ಕರಾವಳಿ

ಬೋಳಾರ ನಾರಾಯಣ ಶೆಟ್ಟರ ಹೆಸರು ಅಮರ: ಒಡಿಯೂರು ಸ್ವಾಮೀಜಿ.

Pinterest LinkedIn Tumblr

Bolar_sanmana_photo_1

ಮಂಗಳೂರು,ಡಿ,11 : ಯಕ್ಷಗಾನ ರಂಗದಲ್ಲಿ ಬೋಳಾರ ನಾರಾಯಣ ಶೆಟ್ಟರ ಸೇವೆ ಅನನ್ಯ. ಅವರು ಮಾಡುತ್ತಿದ್ದ ವೇಷಗಳು ಅವರಿಗೇ ಮೀಸಲಾಗಿದ್ದವು. ಅವುಗಳಿಂದಾಗಿಯೇ ಅವರ ಹೆಸರು ಇಂದಿಗೂ ಅಮರ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ದಿ. ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ಶ್ರೀಸಂಸ್ಥಾನದಲ್ಲಿ ಏರ್ಪಡಿಸಿಲಾಗಿದ್ದ `ಬೋಳಾರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಲೆಗೆ ಜಾತಿಯಿಲ್ಲ; ಕಲಾವಿದರಿಗೆ ಜಾತಿಯಿದ್ದರೂ ಅವರು ವಿಭಿನ್ನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವುದರಿಂದ ಜಾತಿ ಮತಗಳ ಗೋಡೆಯನ್ನು ಮೀರಿ ನಿಲ್ಲುತ್ತಾರೆ’ ಎಂದು ಅವರು ನುಡಿದರು. ಯಕ್ಷಗಾನದ ಇಬ್ಬರು ಹಿರಿಯ ಕಲಾವಿದರಾದ ಬೆಳ್ಳಾರೆ ವಿಶ್ವನಾಥ ರೈ ಮತ್ತು ಬಜಾಲ್ ಜನಾರ್ದನ ಕುಲಾಲ್ ಅವರಿಗೆ 2014-15 ನೇ ಸಾಲಿನ ‘ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ’ಯನ್ನು ಸ್ವಾಮೀಜಿ ಪ್ರದಾನ ಮಾಡಿದರು. ಬೋಳಾರ ಪ್ರತಿಷ್ಠಾನದ ವತಿಯಿಂದ ತಲಾ ರೂ. 10,000/- ನಿಧಿಯನ್ನು ಕಲಾವಿದರಿಗೆ ಅರ್ಪಿಸಲಾಯಿತು.

Bolar_sanmana_photo_2

ಸಂಸ್ಮರಣಾ ಭಾಷಣ ಮಾಡಿದ ಯಕ್ಷಗಾನ ಅರ್ಥಧಾರಿ ಮತ್ತು ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ ಅವರು `ಆಜಾನುಬಾಹು ವ್ಯಕ್ತಿತ್ವದ ಬೋಳಾರ ನಾರಾಯಣ ಶೆಟ್ಟರು ಭಸ್ಮಾಸುರ, ಕಂಸ, ಹಿರಿಣ್ಯಕಶ್ಯಪು ಮೊದಲಾದ ಪಾತ್ರಗಳಲ್ಲಿ ತಮ್ಮದೇ ಗಾಂಭೀರ್ಯದಿಂದ ಮೆರೆದು `ಬೋಳಾರ ಶೈಲಿ’ ಯನ್ನು ಹುಟ್ಟು ಹಾಕಿದ್ದಾರೆ. ತುಳು ಪ್ರಸಂಗಗಳಲ್ಲಿ ಕೋಟಿ, ದೇವುಪೂಂಜ, ದಳವಾಯಿದುಗ್ಗಣ್ಣ ಮೊದಲಾದ ಅವರ ಪಾತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ’ ಎಂದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಅವರು ಮಾತನಾಡಿದರು. ಸನ್ಮಾನಿತರ ಪರವಾಗಿ ಬೆಳ್ಳಾರೆ ವಿಶ್ವನಾಥ ರೈ ಉತ್ತರ ನೀಡಿದರು.

ಪ್ರತಿಷ್ಠಾನದ ಸಂಚಾಲಕ ಮತ್ತು ದಿ. ಬೋಳಾರ ನಾರಾಯಣ ಶೆಟ್ಟರ ಸುಪುತ್ರ ಬೋಳಾರ ಕರುಣಾಕರ ಶೆಟ್ಟಿ ದೋಹಾಕತಾರ್ ವೇದಿಕೆಯಲ್ಲಿದ್ದರು. ಸತೀಶ್ ಶೆಟ್ಟಿ ಮಂಕುಡೆ ಮತ್ತು ಜಯಶೀಲ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ನಮ್ಮ ಕುಡ್ಲ ತುಳು ವಾರ್ತಾ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಶುಭ ಹಾರೈಸಿದರು.

ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಾಸುದೇವ ಆರ್. ಕೊಟ್ಟಾರಿ, ಗೋಪಾಲ ಶೆಟ್ಟಿ ಬೋಳಾರ, ನಿತ್ಯಾನಂದ ಶೆಟ್ಟಿ ಮಂಕುಡೆ, ಕಿಶನ್ ಶೆಟ್ಟಿ ಬೋಳಾರ ಮತ್ತು ಕೀರ್ತನ್ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.

Write A Comment