ಮಂಗಳೂರು, ನ.14 : ಮೊದಲನೇ ಕರ್ನಾಟಕ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ಚಲನಚಿತ್ರ ಅಕಾಡೆಮಿ, ದ.ಕ. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಿನಿಮೋತ್ಸವಕ್ಕೆ ನಗರದ ನ್ಯೂಚಿತ್ರಾ ಚಿತ್ರಮಂದಿರದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಲನಚಿತ್ರಗಳು ಸಮಾಜದ ಪರಿವರ್ತನೆಯಲ್ಲಿ ತನ್ನದೇ ಆದ ಪ್ರಭಾವ ಬೀರುತ್ತಿವೆ. ಅದರಲ್ಲೂ, ದೇಶದಲ್ಲಿ ಅನೇಕ ಸಾಮಾಜಿಕ ಬದಲಾವಣೆಗಳಿಗೂ ಕಾರಣವಾಗಿವೆ. ವಿವಿಧ ಭಾಷೆಗಳಲ್ಲಿ ಅನೇಕ ಸದಭಿರುಚಿಯ ಚಿತ್ರಗಳು ಇಂದು ಮೂಡಿ ಬರುತ್ತಿವೆ ಎಂದು ಹೇಳಿದರು. ಮಕ್ಕಳ ಸಿನಿಮೋತ್ಸವು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಇದರಿಂದ ರಾಷ್ಟ್ರ ಮತ್ತು ವಿದೇಶಗಳಲ್ಲಿ ಖ್ಯಾತಿ ಪಡೆದ ಉತ್ತಮ ಮಕ್ಕಳ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಒದಗಿ ಬಂದಿದೆ. ಮಕ್ಕಳು ಸಿನಿಮಾ ವೀಕ್ಷಿಸುವುದರೊಂದಿಗೆ ಅದರಲ್ಲಿನ ಮೌಲ್ಯಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿ, ಭವಿಷ್ಯದ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯ ಮನೋರಂಜನಾ ಕಾರ್ಯಕ್ರಮಗಳನ್ನು ಕಲಿಕೆಯ ಕಾರಣಕ್ಕೆ ಸೀಮಿತಗೊಳಿಸಲಾಗುತ್ತಿದೆ. ಆದರೆ ಇದು ಉತ್ತಮವಲ್ಲ, ಕಲಿಕೆಯೊಂದಿಗೆ ಮಕ್ಕಳ ಬಾಹ್ಯ ವಿಕಸನಕ್ಕೂ ಒತ್ತು ನೀಡಬೇಕಾದುದು ಅಗತ್ಯ ಎಂದು ಸದಾಶಿವ ಪ್ರಭು ನುಡಿದರು. ಸಮಾರಂಭದಲ್ಲಿ ಮಂಗಳೂರು ಚಿತ್ರಮಂದಿರಗಳ ಒಕ್ಕೂಟದ ಕಾರ್ಯದರ್ಶಿ ಶಂಕರ ಪೈ ಉಪಸ್ಥಿತರಿದ್ದರು. ಮಕ್ಕಳ ಸಿನಿಮೋತ್ಸವ ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ವಾರ್ತಾ ಇಲಾಖೆಯ ಫ್ರಾನ್ಸಿಸ್ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಸಿನಿಮೋತ್ಸವ ನವೆಂಬರ್ರ 20 ವರೆಗೆ ಜಿಲ್ಲೆಯ 2 ಚಿತ್ರಮಂದಿರದಲ್ಲಿ ನಡೆಯಲಿದೆ. ಮೊದಲನೇ ದಿನ ಮಂಗಳೂರಿನ ನ್ಯೂಚಿತ್ರಾದಲ್ಲಿ ಸುಮಾರು 450 ಮಕ್ಕಳು ಹಾಗೂ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಸುಮಾರು 500 ಶಾಲಾ ಮಕ್ಕಳು ಚಲನಚಿತ್ರ ವೀಕ್ಷಿಸಿದರು. ಇಂದು ಮಂಗೋಲಿಯಾದ ಅಲೆಮಾರಿ ಬಾಲಕನ ಚಿತ್ರಕಥೆ ಇರುವ ‘ಯಲೊಕೋಲ್ಟ್’ ಎಂಬ ಸಿನಿಮಾ ಪ್ರದರ್ಶನ ನಡೆಯಿತು. ಶನಿವಾರ ಚೀನಾ ದೇಶದ ‘ಸಿಂಡ್ರೆಲ್ಲಾ ಮೂನ್’ ಎಂಬ ಚಿತ್ರ ಪ್ರದರ್ಶನವಾಗಲಿದೆ.








