ಕರಾವಳಿ

ಉಡುಪಿ : ಅಪಘಾತದಲ್ಲಿ ಒಂದೆ ಕುಟುಂಬದ ಮೂವರು ಸಾವು

Pinterest LinkedIn Tumblr

Car-accident

ಉಡುಪಿ, ಡಿ.7: ಕುಟುಂಬ ಸಮೇತರಾಗಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಾರ್ಕಾಳ ಸಮೀಪ ಪಾಡಿಗಾರ ಗ್ರಾಮದ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮನೋಹರ ಭಕ್ತ (40), ತಾಯಿ ಮನೋರಮಾ ಭಕ್ತ (64) ಪತ್ನಿ ಸ್ವಾತಿ (33) ಮೃತ ಪಟ್ಟಿದ್ದಾರೆ. ಮಕ್ಕಳಾದ ಮಾನಸ (8), ಸಂಜನಾ (6) ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟೇಲ್ ಉದ್ಯಮಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ ಮನೋಹರ ಭಕ್ತ ಕುಟುಂಬ ಸಮೇತರಾಗಿ ಕಾರಿ
(ಕೆಎ 20-ಪಿ 6568)ನಲ್ಲಿ ಉಡುಪಿ ಜಿಲ್ಲೆಯ ತೀರ್ಥ ಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರು. ನಿನ್ನೆ ತಡರಾತ್ರಿ ವಾಪಾಸ್ ತೆರಳುವಾಗ ಪಾಡಿಗಾರ ಗ್ರಾಮದ ಬಳಿ ವೇಗವಾಗಿ ಬಂದ ಲಾರಿ (ಕೆಎ20 ಜೆ 9236) ಡಿಕ್ಕಿ ಹೊಡೆದಿದೆ.

ನಿದ್ದೆ ಮಂಪರಿನಲ್ಲಿದ್ದ ಚಾಲಕ ಲಾರಿಯನ್ನು ನಿಯಂತ್ರಿಸುವ ಕ್ಷಣಾರ್ಧದಲ್ಲಿ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಮನೋಹರ ಭಕ್ತ ಮತ್ತು ಪಕ್ಕದ ಸೀಟಿನಲ್ಲಿದ್ದ ಅವರ ಪತ್ನಿ ಸ್ವಾತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಹಿಂದೆ ಕುಳಿತಿದ್ದ ಮನೋಹರ ಅವರ ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಒಂದೇ ಕುಟುಂಬದ ಹಿರಿಯರೆಲ್ಲಾ ಮೃತ ಪಟ್ಟಿದ್ದು, ಇಬ್ಬರು ಹೆಣ್ಣು ಮಕ್ಕಳು ಕೂಡ ಗಂಭೀರ ಗಾಯಗೊಂಡಿದ್ದಾರೆ. ಹಿರಿಯಡ್ಕ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯ ಕೈಗೊಂಡು, ಕೇಸು ದಾಖಲಿಸಿಕೊಂಡಿದ್ದಾರೆ.

Write A Comment