ಕರಾವಳಿ

ನಂದಿತಾ ಕೊಲೆ ಪ್ರಕರಣ : ಕಾಂಗ್ರೆಸಿಗರಿಂದ ಕೀಳು ಅಭಿರುಚಿಯ ಹೇಳಿಕೆ : ಬಿಜೆಪಿ ಆಕ್ರೋಶ

Pinterest LinkedIn Tumblr

Bjp_Congres_Leaders

ಮಂಗಳೂರು : ನಂದಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪನವರು ಬಾವುಕರಾಗಿ ನೀಡಿದ ಹೇಳಿಕೆಗೆ ಸ್ವತಃ ಅವರೇ ಸ್ಪಷ್ಟನೆ ನೀಡಿ, ತನ್ನದೇ ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯವಾದಲ್ಲಿ ಪ್ರತಿಕ್ರಿಯಿಸುವಂತೆ, ಆ ಉದ್ದೇಶದಿಂದ ತಾನು ಹೇಳಿಕೆ ನೀಡಿದ್ದಾಗಿ ಹೇಳಿದ್ದರೂ ಕೂಡಾ, ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪನವರು ಉದ್ದೇಶಪೂರ್ವಕವಾಗಿಯೇ ಕೀಳು ಅಭಿರುಚಿಯ ಹೇಳಿಕೆ ನೀಡಿರುವುದನ್ನು ಬಿಜೆಪಿ ದ.ಕ.ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ತಾನು ಸ್ವತಃ ನ್ಯಾಯವಾದಿ ಮತ್ತು ಕಾನೂನು ಅಧ್ಯಾಪಕನಾಗಿದ್ದರೂ ಕೇವಲ ಕುಹಕತನ ಮತ್ತು ವಿಕಲ್ಪ ಮನಸ್ಸಿನಿಂದ ಮಾಡಿದ ಈ ಟೀಕೆ ರಾಜಕೀಯಕ್ಕೆ ಮತ್ತು ಅವರ ಘನತೆಗೆ ತಕ್ಕುದಲ್ಲ ಎಂದು ಜಿಲ್ಲಾ ವಕ್ತಾರ ಸತೀಶ್ ಪ್ರಭು ಪ್ರತಿಕ್ರಿಯಿಸಿದ್ದಾರೆ.

ಐವನ್ ಹೇಳಿಕೆಗೆ ಆಕ್ರೋಶ:

ಜಿಲ್ಲಾ ಕಾಂಗ್ರೇಸ್ ನಾಯಕರ ವಿರೋಧದ ನಡುವೆಯೂ ಅತ್ತೂ-ಕರೆದು ವಿಧಾನ ಪರಿಷತ್ ಸ್ಥಾನ ಗಿಟ್ಟಿಸಿಕೊಂಡಿರುವ ಐವನ್ ಡಿ ಸೋಜಾ ಯಾರನ್ನೋ ಒಲೈಸುವ ಭರದಲ್ಲಿ ತೀರಾ ಕೀಳು ಅಭಿರುಚಿಯ ಹೇಳಿಕೆ ನೀಡಿರುವುದಕ್ಕೆ ದ.ಕ.ಬಿಜೆಪಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಜಿಲ್ಲೆಯ ರಾಜಕೀಯ ಘನತೆಗೆ ವ್ಯತಿರಿಕ್ತವಾಗಿ, ಜಿಲ್ಲೆಯ ಸುಸಂಸ್ಕೃತ ರಾಜಕೀಯಕ್ಕೆ ಕಳಂಕ ತರುವ ರೀತಿಯಲ್ಲಿ ಐವನ್ ಡಿಸೋಜಾ ಹೇಳಿಕೆ ನೀಡಿದ್ದು ತಕ್ಷಣ ಹೇಳಿಕೆ ಹಿಂದಕ್ಕೆ ಪಡೆದು ಕ್ಷಮೆ ಯಾಚನೆ ಮಾಡದಿದ್ದಲ್ಲಿ ಐವನ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಐವನ್ ಹೇಳಿಕೆಯ ಸ್ವತಃ ಕಾಂಗ್ರೆಸ್ಸಿಗರಿಗೇ ಇರಿಸು-ಮುರಿಸು ಉಂಟಾಗಿದ್ದು, ತನ್ನ ಕೊಳಕು ನಾಲಗೆಯಿಂದಾಗಿ ರಾಜ್ಯದಲ್ಲಿ ಉತ್ತಮ ಮತ್ತು ಸಜ್ಜನಿಕೆಯ ಜಿಲ್ಲೆಯೆಂದು ಗುರುತಿಸಲ್ಪಡುವ ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ. ಐವನ್ ಈ ಕೀಳು ಅಭಿರುಚಿಯ ಹೇಳಿಕೆಯನ್ನು ತಕ್ಷಣ ವಾಪಸು ಪಡೆಯಬೇಕೆಂದು ಜಿಲ್ಲಾ ವಕ್ತಾರ ಸತೀಶ್ ಪ್ರಭು ಆಗ್ರಹಿಸಿದ್ದಾರೆ.

