ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-8: ಐ ಡೋಂಟ್ ಕೇರ್ …ಕತ್ತೆ ಬಾಲ

Pinterest LinkedIn Tumblr

Pa Go cartoon by Harini

ರಾಘವೇಂದ್ರ ಮಠದಿಂದ ಹೊರಟ ಪ.ಗೋ ಸವಾರಿ ನಾನು ಕಚೇರಿ ಮುಟ್ಟುವ ಮೊದಲೇ ನನ್ನ ಮುಂದೆ ಕುಳಿತಿದ್ದರು. ಸಾಮಾನ್ಯವಾಗಿ ಅವರು ಕಾರ್ಯಕ್ರಮ ಮುಗಿದ ತಕ್ಷಣ ಸುದ್ದಿ ಕಳುಹಿಸಿ ನಂತರ ತಿರುಗಾಟ ಮಾಡುವ ಅಭ್ಯಾಸ. ಆದರೆ ಅಂದು ಸೀದಾ ನನ್ನ ಕಚೇರಿಗೆ ಬಂದಿದ್ದರು.

ಬಹುಷ ಮಯ್ಯ ಪ.ಗೋ ಕಾಲು ಎಳೆದ ಸಿಟ್ಟಿಗೇ ಇರಬೇಕು ಅಂದುಕೊಂಡೆ. ಹೌದಾ ಮಾರಾಯ ಇನ್ನು ನೀನೂ ಪೇಜಾವರ ಸ್ವಾಮೀಜಿಗಳಿಗೆ ತೀರಾ ಪರಿಚಿತನಾಗಿಬಿಟ್ಟೆ ಎಂದರು.

ನನಗೆ ಅರ್ಥವಾಗಲಿಲ್ಲ ಅವರ ಮಾತಿನ ಧಾಟಿ. ಅವರೇ ಮುಂದುವರಿದು ಹೇಳಿದರು ನೀನೇನಾದರೂ ಉಳಿದವರಂತೆ ಕಾಲಿಗೆ ಉದ್ದಂಡ ಬಿದ್ದಿದ್ದರೆ ಇವನೂ ನಮ್ಮ ಪೈಕಿಯವನು ಅಂದುಕೊಂಡು ಫಲಮಂತ್ರಾಕ್ಷತೆ ಕೊಡುತ್ತಿದ್ರು, ಆದರೆ ನೀನೂ ನನ್ನಂತೆಯೇ ಬಗ್ಗಿ ಕೈಮಾತ್ರ ಚಾಚಿದಾಗಲೇ ಈ ಮನುಷ್ಯನೂ ಯಾರೋ ಭಿನ್ನಮತೀಯ ಅಂದುಕೊಂಡು ನಿನ್ನ ಪರಿಚಯ ಮಾಡಿಕೊಂಡರು ಎಂದರು.

ನನಗೂ ಪ.ಗೋ ಮಾತು ಹೌದೆನಿಸಿತು. ಸ್ವಾಮೀಜಿ ಕಾಲಿಗೆ ಬೀಳುವುದು ಅವರವರ ಇಚ್ಚೆಗೆ ಬಿಟ್ಟ ವೈಯಕ್ತಿಕ ವಿಚಾರವಲ್ಲವೇ ಅಂದೆ. ಹಾಗೆಂದು ನೀನು ಹೇಳಬಹುದು, ಆದರೆ ಒಂದು ಸಂಸ್ಕೃತಿಗೆ ಒಗ್ಗಿಕೊಂಡ ಜನ ಅದನ್ನೇ ಎಲ್ಲರೂ ಪಾಲಿಸಬೇಕೆನ್ನುತ್ತಾರೆ, ಅದು ಸರಿಯಲ್ಲ ಎಂದು ಹೇಳಿದರೆ ಮಯ್ಯರಂಥವರು ಉಲ್ಟಾ ಮಾತಾಡ್ತಾರೆ ಎಂದರು.

ನಾನು ಸ್ವಾಮೀಜಿ ಕಾಲಿಗೆ ಉದ್ದಂಡ ನಮಸ್ಕಾರ ಮಾಡದಿದ್ದದ್ದೇ ನನ್ನನ್ನು ಸ್ವಾಮೀಜಿ ಗುರುತಿಸಲು ಸಾಧ್ಯವಾಯಿತು ಎನ್ನುವ ಪ.ಗೋ ಥಿಯರಿಯನ್ನು ಅರ್ಥೈಸಿಕೊಂಡೆ. ಅವರು ಹೇಳಿದಂತೆ ನಾನೂ ಸಹಜವಾಗಿ ಉದ್ದಂಡ ಬೀಳುತ್ತಿದ್ದರೆ ನನ್ನನ್ನು ಪ್ರಶ್ನೆ ಮಾಡುವ ಸಂಭವೇ ಇರುತ್ತಿರಲಿಲ್ಲ.

