ಉಡುಪಿ: ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಇಂದು (ಮಂಗಳವಾರ)ನೀಡಿದ ತೀರ್ಪಿನಲ್ಲಿ ನಾಲ್ವರು ಶಂಕಿತ ನಕ್ಸಲರು ಮಹತ್ವದ ಆರೋಪದಿಂದ ಖುಲಾಸೆಗೊಂಡಿದ್ದಾರೆ. ಚಂದ್ರಶೇಖರ, ದೇವೇಂದ್ರ, ನಂದಕುಮಾರ ಮತ್ತು ಆಶಾ ಅವರನ್ನು ಭೋಜ ಶೆಟ್ಟಿ, ಸುರೇಶ್ ಶೆಟ್ಟಿ ಕೊಲೆ ಆರೋಪದಿಂದ ಖುಲಾಸೆಗೊಳಿಸಿದೆ.
2008, ಮೇ.15 ರಂದು ರಾಜ್ಯ ಮಹಾ ಚುನಾವಣೆಯ ಮುನ್ನಾ ದಿನ ಭೋಜ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಎಂಬವರನ್ನು ಹತ್ಯೆ ಮಾಡಲಾಗಿತ್ತು. ಪೊಲೀಸ್ ಮಾಹಿತಿದಾರರು ಎಂಬ ಕಾರಣಕ್ಕೆ ಹೆಬ್ರಿ ಸಮೀಪದ ಸೀತಾನದಿಯಲ್ಲಿ ನಕ್ಸಲರು ಇವರನ್ನು ಹತ್ಯೆ ಮಾಡಿದ್ದರು.
ಈ ಪ್ರಕರಣದಲ್ಲಿ ನೇರ ಭಾಗಿಗಳಾದ ಮನೋಹರ ಮತ್ತು ವಸಂತ ಪೊಲೀಸ್ ಎನ್ ಕೌಟಂರ್ ನಲ್ಲಿ ಹತನಾಗಿದ್ದ, ಇನ್ನೋರ್ವ ಆರೋಪಿ ಸಂಜೀವ ಪೊಲೀಸ್ ವಶದಿಂದ ತಲೆಮರೆಸಿಕೊಂಡಿದ್ದಾನೆ. ಉಳಿದಂತೆ ಸಂಚು ರೂಪಿಸಿದ ಆರೋಪದಲ್ಲಿ ಈ ನಾಲ್ವರನ್ನು ಬಂಧಿಸಲಾಗಿತ್ತು. ಇದೀಗ ಆರೋಪ ಮುಕ್ತಗೊಳಿಸಲಾಗಿದೆ.
ಶಿವಮೊಗ್ಗ ಮೂಲದ ಆಶಾ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಹೊಂದಿದ್ದಾರೆ. ಕುಷ್ಟಗಿಯ ಚಂದ್ರಶೇಖರ ಇಂದು ಬಿಡುಗಡೆಯಾಗಿದ್ದಾರೆ. ಉಳಿದಂತೆ ಶಿವಮೊಗ್ಗ ಮೂಲದ ದೇವೇಂದ್ರ ಹಾಗೂ ಕೊಪ್ಪದ ನಂದ ಕುಮಾರ್ ಮೇಲೆ ಪ್ರತ್ಯೇಕ ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಪೊಲೀಸ್ ಕಸ್ಟಡಿ ಮುಂದುವರಿಯಲಿದೆ.





