ಕನ್ನಡ ವಾರ್ತೆಗಳು

ಯುವ ಪೀಳಿಗೆ ತಮ್ಮ ಹಕ್ಕುಗಳನ್ನು ಕೇಳುವ ಜತೆಗೆ ತಾವು ಮಾಡಬೇಕಾದ ಕರ್ತವ್ಯವನ್ನು ಕೂಡಾ ಗಮನಿಸಬೇಕು : ನ್ಯಾ.ಮೂ. ಎಸ್.ಆರ್.ನಾಯಕ್

Pinterest LinkedIn Tumblr

women_risghts_vvcolg_1

ಮಂಗಳೂರು,ಡಿ.11: ಮಾನವ ಹಕ್ಕುಗಳ ಜತೆಗೆ ಕರ್ತವ್ಯದ ಪ್ರಜ್ಞೆಯನ್ನು ಎಲ್ಲರೂ ಬೆಳೆಸಬೇಕು ಎಂದು ರಾಜ್ಯ ಕಾನೂನು ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಸ್.ಆರ್.ನಾಯಕ್ ಹೇಳಿದ್ದಾರೆ.ಮಾನವ ಹಕ್ಕುಗಳ ಮಹಾಮೈತ್ರಿ, ಮಾನವ ಹಕ್ಕುಗಳ ಸಂಘ, ವಿಶ್ವವಿದ್ಯಾಲಯ ಕಾಲೇಜು ವತಿಯಿಂದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆ ತಮ್ಮ ಹಕ್ಕುಗಳನ್ನು ಕೇಳುವ ಜತೆಗೆ ತಾವು ಮಾಡಬೇಕಾದ ಕರ್ತವ್ಯವನ್ನು ಕೂಡಾ ಗಮನಿಸಬೇಕು ಎಂದು ಹೇಳಿದ ಅವರು, ಸರಕಾರೇತರ ಸಂಸ್ಥೆಗಳು ಮಾನವ ಹಕ್ಕು ಕುರಿತು ನಿರಂತರ ಹೋರಾಟ ನಡೆಸುತ್ತಿದೆ ಎಂದರು.ಮಾನವ ಹಕ್ಕು ಪ್ರಕಾರ ಪ್ರತಿಯೊಬ್ಬರಿಗೂ ಸೂರು ಇರಬೇಕಾಗಿರುವುದು ಅವಶ್ಯವಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಾಲ್ಕು ಸಾವಿರ ಮಂದಿ ಸೂರು ಇಲ್ಲದವರು ಇದ್ದಾರೆ ಎಂದು ಅವರು ಹೇಳಿದರು.

women_risghts_vvcolg_2

ಮಾನವ ಹಕ್ಕುಗಳ ಜಾಗೃತಿ ಮೂಡಿಸಲು ದಿನಾಚರಣೆ ಆರಂಭಿಸಿ 66 ವರ್ಷ ಕಳೆದರೂ ವಂಚಿತರ ಸಂಖ್ಯೆ ಇನ್ನೂ ಕೂಡಾ ಹೆಚ್ಚುತ್ತಿದೆ ಎಂದು ಹೇಳಿದ ಅವರು, ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಕೇಳುವಾಗ ಇನ್ನೊಬ್ಬರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೇ ಎಂಬುದನ್ನು ನೋಡುವ ತಾಳ್ಮೆ ಬೇಕು ಎಂದು ಅವರು ತಿಳಿಸಿದರು.

ಕೃಷಿ ಭೂಮಿಯನ್ನು ನಾನಾ ಯೋಜನೆಗೆ ವಶಪಡಿಸಿಕೊಳ್ಳುವುದು ಕೃಷಿಕರ ಮಾನವ ಹಕ್ಕು ಉಲ್ಲಂಘನೆಯಲ್ಲವೆ ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿ ನಾಯಕ್, ರಾಷ್ಟ್ರದ ಪ್ರತಿಯೊಂದು ಆಸ್ತಿಯೂ ರಾಷ್ಟ್ರದ್ದಾಗಿರುವ ಕಾರಣ ಸಾರ್ವಜನಿಕ ಹಿತ ದೃಷ್ಟಿಯಿಂದ ಯೋಜನೆ ರೂಪಿಸಲಾಗುತ್ತದೆ. ಇಂತಹ ಸಂದರ್ಭ ಖಾಸಗಿ ವ್ಯಕ್ತಿಗಳಿಗೆ ತೊಂದರೆಯಾಗುವುದು ಸಾಮಾನ್ಯ. ದುರುದ್ದೇಶದಿಂದ ಖಾಸಗಿ ಜಾಗವನ್ನು ವಶಪಡಿಸಿ ದುರುಪಯೋಗಪಡಿಸುವುದು ಉಲ್ಲಂಘನೆ ಎಂದರು.

women_risghts_vvcolg_3 women_risghts_vvcolg_4

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ, ಪ್ರಭಾರ ಪ್ರಿನ್ಸಿಪಾಲ್ ಡಾ.ಸುನಂದಾ, ಉಪನ್ಯಾಸಕಿ ಡಾ.ಶಾನಿ ಕೆ.ಆರ್. ಉಪಸ್ಥಿತರಿದ್ದರು.

ಮಾನವ ಹಕ್ಕುಗಳ ಸಂಘ ಉಪಾಧ್ಯಕ್ಷೆ ಡಾ.ಲತಾ ಎ.ಪಂಡಿತ್ ಸ್ವಾಗತಿಸಿದರು. ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಕೇಂದ್ರೀಯ ಸಮಿತಿ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.

Write A Comment