ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇದೇ ಬರುವ ತಾರೀಕು 16 ರ ಭಾನುವಾರದಂದು ಕುಲಾಲ ಭವನ, ತಡಂಬೈಲು, ಸುರತ್ಕಲ್‌ನಲ್ಲಿ ಹಿಂದೂ ಧರ್ಮಜಾಗೃತಿ ಸಭೆ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಗುರುಪ್ರಸಾದ ತಿಳಿಸಿದ್ದಾರೆ.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ,”ಇಂದು ಹಿಂದೂ ಧರ್ಮೀಯರ ಮೇಲೆ ಬೃಹತ್ ಪ್ರಮಾಣದಲ್ಲಿ ಅನ್ಯಾಯ, ಅತ್ಯಾಚಾರಗಳಾಗುತ್ತಿವೆ. ಲವ್ ಜಿಹಾದ್, ಮತಾಂತರ ಹಾಗೆಯೇ ಚಲನಚಿತ್ರ ಮಾಧ್ಯಮಗಳಿಂದ ಬೃಹತ್ಪ್ರಮಾಣದಲ್ಲಿ ಹಿಂದೂ ಸಂತರ, ದೇವದೇವತೆಗಳ ವಿಡಂಬನೆಗಳಾಗುತ್ತಿವೆ.
ಹಿಂದೂಗಳಿಗೆ ಈ ಎಲ್ಲ ಸ್ಥಿತಿಯನ್ನು ಬಿಡಿಸಿ ಹೇಳಿ, ಸ್ವಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಿ, ಹಿಂದೂಗಳಲ್ಲಿ ಸಂಘಟಿತ ಮನೋಭಾವವನ್ನು ನಿರ್ಮಿಸುವ ಉದ್ದೇಶ ಇಟ್ಟುಕೊಂಡು, ಜೊತೆಯಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಬೇಕೆನ್ನುವ ಮಹತ್ತರವಾದ ಧ್ಯೇಯವನ್ನು ಇಟ್ಟುಕೊಂಡು ಭಾರತದಾದ್ಯಂತ ಕಳೆದ 7 ವರ್ಷಗಳಿಂದ 950 ಕ್ಕಿಂತಲೂ ಹೆಚ್ಚು ಧರ್ಮಜಾಗೃತಿ ಸಭೆಗಳ ಆಯೋಜನೆಯನ್ನು ಮಾಡಿಕೊಂಡು ಬಂದಿದ್ದೇವೆ.
ಈ ವರ್ಷ ಕರ್ನಾಟಕದಲ್ಲಿ ಒಟ್ಟು 18 ಸಭೆಗಳ ಆಯೋಜನೆ ಮಾಡಿದ್ದೇವೆ. ಕರ್ನಾಟಕದಲ್ಲಿ ಈ ವರ್ಷದ ಮೊದಲ ಸಭೆಯನ್ನು 16 ನೇ ನವೆಂಬರ್ 2014 ನೇ ಭಾನುವಾರದಂದು ಕುಲಾಲ ಭವನ, ತಡಂಬೈಲು, ಸುರತ್ಕಲ್ನಲ್ಲಿ ಸಾಯಂಕಾಲ 4.30 ಕ್ಕೆ ನಡೆಸಲಿದ್ದೇವೆ, ಹಿಂದೂ ಧರ್ಮಾಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಪಾಲ್ಗೊಂಡು ಈ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸನಾತನ ಸಂಸ್ಥೆಯ ಕು. ಪ್ರಿಯಾಂಕಾ ಸ್ವಾಮಿ ಮಾತನಾಡಿ ಹಿಂದೂಜನಜಾಗೃತಿ ಸಮಿತಿಯು ಹಿಂದೂ ಸಂಘಟನೆಯ ಕಾರ್ಯ ಮಾಡುತ್ತಿದೆ. ಹಾಗಾಗಿ ಸನಾತನ ಸಂಸ್ಥೆಯ ಸಾಧಕರು ಸಹ ಸುರತ್ಕಲ್‌ನಲ್ಲಿ ಪ್ರಚಾರ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಿತಿಯ ಕಾರ್ಯದಲ್ಲಿ ಸನಾತನ ಸಂಸ್ಥೆಯ ಬೆಂಬಲ ಇರುತ್ತದೆ ಎಂದರು.
ಶ್ರೀ ಮಹೇಶ್ ಮೂರ್ತಿ ಇವರು ಮಾತನಾಡಿ ಸುರತ್ಕಲ್ ನಲ್ಲಿ ನಡೆಯುವ ಈ ಧರ್ಮಜಾಗೃತಿ ಸಭೆಗೆ ಒಳ್ಳೆಯ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ. ಹಿಂದೂಗಳು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀರಾಮ ಸೇನೆಯ ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ಉಪಾಧ್ಯಕ್ಷರಾದ ಶ್ರೀ. ಕುಮಾರ್ ಮಾಲೇಮಾರ್, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಸಮನ್ವಯಕರಾದ ಶ್ರೀ. ವಿಜಯಕುಮಾರ್ ಉಪಸ್ಥಿತರಿದ್ದರು.