ಮರಿ ಉದ್ದಂಡ, ಕೋದಂಡ ಯಾವುದೋ ದಂಡ ಬಿದ್ದಾಕ್ಷಣ ನೀನು ಕಳಕೊಳ್ಳುವುದೂ ಇಲ್ಲ, ಅವರಿಗೆ ಅದರಿಂದ ಲಾಭವಾಗುವುದೂ ಇಲ್ಲ, ಕೇವಲ ಮಾನಸಿಕ ತೃಪ್ತಿ ಮಾತ್ರ ಎಂದರು ಪ.ಗೋ.

ಒಂದು ವೇಳೆ ಉದ್ದಂಡ ಬಿದ್ದರೆ ತಪ್ಪೇನು ನನ್ನ ಕಿರಿಕ್ ಪ್ರಶ್ನೆ. ಅದಕ್ಕೆ ಅವರ ತಟ್ಟನೆಯ ಉತ್ತರ ಬಾ ಕರ್ಕೊಂಡು ಹೋಗ್ತೀನಿ ಮಠಕ್ಕೆ ಹೋಗಿ ಬೀಳು. ಆಯ್ತು ನೀನು ಉದ್ದಂಡ ಬಿದ್ದೆ ಅಂದ್ಕೋ ನಿನ್ನನ್ನು ಜೊತೆಯಲ್ಲಿ ಕುಳಿತುಕೊಳಿಸಿಕೊಂಡು ಊಟ ಮಾಡ್ತಾರೆ ಅಂದುಕೊಂಡಿದ್ದೀಯಾ ಏ ದಲಿತಾ ನಕ್ಕರು.

ಪ.ಗೋ ಹಾಗೆ ಹೇಳಿದಾಗ ನಿಜಕ್ಕೂ ನಾನು ಕ್ಷಣ ಯೋಚಿಸಿದೆ. ಏನ್ ಮರೀ ಗಾಢ ಯೋಚನಾ ಲಹರಿ, ಚಹಾ ಕುಡಿಸುವ ಕಾರ್ಯಕ್ರಮ ಇದೆಯೋ ? ಲಘುವಾಗಿಯೇ ಕೇಳಿದರು. ನಿಮಗೆ ಚಹಾ ಕುಡಿಸುವ ಆದರೆ ಇಂಥ ವ್ಯವಸ್ಥೆಗಳನ್ನು ಯಾವ ಪುಣ್ಯಾತ್ಮ ಮಾಡಿದವನು ? ಕೇಳಿದೆ.

ಅಹಾ…ಅಹಾ ಈಗ ನೀನು ಟ್ರ್ಯಾಕಿಗೆ ಬಂದೆ ಎಂದರು. ಮರೀ ಯಾವಾಗಲೂ ಒಂದನ್ನು ತಿಳ್ಕೋ. ನೀನು ಅಲ್ಲಿಗೆ ಪತ್ರಕರ್ತನಾಗಿ ಹೋಗಿದ್ದೆ, ನಿನ್ನ ಕೆಲಸ ಏನು ವರದಿ ಮಾಡುವುದು. ಸ್ವಾಮೀಜಿಯ ಶಿಷ್ಯನಾಗಿ, ಮಠದ ಭಕ್ತನಾಗಿ ಹೋಗಿದ್ದರೆ ನೀನು ಏನಾದರೂ ಮಾಡ್ಕೋ ಯಾರೂ ಕೇಳುವುದಿಲ್ಲ ಆಗಲೂ ಈಗಲೂ, ಆದರೆ ನಿನ್ನ ಅಂತರಾತ್ಮಕ್ಕೆ ಮೋಸ ಮಾಡಬೇಡ. ನಿನಗೆ ವೃತ್ತಿ ಗೌರವ ಬೇಕು ಅಂತಾದರೆ ವೃತ್ತಿಯಲ್ಲಿದ್ದಾಗ ಯಾವೊತ್ತೂ ವೃತ್ತಿಗೆ ವಿರುದ್ಧವಾಗಿ ಏನನ್ನೂ ಮಾಡಬಾರದು. ಪೆನ್ನು, ಪುಸ್ತಕ, ಕಂಕುಳಲ್ಲಿ ಚೀಲ ಇಟ್ಟುಕೊಂಡು ಉದ್ದಂಡ ಬಿದ್ದರೆ ಅದರೊಂದಿಗೆ ನಿನ್ನ ವೃತ್ತಿಯೂ ಅಡ್ಡ ಬಿತ್ತು ಅಂತಲೇ ಅರ್ಥ. ಬೇರೆಯವರನ್ನು ಕೇಳಿದರೆ ಅಲ್ಲ, ಇಲ್ಲ ಅಂತೆಲ್ಲಾ ವಿತಂಡ ವಾದ ಮಾಡ್ತಾರೆ ಅದು ಅವರ ಹಣೇಬರಹ ಸಾಕು ಬಾ ಚಹಾ ಕುಡಿಸು ಪ.ಗೋ ಕೈಹಿಡಿದು ಎಳೆಯತೊಡಗಿದರು.

ಪ.ಗೋ ಸರಳವಾಗಿ ಹೇಳಿದ ಮಾತನ್ನು ಅವರು ಹೋದ ಮೇಲೆ ಯೋಚಿಸಿದೆ. ಪ.ಗೋ ಹೇಳಿದ್ದರಲ್ಲಿ ಅರ್ಥವಿದೆ ಅನ್ನಿಸಿತು.
ಸ್ವಾಮೀಜಿ ಕಾಲಿಗೆ ಉದ್ದಂಡ ನಮಸ್ಕಾರ ಮಾಡದಿದ್ದುದು ಅಪಚಾರವೆಂದು ಅವರು ಹೇಳಿದರೂ ಪ.ಗೋ ಥಿಯರಿಯನ್ನು ಒಪ್ಪುವುದಾದರೆ ಉದ್ದಂಡ ಬಿದ್ದರೆ ವೃತ್ತಿಗೆ ಅಪಚಾರವಾಗುತ್ತದೆ.

ಮರುದಿನ ಪ.ಗೋ ಸಂಜೆ ಹರಟೆ ಹೊಡೆಯಲು ಬಂದಾಗ ಮತ್ತೆ ಹಿಂದಿನ ದಿನದ ಮಾತನ್ನೇ ಕೆದಕಿದೆ. ಮತ್ತೆ ಮತ್ತೆ ಯಾಕೆ ಕೊಜಂಟಿಯನ್ನು ಜಗಿಯುತ್ತಿ, ನಿನ್ನೆಯದು ನಿನ್ನೆಗೇ ಕ್ಲೋಸ್ ಅಂದರು. ಆದರೆ ನಾನು ಬಿಡಬೇಕಲ್ಲ, ಕಾಡಿದೆ. ನಿಮ್ಮದೆಲ್ಲ ಅಡ್ಡಗೋಡೇ ಮೇಲೆ ದೀಪ ಇಟ್ಟಹಾಗೆ ಎಂದೆ.
ಮರಿ ಏನದು ಅಡ್ಡಗೋಡೆ ಉದ್ದಗೋಡೇ ಅಂತಿಯಲ್ಲ ಚಪ್ಪೆ ಗುದ್ದು ಬೇಡ ಇದನ್ನೆಲ್ಲಾ ನಾನು ಎಂದೋ ಮಡಿ ಮುಗಿಸಿದ್ದೇನೆಂದರು.
ನನಗೆ ಸರಿಯಾಗಿ ಹೇಳಬೇಕು ಸ್ವಾಮೀಜಿ ಕಾಲಿಗೆ ಉದ್ದಂಡ ಬಿದ್ದರೆ ಹೇಗೆ ವೃತ್ತಿಗೆ ಅಪಚಾರ?.
ನಾನು ಸ್ವಾಮೀಜಿ ಅಂತಲ್ಲ ಯಾರ ಕಾಲಿಗೆ ನೀನು ಕೆಲಸದ ಜವಾಬ್ದಾರಿ ಹೊತ್ತುಕೊಂಡು ಹೋದಿದ್ದಾಗ ಬಿದ್ದರೂ ಅದನ್ನು ಅಪಚಾರವೆಂದೇ ಕರೆಯುತ್ತೇನೆ. ಇದು ನನ್ನ ಅಭಿಪ್ರಾಯ. ಎಲ್ಲವನ್ನೂ ಪುಸ್ತಕದಲ್ಲೇ ಬರೆದಿಲ್ಲ. ಪುಸ್ತಕದ ಬದನೆಕಾಯಿ ಓದಿ ಬದುಕುವುದು ಸಾಧ್ಯವಿಲ್ಲ ತಿಳ್ಕೋ.

ಉದ್ದಂಡ ಬೀಳಲಿಲ್ಲ ಏನಾಗಿಹೋಗುತ್ತೇ?, ಜಗತ್ತು ಮುಳುಗುವುದಿಲ್ಲ. ನೀನು ಸ್ನಾನ ಮಾಡುತ್ತಿ ಯಾಕೆ ನಿನ್ನಮೈ ಕೊಳೆತೊಳೆದುಕೊಳ್ಳುವುದಕ್ಕೆ, ನಾನು ಸ್ನಾನ ಮಾಡುತ್ತೀನಿ ನನ್ನ ಮೈ ಕೊಳೆ ತೊಳೆಯುವುದಕ್ಕೆ. ಸ್ನಾನ ಮಾಡಿದರೆ ಮೈಕೊಳೆ ಹೋಗುತ್ತೆ ಎನ್ನುವುದು ಕೇವಲ ನಂಬಿಕೆಯಲ್ಲ ವಾಸ್ತವ ಕೂಡಾ. ಉದ್ದಂಡ ಬಿದ್ದರೆ ಮಾತ್ರ ಅವನು ದೈವಭಕ್ತ, ಸ್ವಾಮಿಭಕ್ತ ಎನ್ನುವುದು ವಾಸ್ತವ ಅಲ್ಲ, ಅದು ಅವರ ಭ್ರಮೆ. ಮಾಡಬಾರದ ಅನಾಚಾರ ಮಾಡಿ ಉದ್ದಂಡ ಬಿದ್ದು ಹೊರಳಾಡಿದರೆ ಶುದ್ಧವಾಗುವುದಿಲ್ಲ. ನಿನಗೆ ಯಾಕೆ ಇದರಲ್ಲಿ ವಿಪರೀತ ಇಂಟ್ರೆಸ್ಟು?. ಬಿಡು ಮಾರಾಯ ಏನೇ ಆದರೂ ನೀನು ದಲಿತ, ಜನಶಕ್ತಿ ಬೆಳೆತೆಗೆಯುವ ವಡ್ಡರ್ಸೆ ಪಡೆ ಯೋಧನೆಂದು ವಿಚಿತ್ರವಾಗಿ ನಕ್ಕು ಮೇಜಿನ ಮೇಲಿದ್ದ ನೋಟ್ ಪುಸ್ತಕವನ್ನು ಎತ್ತಿ ಬಡಿದರು.

ಪ.ಗೋ ಅವರ ಸ್ವಭಾವ ಮಾತನಾಡುತ್ತಲೇ ಏನಾದರೊಂದು ವಸ್ತುವನ್ನು ಅತ್ತಿಂದಿತ್ತ ಎತ್ತಿ ಸ್ಥಳ ಬದಲಿಸುವುದು, ಕೈನಲ್ಲಿದ್ದ ನೋಟ್ ಪುಸ್ತಕ ವನ್ನು ರಪ್ಪನೆ ಬಡಿಯುವುದು. ಅವರು ಸೀರಿಯಸ್ಸಾಗಿ ಮಾತನಾಡುತ್ತಲೇ ಅಂತ್ಯದಲ್ಲಿ ಲಘುವಾಗಿ ಎಂಡ್ ಮಾಡುತ್ತಿದ್ದರು. ಕೊನೆಯಲ್ಲಿ ನಗೆ ಅದು ಪ.ಗೋ ನಗೆ. ಅದನ್ನು ಕುಹಕವೆನ್ನಿ, ಅಪಹಾಸ್ಯ ಮಾಡಿದರೆನ್ನಿ, ತಮಾಷೆ ಮಾಡಿದರೆನ್ನಿ ಹೇಗೆ ಬೇಕಾದರೂ ವ್ಯಾಖ್ಯಾನಿಸಿ ಅವರ ನಗುವನ್ನು. ಅದನ್ನು ಅವರೇ ಹೇಳುತ್ತಾರೆ ಹೇಗೆ ಬೇಕಾದರೂ ತಿಳಿದು ಕೊಳ್ಳಲಿ ಐ ಡೋಂಟ್ ಕೇರ್ ಕತ್ತೆ ಬಾಲ.

