ಕರಾವಳಿ

ಭಟ್ಕಳದಲ್ಲಿ ಶಂಕಿತ ಉಗ್ರರ ವಿಚಾರಣೆ

Pinterest LinkedIn Tumblr

pvec20Jan15bkl3

ಬಂಧನದಲ್ಲಿರುವ ಶಂಕಿತ ಉಗ್ರರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದ ತೆಂಗಿನಗುಂಡಿ ಬಂದರು ಪ್ರದೇಶಕ್ಕೆ ಕರೆತಂದು ಸೋಮವಾರ ವಿಚಾರಣೆ ನಡೆಸಿದರು

ಭಟ್ಕಳ (ಉತ್ತರ ಕನ್ನಡ): ಬಂಧನ­ದಲ್ಲಿರುವ ನಾಲ್ವರು ಶಂಕಿತ ಉಗ್ರ­ರನ್ನು ಸೋಮವಾರ ಭಟ್ಕಳಕ್ಕೆ ಕರೆ­ತಂದ ಸಿಸಿಬಿ ಪೊಲೀಸರು, ಅವರ ಮನೆ ಹಾಗೂ ಕೆಲವು ಪ್ರದೇಶಗಳಿಗೆ ತೆರಳಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದರು. ಎಸಿಪಿ ಓಂಕಾರಯ್ಯ ನೇತೃತ್ವದ ತಂಡ ಶಂಕಿತ ಉಗ್ರರನ್ನು ಬೆಂಗಳೂರಿ­ನಿಂದ ಕರೆತಂದಿತ್ತು. ಸ್ಥಳೀಯ ಸಿಪಿಐ ಪ್ರಶಾಂತ ನಾಯಕ ಹಾಗೂ ಪೊಲೀಸ್‌ ಸಿಬ್ಬಂದಿ ಪ್ರತ್ಯೇಕವಾಗಿ ಶಂಕಿತ ಉಗ್ರರ ವಿಚಾರಣೆ ನಡೆಸಿದರು.

ಶಂಕಿತ ಉಗ್ರ ಡಾ. ಸಯ್ಯದ್‌ ಅಫಕ್‌ ಲಂಕಾನೊಂದಿಗೆ ಇಲ್ಲಿನ ಅಜಾದ್‌ ನಗರದಲ್ಲಿನ ಆತನ ಮನೆಗೆ ಬಂದ ಪೊಲೀಸರು, ಮನೆಯ ಬೀಗ ಒಡೆದು ಒಳಪ್ರವೇಶಿಸಿ, ಮನೆ ಹಾಗೂ ಸುತ್ತಮುತ್ತ ಪರಿಶೀಲನೆ ನಡೆಸಿದರು. ಎಂಬಿಎ ವಿದ್ಯಾರ್ಥಿ ಅಬ್ದುಸ್‌ ಮನೆಗೆ ಪೊಲೀಸರ ಮತ್ತೊಂದು ತಂಡ ಭೇಟಿ ನೀಡಿತ್ತು. ಶಂಕಿತರನ್ನು ವಾಹನದಲ್ಲೇ ಕುಳ್ಳಿರಿಸಿ, ಅವರ ಮನೆ ಕಾಂಪೌಂಡ್‌ ಮತ್ತು ಸುತ್ತಮುತ್ತ ಪರಿಶೀಲನೆ ನಡೆಸಲಾಯಿತು.

ಮಂಗಳೂರು ವಿಮಾನ ನಿಲ್ದಾಣ­ದಲ್ಲಿ ಸೆರೆ ಸಿಕ್ಕ ರಿಯಾಜ್‌ ಅಹಮದ್‌ ಸೈಯದಿ, ಶೇಡಕುಳಿ ಸಮೀಪ ಇರುವ ಗುಜರಿ ವ್ಯಾಪಾರಿ ಸದ್ದಾಂ ಹುಸೇನ್‌ ಮನೆಗೂ ಸಿಸಿಬಿ ಪೊಲೀಸರ ತಂಡ ತೆರಳಿ ಪರಿಶೀಲನೆ ನಡೆಸಿತು. ತೆಂಗಿನಗುಂಡಿಯ ಬಂದರು ಪ್ರದೇಶ ಹಾಗೂ ಮತ್ತಿತರರ ಪ್ರದೇಶಗಳಿಗೂ ಶಂಕಿತ ಉಗ್ರರರನ್ನು ಕರೆದೊಯ್ದು ಪರಿಶೀಲಿಸಿದರು.

ಪಟ್ಟಣದ ಶೌಕತ್‌ ಅಲಿ ರಸ್ತೆಯ­ಲ್ಲಿರುವ ಬಂಧಿತ ರಿಯಾಜ್‌ ಸಂಬಂಧಿ ಮನೆಗೆ ಶಂಕಿತರನ್ನು ಕರೆದುಕೊಂಡು ಹೋಗಿ ಮಾಹಿತಿ ಕಲೆ ಹಾಕಿದರು. ಶಂಕಿತ ಉಗ್ರರೊಂದಿಗೆ ನಂಟು ಇದೆ ಎಂಬ ಮಾಹಿತಿಯ ಮೇರೆಗೆ ಭಟ್ಕಳದ ಬಂದರು ರಸ್ತೆಯ­ಲ್ಲಿ­ರುವ ಆಸಿಫ್‌ ಎಂಬಾತನ ಮನೆಗೆ ತೆರಳಿದ ಪೊಲೀ­ಸರು ಆತನ ಕುಟುಂಬ ಸದಸ್ಯರನ್ನೂ ವಿಚಾರಣೆ­ಗೊಳಪಡಿಸಿದರು. ಈ ವೇಳೆ ಯಾವುದೇ ಸ್ಫೋಟಕ ವಸ್ತುಗಳು ದೊರಕಿಲ್ಲ ಎನ್ನಲಾಗಿದ್ದು,  ಶಂಕಿತರನ್ನು ಪೊಲೀಸರು ರಾತ್ರಿ ಬೆಂಗ­ಳೂರಿಗೆ ವಾಪಸ್‌ ಕರೆದುಕೊಂಡು ಹೋದರು.

Write A Comment