ಈಶ್ವರಪ್ಪಅವರ ಪತ್ನಿ ಮೇಲೆ ಅತ್ಯಾಚಾರವಾದರೆ ಏನಾಗುತ್ತದೆ : ಎಮ್.ಎಲ್.ಸಿ ಐವನ್ ಡಿ ಸೋಜ 

ಮಂಗಳೂರು : ಬಿಜೆಪಿ ಮುಖಂಡ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪಅವರ ಹೆಂಡತಿ ಮೇಲೆ ಅತ್ಯಾಚಾರವಾದರೆ ಏನಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಪ್ರಶ್ನಿಸಿದ್ದಾರೆ.

ಶನಿವಾರ ಮಂಗಳೂರು ಮಹಾನಗರ ಪಾಲಿಕೆ ಕಟ್ಟದಲ್ಲಿರುವ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐವನ್, ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ ಜಾರ್ಜ್ ಮಕ್ಕಳ ಮೇಲೆ ಅತ್ಯಾಚಾರವಾದರೆ ಸಮ್ಮನಿರುತ್ತಿದ್ದರೆ ಎಂದು ಕೇಳಿರುವ ಈಶ್ವರಪ್ಪ ಅವರು ಈ ಕೂಡಲೇ ಕ್ಷಮೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ವಿಧಾನ ಪರಿಷತ್ ನ 28 ಕಲಾಪಗಳಲ್ಲಿ ನಾನು ಭಾಗವಹಿಸಿದ್ದೇನೆ. ಅಲ್ಲಿ ಈಶ್ವರಪ್ಪ ಒಂದು ದಿನದ ಕಲಾಪವನ್ನು ಸರಿಯಾಗಿ ನಡೆಯಲು ಬಿಡುತ್ತಿರಲಿಲ್ಲ. ಸಿದ್ಧರಾಮಯ್ಯ ಅಥವಾ ಗೃಹ ಸಚಿವರೇ ಹೇಳಿ ರಾಜ್ಯದಲ್ಲಿ ಅತ್ಯಾಚಾರ ನಡೆಸುತ್ತಿದ್ಧಾರೆಯೇ ಅಥವಾ ಅವರೇ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಆಡಳಿತ ನಡೆಸುವವರಿಗೆ ಸಲಹೆ ನೀಡಲಿ ಅದನ್ನು ತುಂಬು ಹೃದಯದಿಂದ ಸ್ವೀಕರಿಸುತ್ತೇವೆ. ಅದನ್ನು ಬಿಟ್ಟು ರಾಜ್ಯದ ಜನರ ನೋವಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಪಬ್ ದಾಳಿ, ಹೋಂ ಸ್ಟೇ ದಾಳಿಯಾದಾಗ ಬಾಯಿ ಬಿಡದ ಶೋಭಾ ಕರಂದ್ಲಾಜೆ ಇದೀಗ ಯಾಕೆ ಬೀದಿಗಿಳಿದಿದ್ಧಾರೆ. ಈಶ್ವರಪ್ಪ ನವರು ತಕ್ಷಣವೇ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ನಾವು ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಎಂ. ಸಿ ನಾಣಯ್ಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಚರ್ಚಿಸಲಾಗುತ್ತಿದೆ. ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಹೇರುವ ಬಗ್ಗೆ ಹಾಗೂ ಕೇಸ್ ದಾಖಲಿಸಲು ಹಿಂಜರಿದ ಪೋಲೀಸರನ್ನು ಅಮಾನತುಗೊಳಿಸುವ ಮೂಲಕ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವತ್ತ ಸರಕಾರ ಮುನ್ನಡೆಯುತ್ತಿದೆ ಎಂದರು.

