕೊಂಡು ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಉಪನ್ಯಾಸ ಮುಗಿದ ಮೇಲೆ ಹತ್ತು ಸ್ಕೂಟರ್ ಎಂದವರೇ ನೇರವಾಗಿ ತಾಜ್ ಮಹಲ್ ಹೊಟೇಲ್ ಮುಂದೆ ನಿಲ್ಲಿಸಿ ನನ್ನ ಪೇಟೆಂಟ್ ಕದಿತೀಯಾ, ಅವೊತ್ತು ಹಾರಾಡಿದೆ ಬಾ ಈಗ ದೋಸೆ ತಿನ್ನಿಸು ಎಂದು ಪಟ್ಟು ಹಿಡಿದರು.

ನನಗೆ ಅರ್ಥವಾಗಲಿಲ್ಲ ಆಗ. ಯಾವ ಪೇಟೆಂಟ್ ಕೇಳಿದೆ. ಮರೀ ಈ ನಾಟ್ಕ ಎಲ್ಲ ಬೇಡಾ ಬಾ ಎನ್ನುತ್ತಾ ಕೈಹಿಡಿದು ಟೇಬಲ್ ಮುಂದೆ ಕೂರಿಸಿ ಬರವಣಿಗೆ ಹೇಗಿರಬೇಕು, ಓದುಗನಿಗೆ ಅರ್ಥವಾಗಬೇಕು, ಕಬ್ಬಿಣದ ಕಡಲೆಯಾಗಬಾರದು. ಉದಾಹರಣೆಗೆ ಅಮೇಧ್ಯ ಪ್ರಾಶನ ಎಂದು ರಿಪೀಟ್ ಮಾಡಿದಾಗ ನನಗೆ ಹೊಳೆಯಿತು ಆ ದಿನ ಪ.ಗೋ ಹೇಳಿದ್ದ ಪಾಠವನ್ನು ಇವೊತ್ತು ಶಿಬಿರಾರ್ಥಿಗಳಿಗೆ ಹೇಳಿದ್ದೆ.

ನಿನಗೆ ಯಾವೊತ್ತಾದರೂ ಉಪಕಾರಕ್ಕೆ ಬರಬಹುದು ಅಂತಲೇ ಆ ದಿನ ಬಿಡಿಸಿ ಬಿಡಿಸಿ ನಿನಗೆ ತಪ್ಪನ್ನು ತೋರಿಸಿದ್ದೆಂದರು. ಇದು ಪ.ಗೋ ಅವರ ಪತ್ರಿಕಾ ಬರವಣಿಗೆಯ ಸೂಕ್ಷ್ಮಗಳು ಅಥವ ಅವರಿಗಿದ್ದ ಒಳನೋಟಗಳು.

ಆದ ಕಾರಣವೇ ಪ.ಗೋ ಕೇವಲ ಪತ್ರಕರ್ತ ಅಲ್ಲ ಅವರಲ್ಲಿ ಅಗಾಧವಾದ ಪ್ರತಿಭೆಯಿತ್ತು ಎನ್ನುವುದು. ಇದನ್ನು ಅವರ ಒಡನಾಡಿಯಾಗಿದ್ದ ಮತ್ತು ಕರಾವಳಿ ಮತ್ತು ಕೇರಳ ರಾಜ್ಯಗಳ ಅಡಿಕೆ ಬೆಳೆಗಾರರು ದಿನವೂ ನೆನಪಿಸಿಕೊಳ್ಳಬೇಕಾದ ವಾರಣಾಸಿ ಸುಬ್ರಾಯ ಭಟ್ಟರು ಸ್ವತ: ತಮ್ಮ ಲೇಖನದಲ್ಲಿ ಒಪ್ಪಿಕೊಂಡಿದ್ದಾರೆ.

ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ಕೇರಳ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಮತ್ತು ಕೊಕ್ಕೋ ಬೆಲೆಯಿಲ್ಲದೆ ಬೆಳೆದ ರೈತರು ಕಂಗಾಲಾಗಿದ್ದಾಗ ಕ್ಯಾಂಪ್ಕೋ ಸಂಸ್ಥೆಯನ್ನು ಹುಟ್ಟುಹಾಕಲಾಯಿತು 1973ರಲ್ಲಿ. ಸಹಕಾರಿ ಸಂಸ್ಥೆ ಜನ್ಮ ತಳೆದ ಕಾರಣವೇ ಅಡಿಕೆಗೂ ಬೆಲೆ, ಬೆಳೆದವರಿಗೂ ಬೆಲೆ ಎನ್ನುವಂತಾಯಿತು.

campco

ಕೇರಳ ಮತ್ತು ಕರ್ನಾಟಕ ಈ ಭಾಗದ ರೈತರೇ ಸೇರಿ ಕಟ್ಟಿದ ಕ್ಯಾಂಪ್ಕೋ ಸಂಸ್ಥೆಗೆ ಸಾರಥ್ಯ ವಹಿಸಿದ್ದವರು ವಾರಣಾಸಿ ಸುಬ್ರಾಯ ಭಟ್ರು. ಆ ಕಾಲದಲ್ಲಿ ಕೂಡಾ ಪ್ರಖ್ಯಾತ ಚಿತ್ರಕಲಾವಿದರು ಇದ್ದರು, ಆದರೆ ಈಗಿನಷ್ಟು ಕಮರ್ಷಿಯಲ್ ಆಗಿರಲಿಲ್ಲ. ಈಗ ಎಲ್ಲಿ ಬೇಕಾದರೂ ನಿಮ್ಮ ಅಭಿರುಚಿಗೆ ಬೇಕಾದಂತೆ ಚಿತ್ರ ಬರೆದುಕೊಡುವವರು ಸಿಗುತ್ತಾರೆ, ಆದರೆ ಈಗಿನ ಎಲ್ಲವೂ ಆಧುನಿಕ ಸಲಕರಣೆ ಬಳಸಿಯೇ ನಿರ್ಮಿಸುವಂಥವು.

ವಾರಣಾಸಿ ಸುಬ್ರಾಯ ಭಟ್ರು ಮತ್ತು ಪ.ಗೋ ಖಾಸಾ ದೋಸ್ತ್ ಆಗಿದ್ದರಂತೆ ಎನ್ನುವುದಕ್ಕಿಂತಲೂ ನನಗೆ ಗೊತ್ತಿದ್ದಂತೆಯೂ ಆತ್ಮೀಯರು. ಪುತ್ತೂರಲ್ಲಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಉದ್ಘಾಟನೆಗೆ ಅಂದಿನ ರಾಷ್ಟ್ರಪತಿ ಜೇಲ್ ಸಿಂಗ್ ಬರುವ ಸಂದರ್ಭದಲ್ಲಿ ಪ.ಗೋ ಮತ್ತು ಭಟ್ರು ಆಗಾಗ ಭೇಟಿ ಮಾಡಿ ಮೀಟಿಂಗ್ ಮಾಡುತ್ತಿದ್ದುದು ಗೊತ್ತಿತ್ತು.

ವಾರಣಾಸಿ ಸುಬ್ರಾಯ ಭಟ್ರು ಪ.ಗೋ ಅವರನ್ನು ಕರೆದು ಹೇಳಿದರಂತೆ ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ರೈತರು ಕಟ್ಟುವ ಕ್ಯಾಂಪ್ಕೋ ಸಂಸ್ಥೆಗೆ ಸೂಕ್ತವಾದ ಲೋಗೋ ಬೇಕೆಂದು. ಪ.ಗೋ ತಮ್ಮ ಕಲ್ಪನೆಯನ್ನು ಅಳವಡಿಸಿ ಕ್ಯಾಂಪ್ಕೋ ಲೋಗೋ ಮಾದರಿಯನ್ನು ಕೈಯಲ್ಲಿ ಬಿಡಿಸಿಕೊಟ್ಟರಂತೆ. ಆ ಲೋಗೋವೇ ಈಗಲೂ ಕ್ಯಾಂಪ್ಕೋದ ಅಧಿಕೃತ ಲೋಗೋ. ಇದನ್ನು ಸ್ವತ: ಲೋಗೋ ಬರೆಸಿದ್ದ ವಾರಣಾಸಿಯವರು ಪ.ಗೋ ನಿಧನದ ಬಳಿಕದ ಸಂಸ್ಮರಣೆ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ತಾನು ಕ್ಯಾಂಪ್ಕೋ ಸಂಸ್ಥೆಯ ಲೋಗೋ ಬರೆದುಕೊಟ್ಟವನೆಂದು ಪ.ಗೋ ಎಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ನನಗೂ ಆಕಸ್ಮಿಕವಾಗಿ ಹೇಳಿದ್ದರು. ಪ.ಗೋ ಅಭ್ಯಾಸವೆಂದರೆ ಪತ್ರಿಕಾಗೋಷ್ಠಿ ನಡೆಯುತ್ತಿದ್ದರೆ ತಮಗೆ ಅವರು ಹೇಳುವುದು ಬೇಕಾಗಿಲ್ಲವೆಂದಾದರೆ ಕೇವಲ ಕಿವಿ ಮಾತ್ರ ಅಲ್ಲಿ , ಆದರೆ ಪೆನ್ನು ಹಿಡಿದು ಹಾಳೆಯ ಮೇಲೆ ಗೀಚುತ್ತಿರುತ್ತಿದ್ದರು. ಅದು ಕೇವಲ ವ್ಯರ್ಥವಾಗಿ ಗೀಚುತ್ತಿದ್ದುದಲ್ಲ, ಯಾವುದಾದರೊಂದು ರೇಖಾ ಚಿತ್ರವಾಗಿರುತ್ತಿತ್ತು. ಹತ್ತು ಹದಿನೈದು ನಿಮಿಷಗಳಲ್ಲಿ ಅವರು ಗೀಚುತ್ತಲೇ ಒಂದು ಚಿತ್ರ ಬರೆಯುತ್ತಿದ್ದರು. ಪತ್ರಿಕಾಗೋಷ್ಠಿ ಮುಗಿದ ಮೇಲೆ ಆ ಹಾಳೆಯನ್ನು ನನ್ನ ಕಿಸೆಗೆ ತುರುಕಿ ನಗುತ್ತಿದ್ದರು.

ಅವರ ಆ ಚಿತ್ರಗಳನ್ನು ಗಮನಿಸಿ ನೀವು ಚಿತ್ರಕಲಾವಿದರೇ ಅಥವಾ ಕಲಾಕೋವಿದರೇ ? ಎಂದು ರೇಗಿಸಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ ನೀನು ಪೆನ್ನು ಹಿಡಿಯುವ ಮೊದಲೇ ಕ್ಯಾಂಪ್ಕೋಗೆ ಚಿತ್ರ ಬರೆದುಕೊಟ್ಟೆ ಎಂದಿದ್ದರು. ಆದರೆ ಯಾವ ಚಿತ್ರವೆಂದು ಗುಟ್ಟು ಬಿಟ್ಟುಕೊಡಲಿಲ್ಲ. ಮತ್ತೆ ನನ್ನ ನೆರವಿಗೆ ಬಂದವರು ನರಸಿಂಹ ರಾವ್. ಕ್ಯಾಂಪ್ಕೋಗೆ ಲೋಗೋ ಬರೆದುಕೊಟ್ಟದ್ದು ಇದೆ ಪುಣ್ಯಾತ್ಮ ಎಂದರು.

ಇಲ್ಲೂ ಪ.ಗೋ ನನಗೆ ಗೊತ್ತಾಗಬಾರದೆಂದು ಲೋಗೋ ಎನ್ನಲಿಲ್ಲ, ಚಿತ್ರವೆಂದಿದ್ದರು. ಆ ನಂತರ ಆ ಲೋಗೋವನ್ನು ಹೆಚ್ಚು ಗಮನವಿಟ್ಟು ನೋಡಿದೆ. ಅಡಿಕೆ ಮರ, ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಕ್ಯಾಂಪ್ಕೋ ಬರೆದು ಚಿಕ್ಕ ಚಿತ್ರದೊಳಗೆ ಎಲ್ಲವನ್ನೂ ಒಳಗೊಳಿಸಿದ್ದರು. ಈಗ ನೀವು ನೋಡಿದರೂ ಆ ಲೋಗೋ ಕಲ್ಪನೆ ಅರಿವಾಗಬಹುದು, ಪತ್ರಕರ್ತನೊಳಗೂ ಕಲಾವಿದನಿದ್ದ.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment