ಅಂತರಾಷ್ಟ್ರೀಯ

ನೇಪಾಳ ದುರಂತ: ಸ್ವದೇಶಕ್ಕೆ ಮರಳಿದ ಸ್ಟೀಫನ್ ಮೊರಸ್

Pinterest LinkedIn Tumblr

2604pkt-G2--Romel-stifan-moras__

ಬಂಟ್ವಾಳ, ಮೇ 3: ಹಿಮಾಲಯದ ಹೈಟ್ ರೆಸಾರ್ಟ್‌ನಲ್ಲಿದ್ದಾಗ ಭೂಮಿ ನಡುಗಿತು. ಸುಮಾರು 22 ಸೆಕೆಂಡ್ ಇದು ನನ್ನ ಅನುಭವಕ್ಕೆ ಬಂತು. ನಾನು ಮತ್ತು ನನ್ನ ಜೊತೆಗಿದ್ದವರೆಲ್ಲಾ ಹೊರಗಡೆ ಬಂದೆವು, ಅದೃಷ್ಟವಶಾತ್ ಯಾವುದೇ ಅಪಾಯ ಆಗಲಿಲ್ಲ, ದೇವರ ದಯೆ, ಅಪ್ಪ ಅಮ್ಮನ ಪುಣ್ಯ ನನ್ನನ್ನು ಕಾಪಾಡಿತು. ಸುರಕ್ಷಿತವಾಗಿ ಕರ್ನಾಟಕಕ್ಕೆ ಬಂದೆ ಎಂದು ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಭೂಕಂಪದಿಂದ ಅತಂತ್ರರಾಗಿದ್ದ ಬಂಟ್ವಾಳ ಸಿದ್ದಕಟ್ಟೆಯ ಯುವಕ ರೊಮೆಲ್ ಸ್ಟೀಫನ್ ಮೊರಾಸ್.

ಸ್ಟೀಫನ್ ಮೊರಾಸ್ ಶನಿವಾರ ರಾತ್ರಿ ಗೆಳೆಯ ಅನುಭವ್ ಜೊತೆಗೆ ವಿಮಾನ ಮುಖೇನ ಬೆಂಗಳೂರು ತಲುಪಿದ್ದು, ಹಲವು ಸಿಹಿಕಹಿ ನೆನಪುಗಳನ್ನು ಹೊತ್ತು ತಂದಿದ್ದಾರೆ. ಹತ್ತು ದಿನದ ಪ್ರವಾಸದ ಯೋಜನೆ ಹಾಕಿಕೊಂಡು ಅನುಭವ್, ಮಿತೇಶ್, ಗುರುದತ್ತ್ ಮತ್ತು ನಾನು ಕಳೆದ ಎ.22 ರಂದು ಹೊರಟಿದ್ದೆವು. ಆದರೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಭೂಕಂಪನ ಇಡೀ ನೇಪಾಳವನ್ನು ಅಲ್ಲೋಲಕಲ್ಲೋಲವಾಗಿಸಿದೆ, ನಾವು ಬದುಕಿ ಬಂದದ್ದೇ ಹೆಚ್ಚು ಎನ್ನುತ್ತಾರವರು.

ಕಳೆದ ರವಿವಾರ (ಎ.26)ವೇ ಇವರು ಹಿಮಾಲಯದ ಹೈಟ್ ರೆಸಾರ್ಟ್‌ನಿಂದ ಕಠ್ಮಂಡುವಿಗೆ ಆಗಮಿಸಿದ್ದರು. ಸೋಮವಾರ ಬೆಳಗ್ಗೆಯೇ ಹೊರಡಲು ಸಿದ್ಧ್ದತೆ ನಡೆಸಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಬೆಳಗ್ಗೆ ಹೊರಡಲು ಸಾಧ್ಯವಾಗಿರಲಿಲ್ಲ. ಭಾರತದಿಂದ ಉಚಿತ ವಿಮಾನ ವ್ಯವಸ್ಥೆ ಇತ್ತಾದರೂ, ಸರತಿ ಸಾಲು ತುಂಬಾ ಉದ್ದವಿತ್ತು. ದಿನಗಟ್ಟಲೆ ಕಾಯಬೇಕಾಗಿತ್ತು, ಹಾಗಾಗಿ ನೇಪಾಳದ ಕಠ್ಮಂಡುವಿನಿಂದ ಬಸ್ ಮೂಲಕ ಇಟಾರ್ಸಿಗೆ ಬಂದು ಅಲ್ಲಿಂದ ಟ್ಯಾಕ್ಸಿಯಲ್ಲಿ ಚಿಲಿಗುರಿಗೆ ಬಂದು ಬಳಿಕ ರಾತ್ರಿ ಬಸ್ಸಿನಲ್ಲಿ ಕೊಲ್ಕತ್ತಾ ಬಂದಿದ್ದಾರೆ. ಕೊಲ್ಕತ್ತಾದಿಂದ ವಿಮಾನ ಮೂಲಕ ಹೊರಟವರು ಶನಿವಾರ ರಾತ್ರಿ ಬೆಂಗಳೂರು ತಲುಪಿದ್ದಾರೆ.

ಹೋದ ಪ್ರವಾಸ ಯಶಸ್ವಿಯಾಗಲಿಲ್ಲ, ನೋಡಬೇಕಾದ್ದು ನೋಡಲಿಕ್ಕಾಗಲಿಲ್ಲ. ಆದರೆ ನೋಡಬಾರದ್ದನ್ನು ನೋಡು ವಂತಾಯಿತು. ಬೀದಿಪಾಲಾಗಿರುವ ಅಲ್ಲಿನ ಜನರು, ಡೇರೆಗಳಲ್ಲಿ ವಾಸವಿದ್ದಾರೆ. ಅವರ ಸ್ಥಿತಿ ಕಂಡು ತುಂಬಾ ನೊಂದಿದ್ದೇನೆ. ಆದರೆ ನನ್ನ ಊರಿಗೆ ಮರಳಿ ಬಂದದ್ದು, ಖುಷಿಯಾಗಿದೆ. ಸೋಮವಾರ(ಮೇ4) ನಾನು ಡ್ಯೂಟಿೆ ಜಾಯಿನ್ ಆಗಬೇಕಿದೆ. ಅದಕ್ಕಾಗಿ ಬಂಟ್ವಾಳದ ಮನೆಗೆ ಮುಂದಿನ ವಾರ ಬರುತ್ತೇನೆ. ಅಪ್ಪ ಅಮ್ಮನನ್ನು ನೋ ಬೇಕು ಎಂದವರು ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಸುಖಪ್ರವಾಸಕ್ಕೆಂದು ನೇಪಾಳಕ್ಕೆ ಹೊರಟು ಭೂಕಂಪ ದಿಂದ ಅತಂತ್ರರಾಗಿ, ಶನಿವಾರ ರಾತ್ರಿ ರಾಜ್ಯಕ್ಕೆ ವಾಪಸಾದ ಸ್ಟೀಫನ್‌ಗೆ ಕಳೆದ ಹತ್ತು ದಿನಗಳಲ್ಲಿ ಪಟ್ಟ ಕಷ್ಟಗಳೆಲ್ಲಾ ಯುದ್ದ ದಲ್ಲಿ ಗೆದ್ದು ಬಂದಂತಾಗಿದೆ. ಕನ್ನಡಿಗರ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾವಹಿಸಿದ ಸರಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Write A Comment