ಮಾಜಿ ಮೇಯರ್, ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ಕಾರ್ಪೋರೇಟರ್, ಪ್ರವೀಣ್ ಚಂದ್ರ ಆಳ್ವಾ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಡಿ.ಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಐವನ್ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿ, ಕ್ಷಮೆಯಾಚಿಸಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್

ಮಂಗಳೂರು / ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಕುರಿತು ಕೇವಲವಾಗಿ ಮಾತಾಡಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗರಂ ಆಗಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ಐವನ್ ಹೇಳಿಕೆ ಅಕ್ಷಮ್ಯ ಅಪರಾಧ, ರಾಜಕೀಯದಲ್ಲಿ ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವಂತಿಲ್ಲ. ಐವನ್ ಡಿಸೋಜ ಹೇಳಿದ್ದರಿಂದ ಈಶ್ವರಪ್ಪರಿಗೆ ನೋವಾಗಿರಬಹುದು. ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವರು ಅತ್ಯಾಚಾರ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎಂದು ಕಿಡಿಕಾರಿದ್ದ ಈಶ್ವರಪ್ಪ ಅವರು ಅವರ ಮನೆಯ ಮಕ್ಕಳ ಮೇಲೆ ಅತ್ಯಾಚಾರ ನಡೆದಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು, `ಈಶ್ವರಪ್ಪ ಅವರ ಪತ್ನಿಯ ಮೇಲೆ ಅತ್ಯಾಚಾರ ನಡೆದಿದ್ದರೆ ಏನಾಗುತ್ತಿತ್ತು?’ ಎಂದು ಪ್ರಶ್ನಿಸಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಲೇ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು, ಐವನ್ ಹೇಳಿಕೆ ವಿಷಾದನೀಯ. ರಾಜಕೀಯದಲ್ಲಿ ಇಂಥ ವರ್ತನೆ ಸರಿಯಲ್ಲ. ಐವನ್ ಹೇಳಿಕೆಗೆ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಐವನ್‌ರಿಂದ ಏನನ್ನು ಕಲಿತುಕೊಳ್ಳಬೇಕಾಗಿಲ್ಲ : ಈಶ್ವರಪ್ಪ ತಿರುಗೇಟು

ಐವನ್ ಡಿಜೋಜರಿಗೆ ನಾಲಗೆ ಇದೆ, ಅವರು ಏನು ಬೇಕಾದರೂ ಮಾತಾಡಿಕೊಳ್ಳಲಿ. ನಾನೇನೂ ಈ ಬಗ್ಗೆ ಚಿಂತೆ ಮಾಡುವುದಿಲ್ಲ. ಐವನ್ ಡಿಸೋಜರಿಂದ ನಾನು ಏನನ್ನೂ ಕಲಿತುಕೊಳ್ಳಬೇಕಾಗಿಲ್ಲ’ ಎಂದು ಶಿವಮೊಗ್ಗದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ರೇಪ್ ಮಾಡುವ ಮನಸ್ಥಿತಿಯ ಜನಪ್ರತಿನಿಧಿಗಳು ನಮಗೆ ಬೇಕೇ? : ಬಿ ಜೆ ಪಿ ಮಹಿಳಾ ಮೋರ್ಚಾ ಪ್ರಶ್ನೆ ( Posted at 4.30pm)

ಮಂಗಳೂರು : ಈಶ್ವರಪ್ಪನವರು ನೀಡಿದ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ಮಂಗಳೂರಿನ ವಕೀಲರೂ ಆಗಿರುವ ಎಮ್ ಎಲ್ ಸಿ ಐವನ್ ಡಿ ಸೋಜರವರ ಹೇಳಿಕೆಯು ಮಹಿಳೆಯರನ್ನು ಅಪಮಾನಿಸುವ ನಿಕೃಷ್ಟ ಮನೋಸ್ಥಿತಿಯದ್ದಾಗಿದೆ. ಈ ಹೇಳಿಕೆಯು ಸುಸಂಸ್ಕೃತ ಜಿಲ್ಲೆಯ ಜನತೆಯ ಮನಸ್ಸನ್ನು ಘಾಸಿಗೊಳಿಸಿದೆ.

