ಕರಾವಳಿ

ವಾಹನಗಳ ವೇಗಕ್ಕೆ ಕಡಿವಾಣ : ಮನಪಾ ವ್ಯಾಪ್ತಿಯಲ್ಲಿ 31 ಹಂಪ್‌ಗಳ ಅಳವಡಿಕೆಗೆ ಡಿಸಿ ಸೂಚನೆ.

Pinterest LinkedIn Tumblr

road_safety_meet1

ಮಂಗಳೂರು, ಡಿ.19: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಸಂಚಾರಕ್ಕೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ಆಯಕಟ್ಟಿನ 31 ಕಡೆಗಳಲ್ಲಿ ಜನವರಿ 15ರೊಳಗೆ ಹಂಪ್‌ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

road_safety_meet2

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯಲ್ಲಿ ನಗರದಲ್ಲಿ ಫುಟ್‌ಪಾತ್‌ಗಳ ಕೊರತೆ, ಅಸಮರ್ಪಕ ಹಂಪ್‌ಗಳ ಅಳವಡಿಕೆ ಕುರಿತಂತೆ ಸಾರ್ವಜನಿಕರ ಆಕ್ಷೇಪ, ಆಕ್ರೋಶಕ್ಕೆ ಪ್ರತಿಯಾಗಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ, ಸಾರ್ವಜನಿಕರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಗುಣಮಟ್ಟದೊಂದಿಗೆ ಹಂಪ್‌ಗಳನ್ನು ಅಳವಡಿಸುವ ಕಾರ್ಯ ನಡೆಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದಲ್ಲಿ ರಿಕ್ಷಾ ಪಾರ್ಕ್‌ಗಳನ್ನು ನಿರ್ಮಾಣ ಮಾಡುವ ಕುರಿತಾದ ರಿಕ್ಷಾ ಚಾಲಕ ಮಾಲಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜನವರಿಯೊಳಗೆ ವಾರ್ಡ್‌ಗೆ ಒಂದರಂತೆ ಕನಿಷ್ಠ 60 ಪಾರ್ಕ್‌ಗಳನ್ನಾದರೂ ಮಾಡಿ ಮುಗಿಸ ಬೇಕೆಂದು ಸೂಚಿಸಿದರು.

road_safety_meet3

ಗ್ರಾಮಾಂತರದಲ್ಲಿ ರಸ್ತೆ ಸುರಕ್ಷತೆಗೆ ತುರ್ತು ಕ್ರಮ: ಎಸ್ಪಿ

ಪೆರ್ನೆಯಲ್ಲಿ ನಡೆದ ದುರಂತದ ಬಳಿಕ ಎಚ್‌ಪಿಸಿ‌ಎಲ್ ಹಾಗೂ ಪೆಟ್ರೋಕೆಮಿಕಲ್ ಕಂಪನಿಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಆಯಿಲ್ ಟ್ಯಾಂಕರ್‌ಗಳಿಂದ ಆಗುವ ದುರಂತಗಳ ಸಂದರ್ಭ ಸುರಕ್ಷತೆಯನ್ನು ಕಾಪಾಡಲು ಈಗಾಗಲೇ ಕಂಪೆನಿ ವತಿಯಿಂದ ತುರ್ತು ವಾಹನವನ್ನು ನಿಯೋಜಿಸಲಾಗಿದೆ. ಪರ್ಯಾಯ ವಾಹನ ಸಂಚಾರಕ್ಕೂ ಕ್ರಮ ಕೈಗೊಳ್ಳಲಾಗಿದೆ. ಇದಾದ ಬಳಿಕವೂ ಗ್ರಾಮಾಂ ತರ ರಸ್ತೆಗಳಲ್ಲಿ ಕೆಲವೊಂದು ಟ್ಯಾಂಕರ್‌ಗಳ ಅವಘಡ ಸಂಭವಿಸಿದ್ದರೂ ಯಾವುದೇ ಪ್ರಾಣ ಹಾನಿ ಆಗದಂತೆ ಇಲಾಖೆ ತುರ್ತು ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಸಭೆಯಲ್ಲಿ ತಿಳಿಸಿದರು.

road_safety_meet4

ಉಜಿರೆ, ಬೆಳ್ತಂಗಡಿ, ಪುತ್ತೂರು ಹಾಗೂ ಬಂಟ್ವಾಳಗಳಲ್ಲಿ ಪೊಲೀಸ್ ಸಭೆಗಳನ್ನು ನಡೆಸುವ ಸಂದರ್ಭ ಬಹುತೇಕವಾಗಿ ಪಾರ್ಕಿಂಗ್ ಸಮಸ್ಯೆಗಳ ದೂರುಗಳೇ ಬರುತ್ತಿದ್ದು, ಸಂಬಂಧ ಪಟ್ಟ ಗ್ರಾಮ ಪಂಚಾಯತ್‌ಗಳು ಪಾರ್ಕಿಂಗ್ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಆದೇಶ ಹೊರಡಿಸಿದರೆ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಡಾ.ಶರಣಪ್ಪ ತಿಳಿಸಿದರು. ಸಭೆಯಲ್ಲಿ ಹನುಮಂತ ಕಾಮತ್, ವಿಷ್ಣುಮೂರ್ತಿ, ಇಸ್ಮಾಯೀಲ್, ಬಿ.ಎಸ್.ಹಸನಬ್ಬ ಅಮ್ಮೆಂಬಳ ಸೇರಿದಂತೆ ಅನೇಕರು ರಸ್ತೆ ಸುರಕ್ಷತೆಯ ಕುರಿತಂತೆ ಹಲವಾರು ಸಮಸ್ಯೆ ಗಳನ್ನು ಸಭೆಯ ಗಮನಕ್ಕೆ ತಂದರು.

road_safety_meet5

ಡಿ.25ರ ಬಳಿಕ ಶಿರಾಡಿ ಘಾಟ್ ರಸ್ತೆ ಬಂದ್ ಸಾಧ್ಯತೆ:

ಶಿರಾಡಿ ಘಾಟ್ ರಸ್ತೆ ದುರಸ್ತಿಯ ಹಿನ್ನೆಲೆಯಲ್ಲಿ ಡಿ.25ರ ಬಳಿಕ ರಸ್ತೆಯನ್ನು ಬಂದ್ ಮಾಡು ಸಾಧ್ಯತೆ ಇದೆ. ಈಗಾಗಲೇ ಆಗುಂಬೆ- ಸುಬ್ರಹ್ಮಣ್ಯ ಘಾಟಿಯಲ್ಲಿ ಕೆಲಸ ನಡೆಯುತ್ತಿದೆ. ಶಿರಾಡಿ ಘಾಟ್ ರಸ್ತೆ ಮುಚ್ಚುವ ಮೊದಲು ಮಾಣಿ ರಸ್ತೆ ಮುಕ್ತಾಯ ಆಗಬೇಕಾಗಿತ್ತು. ಅಕಾಲಿಕ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಹಿಂದೆ ಮಾಡಿದ ರಸ್ತೆ ಗಳು ಹಾಳಾಗಿವೆ. ಅದು ಪೂರ್ಣ ಪ್ರಮಾಣದಲ್ಲಿ ಆಗದೆ ಶಿರಾಡಿ ಘಾಟಿ ಮುಚ್ಚಲ್ಪ ಟ್ಟರೆ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ. ಹಾಗಾಗಿ ಈಗಾಗಲೇ ಚಾಲ್ತಿಯಲ್ಲಿರುವ ಮಾಣಿ- ಮೈಸೂರು ರಸ್ತೆ ಕಾಮಗಾರಿಯನ್ನು ಡಿ.25ರೊಳಗೆ ಮುಗಿಸಲು ಬೇಡಿಕೆ ಸಲ್ಲಿಸಲಾಗಿದೆ. ಅದಾದ ಬಳಿಕ ಶಿರಾಡಿ ಘಾಟಿಯಲ್ಲಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

ಶಿರಾಡಿ ಘಾಟಿ ಮುಚ್ಚಲ್ಪಡುವ ಸಂದರ್ಭ ಎ ಕೆಟಗರಿಯ (ಲಘು ವಾಹನಗಳು ಮತ್ತು ಸರಕಾರಿ ಬಸ್ಸುಗಳು) ಚಾರ್ಮಾಡಿ ಘಾಟಿಯಾಗಿ ಸಂಚರಿಸಲಿವೆ. ಬಿ ಕೆಟಗರಿಯ (ಟ್ಯಾಂಕರ್ ಹೊರತುಪಡಿಸಿ) ಎಲ್ಲವೂ ಮಾಣಿ- ಮೈಸೂರು ರಸ್ತೆಯಾಗಿ ಮಂಗಳೂರು ಸೇರಲಿವೆ. ಉಡುಪಿ- ಕುಂದಾಪುರಕ್ಕೆ ಬರುವ ಬಸ್ಸುಗಳು ಶಿವಮೊಗ್ಗ ಮಾರ್ಗವಾಗಿ ಸಂಚರಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಆಯಿಲ್ ಟ್ಯಾಂಕರ್‌ಗಳು ಹಾಗೂ ಘನ ವಾಹನಗಳು ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಂಚರಿಸಲಿವೆ ಎಂದು ಜಿಲ್ಲಾಧಿಕಾರಿ ಶಿರಾಡಿ ಘಾಟಿ ಬಂದ್ ಆಗುವ ಸಂದರ್ಭದ ಪರ್ಯಾಯ ರಸ್ತೆಯ ಬಗ್ಗೆ ಮಾಹಿತಿ ನೀಡಿದರು.

ಸಂಚಾರಿ ನಿಯಮಗಳ ಪಾಲನೆಗೆ ಎಸ್ಪಿ ಸೂಚನೆ

ಡಿಸೆಂಬರ್‌ನ್ನು ಅಪರಾಧ ತಡೆ ಮಾಸವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗೆ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟುವಲ್ಲೂ ಶಾಲಾ ಕಾಲೇಜು, ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗುತ್ತಿದೆ. ವಾಹನಗಳ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಿಗೆ ಹೊಂದಿದ್ದು, ಪ್ರಯಾಣದ ಸಂದರ್ಭ ಅಧಿಕೃತ ದಾಖಲೆಗಳು ತಮ್ಮ ಜತೆಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ನಿಮ್ಮ ಸುರಕ್ಷತೆಯ ಜತೆಗೆ ಇತರರ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಸ್ಪಿ ಡಾ.ಶರಣಪ್ಪ ವಾಹನಗಳ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಈ ಸಂದರ್ಭ ಮನವಿ ಮಾಡಿದರು.

ಸಭೆಯಲ್ಲಿ ಸಂಚಾರಿ ಎಸಿಪಿ ಉದಯ ನಾಯಕ್, ಮನಪಾ ಪ್ರಭಾರ ಆಯುಕ್ತ ಗೋಕುಲ್ ದಾಸ್ ನಾಯಕ್, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ನಾಯ್ಕಾ ಉಪಸ್ಥಿತರಿದ್ದರು.

Write A Comment