ಮಂಗಳೂರು,ನ.29 : ಸುರತ್ಕಲ್ ಹೊರವಲಯದ ಸೂರಿಂಜೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾತ್ಗೆ ಖಾಝಿ ಸ್ವೀಕಾರಕ್ಕೆ ನಡೆದ ಮತದಾನದ ವೇಳೆ ಎರಡು ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದು ಪರಿ ಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ಶುಕ್ರವಾರ ನಡೆಯಿತು.
ಚುನಾವಣೆ ಹಿನ್ನೆಲೆಯಲ್ಲಿ ಮಸೀದಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಒಂದು ಗುಂಪು ಖಾಝಿ ಸ್ವೀಕಾರದ ಪರವಾಗಿದ್ದರೆ, ಮತ್ತೊಂದು ಗುಂಪು ಖಾಝಿ ಸ್ವೀಕಾರವನ್ನು ವಿರೋಧಿಸಿ ಮತದಾನ ಮಾಡದಂತೆ ಆಗ್ರಹಿಸಿತ್ತು. ಆದರೆ ಮಸೀದಿ ಜಮಾತ್ನ 174 ಮಂದಿ ಪೈಕಿ 93 ಮಂದಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಭಾಗವಹಿಸಿ, ಖಾಝೀ ಸ್ವೀಕಾರದ ಪರವಾಗಿ ಮತ ಚಲಾಯಿಸಿದರು. ಉಳಿದವರು ಮತದಾನ ಬಹಿಷ್ಕರಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಮತದಾನದ ಪಟ್ಟಿಯಲ್ಲಿ ಕಮಿಟಿ ಸದಸ್ಯರ ಹೆಸರು ಮಾತ್ರವಿದೆ. ಮಸೀದಿ ಮಾತಿನಲ್ಲಿ ವರ್ಷಕ್ಕೆ 30 ರೂ.ನಂತೆ ಮಸೀದಿಗೆ ವಂತಿಗೆ ನೀಡುತ್ತಿರುವ 600 ಮಂದಿ ಸದಸ್ಯ ರಿದ್ದು ಅವರೆಲ್ಲರೂ ಮತದಾನ ನಡೆ ಸಲು ಅರ್ಹರಾಗಿದ್ದಾರೆ. ಅವರೆಲ್ಲ ರಿಗೂ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಒಂದು ಗುಂಪು ವಾದಿಸಿತ್ತು.
ಚುನಾವಣೆಗೆ ಎರಡು ದಿನ ಮೊದಲು ಮಾತ್ರ ತಿಳಿಸಿದ್ದು ಎಲ್ಲ ಸದಸ್ಯರು ಭಾಗವಹಿಸಲು ಅಸಾಧ್ಯವಾಗಿದೆ. ಸುಮಾರು 100-150 ವರ್ಷಗಳ ಇತಿಹಾಸವಿರುವ ಈ ಮಸೀದಿ ಜಮಾತ್ನಲ್ಲಿ ಈ ತನಕ ಖಾಝೀ ಅವರು ಇರಲಿಲ್ಲ, ಹಾಗಿದ್ದೂ ಒಂದು ವಿವಾದವೂ ಪೊಲೀಸ್ ಠಾಣೆ ಮೆಟ್ಟಲೇರದೆ ಎಲ್ಲ ವಿಚಾರಗಳು ಮಸೀದಿಯ ಧರ್ಮಗುರುಗಳ ತೀರ್ಮಾನದ ಪ್ರಕಾರವೇ ನಡೆಯುತ್ತಿತ್ತು. ಮುಂದೆಯೂ ಅದೇ ರೀತಿ ನಡೆಯಲಿ ಎಂದು ಒತ್ತಾಯಿಸಲಾಯಿತು ಎಂದು ಖಾಝೀ ಸ್ವೀಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮಸೀದಿಯ ಜಮಾತ್ನ ಸದಸ್ಯರೊಬ್ಬರು ತಿಳಿಸಿದರು.
ಪರ ವಿರೋಧ ಎರಡೂ ಗುಂಪುಗಳು ಪೊಲೀಸ್ ಅಧಿಕಾರಿಗಳ ಮುಂದೆ ತಮ್ಮ ನಿಲುವು ಮಂಡಿಸಿದರು. ಖಾಝೀ ಸ್ವೀಕಾರ ವಿರೋಧಿಸುತ್ತಿರುವರಿಗೆ ಸೂಕ್ತ ತೀರ್ಮಾನಕ್ಕಾಗಿ ಒಂದು ತಿಂಗಳ ಕಾಲಾವಕಾಶ ನೀಡಲು ನಿರ್ಧರಿಸಲಾಯಿತು.
ಪಣಂಬೂರು ಎಸಿಪಿ ರವಿಕುಮಾರ್ ಸುರತ್ಕಲ್ ಠಾಣಾಕಾರಿ ಎಂ. ಎ. ನಟರಾಜ್ ಬಂದೋಬಸ್ತ್ನ ನೇತೃತ್ವ ವಹಿಸಿದ್ದರು.