ಮತ್ತೋರ್ವ ಎಮ್ ಎಲ್ ಸಿ ವಿ. ಎಸ್. ಉಗ್ರಪ್ಪ ರವರು ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಹೀನಾಯವಾಗಿ ಮಾತನಾಡುತ್ತಾ ತನ್ನ ನಾಲಗೆಯನ್ನು ಹರಿಬಿಟ್ಟ ರೀತಿ ಇನ್ನು ಮುಂದೆ ಹೆಣ್ಣು ಮಕ್ಕಳು ಸಾಮಾಜಿಕವಾಗಿ ಸ್ವಾಭಿಮಾನದಿಂದ ಬಾಳುವುದಕ್ಕೆ ಬೆದರಿಕೆಯೊಡ್ಡಿದಂತಿದೆ.

ಇಂತಹ ಜನಪ್ರತಿನಿಧಿಗಳು ನಮಗೆ ಬೇಕೇ? ಮಹಿಳೆಯರ ಬದುಕಿನಲ್ಲಿ ಆಟವಾಡಿ ಸಂತೋಷಪಡುತ್ತಿರುವ ಇವರಿಬ್ಬರೂ ತಕ್ಷಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ ಜೆ ಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ.

ಈಶ್ವರಪ್ಪ ವಿರುದ್ಧ ವಿವಾದಾತ್ಮಕ ಹೇಳಿಕೆ : ಐವನ್ ಕ್ಷಮೆಯಾಚನೆ (Posted at 5.10pm)

ಮಂಗಳೂರು : ಈಶ್ವರಪ್ಪ ಪತ್ನಿಯ ಮೇಲೆ ಅತ್ಯಾಚಾರ ಮಾಡಿದರೆ ಏನಾಗುತ್ತೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಕ್ಷಮೆಯಾಚಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರು ಐವನ್‌ ಡಿ’ಸೋಜಾ ಅವರು ನೀಡಿರುವ ಹೇಳಿಕೆ ಖಂಡನೀಯ, ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ರಾಜ್ಯದ ಜನತೆಯಲ್ಲಿ ಐವನ್‌ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದಲ್ಲದೇ ಈ ಬಗ್ಗೆ ಐವನ್‌ಗೆ ವಿವರಣೆ ಕೋರಿ ನೊಟೀಸ್‌ ಜ್ಯಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಸಂಜೆ ಮತ್ತೊಮ್ಮೆ ತುರ್ತು ಪತ್ರಿಕಾಗೋಷ್ಠಿ ಕರೆದ ಐವನ್ ಡಿ’ಸೋಜಾ ನನ್ನ ಹೇಳಿಕೆಯಿಂದ ಈಶ್ವರಪ್ಪ ಅವರಿಗೆ ನೋವಾಗಿರಬಹುದು. ನನ್ನ ಪಕ್ಷದ ನಾಯಕರಿಗೂ ನನ್ನ ಮಾತುಗಳು ನೋವನ್ನು ಉಂಟುಮಾಡಿವೆ. ಇದಕ್ಕಾಗಿ ನಾನು ಈಶ್ವರಪ್ಪ ಹಾಗೂ ನಾಯಕರಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ನನ್ನದು ತಪ್ಪಾಯಿತು. ನನ್ನ ಹೇಳಿಕೆ ರಾಜ್ಯ ನಾಯಕರಿಗೆ ಬೇಸರ ಉಂಟು ಮಾಡಿದೆ. ರಾಜ್ಯ ಕಾಂಗ್ರೆಸ್ ನಾಯಕರು ನನಗೆ ಕರೆ ಮಾಡಿ ಮಾತಾಡಿದ್ದಾರೆ. ಅವರೆಲ್ಲರಲ್ಲೂ ನನ್ನದು ತಪ್ಪಾಯಿತು ಎಂದಿದ್ದೇನೆ. ಅದೇ ರೀತಿ ಈಶ್ವರಪ್ಪರಲ್ಲೂ ಕ್ಷಮೆ ಯಾಚಿಸುತ್ತಿದ್ದೇನೆ’ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

1 Comment

Write A Comment