
ಕುಂದಾಪುರ: ಗಂಗೊಳ್ಳಿಯಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ ಇರುವ ಶ್ರೀಧರ ಹಾಗೂ ವಾಸುದೇವ ದೇವಾಡಿಗ ಎನ್ನುವವರನ್ನು ಬಿಡುಗಡೆಗೊಳಿಸಬೇಕು ಹಾಗೂ ಬುಧವಾರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎ.ಎಸ್.ಪಿ ಅಣ್ಣಾಮಲೈ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಪ್ರಕರಣದ ಹಿನ್ನೆಲೆ : ಗುರುವಾರ ಗಂಗೊಳ್ಳಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರುಗಳಾದ ಶ್ರೀಧರ ಹಾಗೂ ವಾಸುದೇವ ಎನ್ನುವವರನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆಯಲ್ಲಿ ನ್ಯಾಯಾಲಯ ಅವರುಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಬುಧವಾರ ಸಂಜೆ ವಾಸುದೇವ ಅವರ ಬಂಧನದ ಸುದ್ದಿ ಕೇಳಿ ಠಾಣೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಸ್ಥಳೀಯರು ಬಂಧನವನ್ನು ವಿರೋಧಿಸಿ ಪ್ರತಿಭಟನೆ ಸಲ್ಲಿಸಿದ್ದರು. ಈ ವೇಳೆಯಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಪ್ರಭಾರ ಅಧಿಕಾರವನ್ನು ಹೊಂದಿದ್ದ ಎ.ಎಸ್.ಪಿ ಅಣ್ಣಾಮಲೈ ಹಾಗೂ ಪ್ರತಿಭಟನೆಯ ನೇತ್ರತ್ವ ವಹಿಸಿದ್ದವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅಲ್ಲಿಂದ ತೆರಳಿದ್ದ ಪ್ರತಿಭಟನಾಕಾರರು ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದ ಬಳಿಕ ಅನೌಪಚಾರಿಕ ಸಭೆ ನಡೆಸಿ, ಗುರುವಾರ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದರು.










ಸಾಗರದ ಅಲೆಯಂತೆ ಬಂದ ಜನಸ್ತೋಮ: ಗುರುವಾರ ಬೆಳಿಗ್ಗೆ ೮ ಗಂಟೆಯಿಂದಲೆ ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ತಂಡೋಪತಂಡವಾಗಿ ಗಂಗೊಳ್ಳಿಗೆ ಆಗಮಿಸಿದರು. ಅಂಚೆ ಕಚೇರಿಯ ಬಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒಟ್ಟಾದ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಬಂದರು ತಲುಪಿ, ಅಲ್ಲಿಂದ ಸುಮಾರು ೭-೮ ಕಿ.ಮೀ ದೂರದಲ್ಲಿ ಇರುವ ಗಂಗೊಳ್ಳಿಯ ಪೊಲೀಸ್ ಠಾಣೆಗೆ ಕಾಲ್ನಡಿಗೆಯಲ್ಲಿಯೇ ಸಾಗಿದರು. ಮೆರವಣಿಗೆ ಸಾಗುವ ದಾರಿಯಲ್ಲಿ, ಕಿಡಿಗೇಡಿಗಳು ಒಂದೆರಡು ಕಡೆ ಕಾನೂನು ಭಂಗ ಪ್ರಯತ್ನಕ್ಕೆ ಮುಂದಾದರೂ ಕೂಡ ಪೊಲೀಸರ ಹಾಗೂ ಮುಖಂಡರ ಸಮಪ್ರಜ್ಞೆಯಿಂದಾಗಿ ಹೆಚ್ಚಿನ ಅನಾಹುತ ನಡೆಯಲಿಲ್ಲ.
ತ್ರಾಸಿ ಸಮೀಪದ ರಾ.ಹೆ ೬೬ ರ ಸಮೀಪದಲ್ಲಿ ಇರುವ ಗಂಗೊಳ್ಳಿ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಬರುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಠಾಣೆಯ ಎದುರಿನ ಮೈದಾನದ ತುದಿಯಲ್ಲಿ ತಾತ್ಕಾಲಿಕ ತಡೆಬೇಲಿಯನ್ನು ನಿರ್ಮಿಸಿದ್ದರು. ಈ ತಡೆಯನ್ನು ದಾಟಿ ಬಂದ ಜನಸ್ತೋಮ ಠಾಣೆಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಗಮನ ಸೆಳೆದರು.









ಈ ವೇಳೆ ಮಾತನಾಡಿದ ಪ್ರಮುಖರು ಪೊಲೀಸರು ಬಂಧಿಸಿರುವ ಇಬ್ಬರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಬುಧವಾರ ಗುಂಡು ಹಾರಿಸುತ್ತೇನೆ ಎಂದು ಬೆದರಿಸಿದ ಎ.ಎಸ್.ಪಿ ಅಣ್ಣಾಮಲೈ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರ ಅಹವಾಲನ್ನು ಆಲಿಸಿದ ಜಿಲ್ಲಾ ಎಸ್.ಪಿ ರಾಜೇಂದ್ರಪ್ರಸಾದ್ ಅವರು ಬೇಡಿಕೆಗಳನ್ನು ಪರಿಶೀಲನೆ ಮಾಡುವ ಹಾಗೂ ಘಟನೆಗಳ ಬಗ್ಗೆ ಪರಾಮರ್ಶೆ ಮಾಡುವ ಭರವಸೆಗಳನ್ನು ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಮ್ಮ ಪಟ್ಟನ್ನು ಸಡಿಸಲಿಲ್ಲ. ಪೊಲೀಸರು ಹಾಗೂ ಅಡಳಿತ ಪಕ್ಷದ ಮುಖಂಡರುಗಳ ವಿರುದ್ದ ಘೋಷಣೆಯನ್ನು ಕೂಗಲಾಯಿತು.
ಗಂಗೊಳ್ಳಿಯಿಂದ ತ್ರಾಸಿಯವರೆಗೆ ಇಂದು ಅಘೋಷಿತ ಬಂದ್ ನಡೆಯಿತು. ಅಂಗಡಿ ಮುಗ್ಗಟ್ಟಗಳನ್ನು ಮುಚ್ಚಿ ಪ್ರತಿಭಟನೆಗೆ ಸ್ಥಳೀಯರು ಪರೋಕ್ಷವಾಗಿ ಬೆಂಬಲ ನೀಡಿದ್ದರು.
ಹೆದ್ದಾರಿಯಲ್ಲಿ ಇರುವ ಪೊಲೀಸ್ ಠಾಣೆಗೆ ಭಾರಿ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ ಎನ್ನುವ ಮಾಹಿತಿಯಲ್ಲಿ ತ್ರಾಸಿಯಿಂದ ಮುಳ್ಳಿಕಟ್ಟೆಯವರೆಗೆ ತಾತ್ಕಾಲಿಕ ತಡೆಬೇಲಿಯನ್ನು ಹಾಕಿ ಹೆದ್ದಾರಿ ೬೬ ರಲ್ಲಿ ವಾಹನ ಸಂಚಾರ ನಿರ್ಭಂದಿಸಿದ್ದ ಪೊಲೀಸರು ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಮುಳ್ಳಿಕಟ್ಟೆಯಿಂದ ಗುಜ್ಜಾಡಿ ಮಾರ್ಗವಾಗಿ ತ್ರಾಸಿ ತಲುಪಲು ಸೂಚಿಸಿದ್ದರು.
ಮಧ್ಯಾಹ್ನದ ವೇಳೆಯಲ್ಲಿ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಸೇರಿದ್ದ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದುದರಿಂದಾಗಿ ಸುಮಾರು ೨ ಗಂಟೆಗಳ ಕಾಲ ರಾ.ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.











ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ, ಆರ್‌ಎಸ್‌ಎಸ್ ಪ್ರಮುಖ ಸುಬ್ರಮಣ್ಯ ಹೊಳ್ಳ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಪಕ್ಷದ ಪ್ರಮುಖರಾದ ದೀಪಕ್‌ಕುಮಾರ ಶೆಟ್ಟಿ, ಸದಾನಂದ ಶೇರುಗಾರ, ರಾಜೇಶ್ ಕಾವೇರಿ ಕುಂದಾಪುರ, ಹಿಂದೂ ಪರ ಸಂಘಟನೆಯ ಅಚ್ಚುತ್ ಅಮೀನ್ ಕಲ್ಮಾಡಿ, ಅರವಿಂದ, ರಾಜೇಶ್ ಕೋಟೇಶ್ವರ ಮುಂತಾದವರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.
ಗುರುವಾರ ಮಧ್ಯಾಹ್ನ ಕುಂದಾಪುರದ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ನ್ಯಾಯಾಂಗ ಬಂಧನದಲ್ಲಿ ಇರುವ ಶ್ರೀಧರ ಹಾಗೂ ವಾಸುದೇವ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಬಂಧಿತರಿಗೆ ಜಾಮೀನು ಮಂಜೂರಾತಿಯ ಆದೇಶದ ಸುದ್ದಿ ಹೊರ ಬೀಳುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.