ರಾಷ್ಟ್ರೀಯ

ಮಾಟ -ಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಕತ್ತೆ ಮೇಲೆ ಕೂರಿಸಿ ಮುದುಕಿಯ ಬೆತ್ತಲೆ ಮೆರವಣಿಗೆ

Pinterest LinkedIn Tumblr

old-womenn

ರಾಜಸ್ಥಾನ: ಊರಿನಲ್ಲಿ ಮಾಟ ಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ 80 ವರ್ಷದ ಮುದುಕಿಯೊಬ್ಬಳನ್ನು ಬೆತ್ತಲೆಗೊಳಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಿಸಿರುವ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಚೌವ್ಹಾನೊಂಕಿ ಕಮೇರಿ ಹಳ್ಳಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ಮಕ್ಕಳ ಮೇಲೆ ಮಾಟ ಮಂತ್ರದ ಪ್ರಯೋಗ ಮಾಡಿ ಮಕ್ಕಳು ಸಾವನ್ನಪ್ಪುವಂತೆ ಮಾಡುತ್ತಿದ್ದಾಳೆಂದು ಆರೋಪಿಸಿರುವ ಗ್ರಾಮಸ್ಥರು ತಾನು ಅಮಾಯಕಳೆಂದು ಎಷ್ಟು ಹೇಳಿದರೂ ಕೇಳದೆ, ಅಸಹಾಯಕ ಮುದುಕಿಯನ್ನು ಊರಿನ ಜನರೆಲ್ಲ ಸೇರಿ ಮರಕ್ಕೆ ಕಟ್ಟುಹಾಕಿ ಮುಖಕ್ಕೆ ಕಪ್ಪು ಮಸಿ ಬಳಿದು, ವಿವಸ್ತ್ರಗೊಳಿಸಿ ನಂತರ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ, ಊರಿನಲ್ಲಿ ಮುದುಕಿಯೊಂದಿಗೆ ಯಾರಾದರೂ ಮಾತನಾಡಿದರೆ 1 ಲಕ್ಷ ದಂಡ ವಿಧಿಸಲಾಗುತ್ತದೆ ಎಂಬ ನಿಯಮವನ್ನೇರಿದ್ದಾರೆ.

ನನ್ನ ಪತಿ 37 ವರ್ಷದ ಹಿಂದೆಯೇ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದರು. ನನಗೆ ಮಕ್ಕಳಿಲ್ಲದ ಕಾರಣ ನನ್ನ ಹೆಸರಿನಲ್ಲಿರುವ ಸಣ್ಣ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ಕೆಲವರು ಈ ರೀತಿಯ ಆರೋಪ ಮಾಡಿದ್ದಾರೆ ಎಂದು ಕೃತ್ಯಕ್ಕೊಳಗಾದ ಮುದುಕಿ ಗ್ರಾಮಸ್ಥರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಮುದುಕಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬಿಲ್ವಾರ ಜಿಲ್ಲೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ ತಿಂಗಳಷ್ಟೇ ಇಂತಹದ್ದೇ ಪ್ರಕರಣ ರಾಜಸ್ಥಾನದ ರಾಜ್ ಸಮಂದ್ ಎಂಬ ಗ್ರಾಮದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ 56 ವರ್ಷದ ಮಹಿಳೆಯೊಬ್ಬಳು ತನ್ನ ಹತ್ತಿರದ ಸಂಬಂಧಿಯೊಬ್ಬನನ್ನು ಕೊಲೆ ಮಾಡಿದ್ದಾಳೆಂದು ಆರೋಪಿಸಿ ಕತ್ತೆ ಮೇಲೆ ಕೂರಿಸಿ ಬೆತ್ತಲೆ ಮೆರವಣಿಗೆ ಮಾಡಿದ್ದರು. ಆದರೆ ಇಂತಹ ಘಟನೆಗೆ ತೀರ್ಮಾನ ನೀಡಿದ್ದು ಅದೇ ಗ್ರಾಮದ ಕಾಂಗರೂ ಕೋರ್ಟ್. ಜನರಿಗೆ ನ್ಯಾಯ ನೀಡುವ ನ್ಯಾಯ ದೇಗುಲವೇ ಇಂತಹ ತೀರ್ಮಾನ ನೀಡಿತ್ತು ಎಂಬುದೇ ನಾಚಿಕೆ ಪಡಬೇಕಾದ ಸಂಗತಿ. ಅಂದು ಪ್ರಕರಣಕ್ಕೆ ಸಂಬಂಧಿಸಿದಂತೆ 39 ಜನರನ್ನು ಬಂಧಿಸಲಾಗಿತ್ತು.

ದೇಶದ ಪ್ರಗತಿ ಕಾಣುತ್ತಿದ್ದು, ಭಾರತದಲ್ಲಿ ಶಿಕ್ಷಣ ಕ್ರಾಂತಿ ಮೂಡುತ್ತಿದೆ, ಅಸ್ಪೃಶ್ಯತೆ, ಮೌಢ್ಯತೆ ದೂರಾಗುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರೆ, ಇಂತಹ ಪ್ರಕರಣಗಳು ನಮ್ಮ ಕಣ್ಣಿಗೆ ಕಾಣದಿರುವಂತೆ ಮೌಢ್ಯತೆಯನ್ನು ಎತ್ತಿಹಿಡಿಯುತ್ತಿದೆ. ಪ್ರಗತಿಯ ಹಾದಿಯಲ್ಲಿರುವ ದೇಶದಲ್ಲಿ ಮೌಢ್ಯತೆ ಎಂಬುದು ಇಂದಿನ ಯುಗದಲ್ಲೂ ತಾಂಡವವಾಡುತ್ತಿದೆ ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದು, ಇಂತಹ ಘಟನೆಗಳಿಂದ ದೇಶ ತಲೆ ತಗ್ಗಿಸುವಂತಾಗುತ್ತಿದೆ.

Write A Comment