ಪ.ಗೋ ತೀರಾ ವಿಚಿತ್ರ ವ್ಯಕ್ತಿ. ಅವರ ಭಾವನೆಗಳು, ಅವರ ಅಭಿವ್ಯಕ್ತಿಯ ದಾಟಿ, ಅವರ ವ್ಯಾಖ್ಯಾನಗಳು ಸೂಕ್ಷ್ಮಾತಿ ಸೂಕ್ಷ್ಮ. ಎರಡು ದಿನಗಳ ಅವರ ಉದ್ದಂಡ ಬೀಳುವುದರ ಅಭಿಪ್ರಾಯದಲ್ಲಿ ನಾನು ಗ್ರಹಿಸಿದ್ದು ಪ.ಗೋ ಉದ್ದಂಡ ನಮಸ್ಕಾರ ಮಾಡುವುದು ಅಪಚಾರವಲ್ಲ, ವೃತ್ತಿಯಲ್ಲಿದ್ದಾಗ ಮಾಡಿದರೆ ಅಪಚಾರ. ಹಾಗೆಯೇ ಉದ್ದಂಡ ಬೀಳುವುದು ಅನಿವಾರ್ಯವಲ್ಲ ಅವರವರ ವೈಯಕ್ತಿಕ ನಂಬಿಕೆ.

ರಾಜನಾದವನೂ ಗುರುಗಳಿಗೆ ತನ್ನ ಗುರುಭಕ್ತಿಯನ್ನು ತೋರಿಸುತ್ತಾನೆ ಅದಕ್ಕಿರುವ ಕಟ್ಟುಪಾಡುಗಳ ನೆಲೆಯಲ್ಲಿ. ಊರಿಗೆ ಅರಸನಾದರೂ ತಾಯಿಗೆ ಮಗನೇ ಎನ್ನುವುದನ್ನು ಒಪ್ಪಿಕೊಳ್ಳುವುದರ ಜೊತೆಗೆ ಊರಿಗೆ ಅರಸನಾದವನು ತಾಯಿಗೆ ಮಗನಾದರೂ ಅರಸೊತ್ತಿಗೆಯ ಗೌರವವನ್ನು ಉಳಿಸಬೇಕೆನ್ನುವ ಅಲಿಖಿತ ನಿಯಮವಿರುತ್ತದೆ. ಇಂಥ ನಿಯಮ ಪತ್ರಿಕಾವೃತ್ತಿಗೂ ಇದೆ, ಇದನ್ನು ಪಾಲಿಸಬೇಕು ಎನ್ನುವ ಒಳಮರ್ಮವನ್ನು ಪ.ಗೋ ಅವರಿಂದ ಕಲಿತೆ.

ಇಂಥ ಒಳಸುಳಿಗಳನ್ನು ನರಸಿಂಹ ರಾವ್ ಅಥವಾ ಮಯ್ಯರು ಕೊಡುತ್ತಿರಲಿಲ್ಲ. ಪ.ಗೋ ಮಾತ್ರ ಸ್ವಯಂ ಪಾಲಿಸುತ್ತಿದ್ದರು ಅದರಿಂದ ಬೇರೆಯವರು ತಮ್ಮನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಲಿ ಎನ್ನುವ ಸ್ಪಷ್ಟತೆ ಇತ್ತು. ಅವರ ಈ ರೀತಿಯ ನಂಬಿಕೆ ಮತ್ತು ವರ್ತನೆಗಳು ಸಾರ್ವಜನಿಕವಾಗಿ ಗಮನ ಸೆಳೆದರೂ ಯಾರಿಗೂ ಅವರನ್ನು ಪ್ರಶ್ನಿಸುವ ಧೈರ್ಯವಿರಲಿಲ್ಲ. ಯಾಕೆಂದರೆ ಪ.ಗೋ ಬಹುಬೇಗ ಸ್ಫೋಟಗೊಳ್ಳುತ್ತಿದ್ದರು ಇಂಥ ವಿಚಾರಗಳಲ್ಲಿ, ಅವರು ಹಾಗೆಂದು ತಾನು ಪ್ರಶ್ನಾತೀತ ಅಂದುಕೊಳ್ಳುತ್ತಿರಲಿಲ್ಲ. ಇನ್ನಿಬ್ಬರನ್ನು ಪ್ರಶ್ನೆ ಮಾಡುವುದು ಬೇಡ ನಿನ್ನನ್ನು ನೀನು ಪ್ರಶ್ನೆ ಮಾಡಿಕೋ ಎನ್ನುವುದು ಅವರ ಥಿಯರಿ. ಆದ ಕಾರಣವೇ ಆ ಕಾಲದಲ್ಲಿ ಪ.ಗೋ ಅವರನ್ನು ಕಂಡರೆ ಸಂಪ್ರದಾಯಸ್ಥರಿಗೆ worry.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment