ಕರಾವಳಿ

ದ.ಕ. ಜಿಪಂ ತ್ರೈಮಾಸಿಕ ಕೆಡಿಪಿ ಸಭೆ : ವಸತಿ ಶಾಲೆಗಳಲ್ಲಿ ವಾರ್ಡನ್, ಆಹಾರದ ಕೊರತೆ ನಿವಾರಣೆಗೆ ಸೂಕ್ತ ಕ್ರಮಕ್ಕೆ ಸಚಿವ ರೈ ಸೂಚನೆ

Pinterest LinkedIn Tumblr

ZP_minister_Meet_1

ಮಂಗಳೂರು, ನ.4: ದ.ಕ.ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಡೆಸಲ್ಪಡುವ ವಸತಿ ಶಾಲೆಗಳಲ್ಲಿ ವಾರ್ಡನ್‌ಗಳ ಕೊರತೆ, ಪೌಷ್ಟಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯದಂತಹ ವಿಷಯ ಗಳು ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್ ಭಾಗವಹಿಸಿದ್ದರು.

ZP_minister_Meet_2

ವಸತಿ ಶಾಲೆಗಳ ಕುರಿತ ಪರಿಶೀಲನೆಯ ಸಂದರ್ಭ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಮೊರಾರ್ಜಿ ದೇಸಾಯಿ ಹಾಗೂ ಮುಸ್ಲಿಂ ವಸತಿ ಶಾಲೆಗಳಲ್ಲಿ ವಾರಕ್ಕೊಮ್ಮೆ ನೀಡ ಬೇಕಾದ ಕೋಳಿ ಮಾಂಸದೂಟವನ್ನು ಎರಡು ವಾರಗಳಿಗೊಮ್ಮೆ, ಎರಡು ದಿನಕ್ಕೊಮ್ಮೆ ಸಿಗುತ್ತಿದ್ದ ಮೊಟ್ಟೆ ಮೂರು ದಿನಗಳಿಗೊಮ್ಮೆ ಹಾಗೂ ಬೆಲೆ ಏರಿಕೆಯಿಂದಾಗಿ ತರಕಾರಿಯ ಸಮಸ್ಯೆಯೂ ಇರುವುದಾಗಿ ವಸತಿ ಶಾಲೆಗಳ ಮುಖ್ಯಸ್ಥರಿಂದ ವ್ಯಕ್ತವಾಗಿದೆ. ಮಾತ್ರವಲ್ಲದೆ 50ರಿಂದ 60ರಷ್ಟಿರುವ ಮಕ್ಕಳನ್ನು ನೋಡಿಕೊಳ್ಳಲು ವಾರ್ಡನ್‌ಗಳ ಕೊರ ತೆಯೂ ಕಾಡುತ್ತಿದೆ ಎಂದರು.

ಇದನ್ನು ಒಪ್ಪಿಕೊಂಡ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಂತೋಷ್‌ಕುಮಾರ್, ಇಲಾಖೆ ವತಿಯಿಂದ ಜಿಲ್ಲೆಯಲ್ಲಿ 1 ಮೊರಾರ್ಜಿ ದೇಸಾಯಿ ಹಾಗೂ 1 ಮುಸ್ಲಿಮ್ ವಸತಿ ಶಾಲೆ ನಡೆಸ ಲಾಗುತ್ತಿದ್ದು, ವಾರ್ಡನ್‌ಗಳು ಇಲ್ಲ ಎಂದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವ ಖಾದರ್, ಹೆತ್ತವರಿಂದ ದೂರವಾಗಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಾರ್ಡನ್‌ಗಳ ಅಗತ್ಯವಾಗಿದೆ. ಅಲ್ಲಿನ ಶಿಕ್ಷಕರು ಬಯಸಿದ್ದಲ್ಲಿ ಅವರು ಬಾಡಿಗೆ ಮನೆಗಳಲ್ಲಿ ವಾಸಿಸುವ ಬದಲು ವಸತಿ ನಿಲಯಗಳಲ್ಲಿ ಇರುವ ವ್ಯವಸ್ಥೆ ಕಲ್ಪಿಸಿ ಹೆಚ್ಚುವರಿ ಜವಾಬ್ದಾರಿ ವಹಿಸಿದರೆ ಅವರಿಗೂ ಅನುಕೂಲ, ವಿದ್ಯಾರ್ಥಿಗಳಿಗೂ ಅನುಕೂಲವಾಗ ಲಿದೆ.ಕೋಲಾರ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆ ಯನ್ನು ಕಲ್ಪಿಸಿರುವುದಾಗಿ ಹೇಳಿದರು.

ZP_minister_Meet_3

ಈ ಬಗ್ಗೆ ಚರ್ಚೆ ನಡೆಸಿ, ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ವಸತಿ ನಿಲಯಗಳಿಗೆ ಕಲ್ಪಿಸುವ ಅಧಿಕಾರವನ್ನು ನಿರ್ವಹಿಸುವಂತೆ ಸಚಿವ ರೈಯ ವರು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿಯವರಿಗೆ ಸೂಚಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿದವರು ವಿದ್ಯುತ್ ಸಂಪರ್ಕ ಸಹಿತ ಅಗತ್ಯ ಸೌಲಭ್ಯ ಪಡೆಯಲು ಪರಿಶೀಲನೆ ನಡೆಸಿ, ನಿಯಮ ಪ್ರಕಾರ ಮನೆ ನಂಬರು ನೀಡುವಂತೆ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ಸೂಚಿಸಿದರು.

ತುಂಬೆ ಕಿಂಡಿ ಅಣೆಕಟ್ಟು ನಿರ್ಮಾಣದಿಂದ 387.06 ಎಕರೆ ಭೂಮಿ ಮುಳುಗಡೆಯಾಗಲಿದೆ. 113.60 ಎಕರೆ ಭೂಮಿ ಅಳತೆ ಮಾಡಿದ್ದು, 273.46 ಎಕರೆ ಅಳತೆಗೆ ಬಾಕಿ ಇದೆ. ತುಂಬೆ ಅಣೆ ಕಟ್ಟು ನಿರ್ಮಾಣ ಯೋಜನೆ 2015ರ ಜೂನ್‌ಗೆ ಸಿದ್ಧಗೊಳ್ಳಲಿದೆ ಎಂದು ಎಂಜಿನಿಯರ್ ಹೇಳಿದರು.

ZP_minister_Meet_4

ಕೊರಗ ಸಮುದಾಯಕ್ಕೆ ನಿವೇಶನ ಒದಗಿಸಲು 94ಸಿ ಪ್ರಕಾರ ಒಟ್ಟು 213 ಅರ್ಜಿಗಳನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಲಾಗಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ ಸಾಬಿರ್ ಅಹ್ಮದ್ ಮುಲ್ಲಾ ಮಾಹಿತಿ ನೀಡಿದಾಗ, ಮುಂದಿನ ಸಭೆಯೊಳಗೆ ಶೇ.100 ಲಿತಾಂಶ ಬೇಕು. ಮುಂದೆ ಈ ವಿಷಯ ಚರ್ಚೆಗೂ ಬರಬಾರದು ಎಂದು ಉಸ್ತುವಾರಿ ಸಚಿವರು ಹೇಳಿದರು.

ಕೊಣಾಜೆಯಲ್ಲಿ 4.33 ಎಕರೆ ಜಮೀನು ಬಡವರ ಮನೆ ನಿವೇಶನಕ್ಕೆ ಎಂದು ಗ್ರಾಮ ಪಂಚಾಯತ್ ನಿರ್ಧರಿಸಿದ್ದರೂ, ಇದೀಗ ಕಾಲೇಜು ನಿರ್ಮಾಣಕ್ಕೆ ನೀಡಲು ತೀರ್ಮಾನಿಸಿರುವುದು ಸರಿಯಲ್ಲ ಎಂದು ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ ಗಮನಸೆಳೆದಾಗ, ನಿವೇಶನ ಯೋಜನೆ ಗಳು ಅಗತ್ಯ. ಆದರೆ ಇಂದು ಆಸ್ಪತ್ರೆ, ಶಾಲೆ, ಮೈದಾನ ನಿರ್ಮಾಣಕ್ಕೆ ಜಾಗ ಇಲ್ಲ. ಆದ್ದರಿಂದ ಇಡೀ ಗ್ರಾಮದ ಸರ್ವೇ ನಡೆಸಿ, ಕಾಲೇಜಿಗೂ, ನಿವೇಶನಕ್ಕೂ ಜಾಗ ಗುರುತಿಸುವಂತೆ ಮಂಗಳೂರು ತಹಶೀಲ್ದಾರ್‌ಗೆ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದರು.

ಬಂಟ್ವಾಳಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರಾಗಿದ್ದು, ಜಾಗ ಗುರುತಿಸಿ ನೀಡುವಂತೆ ಎಸ್ಪಿ ಡಾ.ಎಸ್.ಡಿ.ಶರಣಪ್ಪ ಕೋರಿದರು. ಅಂತಾರಾಜ್ಯ ಅಕ್ರಮ ಮರಳು ಸಾಗಾಟ ತಡೆಯಲು ಎಲ್ಲ ಕಡೆ ಚೆಕ್‌ಪೋಸ್ಟ್ ಹಾಕಿ ಕಠಿಣ ಕ್ರಮ ಕೈಗೊಳ್ಳಿ. ಕೆಲವರನ್ನು ಬಿಟ್ಟು, ಇನ್ನು ಕೆಲವರ ಮೇಲೆ ಕೇಸು ಹಾಕುವುದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದು ಸಚಿವ ಖಾದರ್ ಸೂಚಿಸಿದರು. ಕೇರಳಕ್ಕೆ ಮರಳು ಸಾಗಾಟಕ್ಕೆ ಅವಕಾಶ ಕೊಡಬೇಡಿ ಎಂದು ಸಚಿವ ರೈ ಹೇಳಿದರು.
ಶಿರಾಡಿ ಘಾಟಿ ಹೆದ್ದಾರಿ ಮುಚ್ಚುವ ಸಂದರ್ಭ ದಲ್ಲಿ ಪರ್ಯಾಯ ರಸ್ತೆಗಳ ಸಂಚಾರ ಬಗ್ಗೆ ನ.15ರಂದು ಅಪರಾಹ್ನ 2:30ಕ್ಕೆ ಸಭೆ ನಡೆಸಲು ನಿರ್ಧರಿಸಲಾಯಿತು.

ರನ್‌ವೇ ವಿಸ್ತರಣೆಗೆ 121 ಕೋ.ರೂ. ಪ್ರಸ್ತಾವನೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ 185 ಎಕರೆ ಭೂಸ್ವಾಧೀನಕ್ಕೆ 121 ಕೋ.ರೂ. ಪ್ರಸ್ತಾವನೆ ಸಿದ್ಧಪಡಿಸಿದ್ದು, ಮಂಜೂರಾತಿಗಾಗಿ ನ.13ರಂದು ಬೆಂಗಳೂರಿನಲ್ಲಿ ಸಿಎಂ ಸಭೆ ಯಲ್ಲಿ ಮಂಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ರನ್‌ವೇ ನಿರ್ಮಾಣ ವಿಳಂಬವಾಗುತ್ತಿದೆ. ಇದರಿಂದ ಕಾಸರಗೋಡು ಮತ್ತಿತರ ಕಡೆಯ ಪ್ರಯಾಣಿಕರು ಕಣ್ಣೂರು ವಿಮಾನ ನಿಲ್ದಾಣ ಆಶ್ರಯಿಸಿದರೆ ಮಂಗಳೂರಿನ ವಿಮಾನ ಯಾನ, ಆದಾಯಕ್ಕೆ ಪೆಟ್ಟು ಬೀಳಲಿದೆ ಎಂದು ಶಾಸಕ ಬಿ.ಎ.ಮೊಯ್ದಿನ್ ವಿಷಯ ಪ್ರಸ್ತಾಪಿಸಿದಾಗ ರೈ ಈ ಪ್ರತಿಕ್ರಿಯೆ ನೀಡಿದರು. ಈಗ ಸಿದ್ಧಪಡಿಸಿರುವ 121 ಕೋ.ರೂ. ಮೊತ್ತದ ಪ್ರಸ್ತಾವನೆಯಲ್ಲಿ 115 ಕೋಟಿ ರೂ. ಕೇವಲ ಭೂಸ್ವಾಧೀನ ಪರಿಹಾರಕ್ಕೆ ಮತ್ತು ಉಳಿದ ಹಣವನ್ನು ಭೂಮಿ ಸಮತಟ್ಟು ಮಾಡಲು ನಿರ್ಧರಿಸಲಾಗಿದೆ. ಸರಕಾರದ ಹೊಸ ಮಾರ್ಗಸೂಚಿ ಪ್ರಕಾರ, ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ಮೊತ್ತ ನಿಗದಿ ಮಾಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್ ಹೇಳಿದರು.

ಖಾಸಗಿ- ಸರಕಾರಿ ಸಹಭಾಗಿತ್ವ ಮಾದರಿ ಯಲ್ಲಿ ಅಭಿವೃದ್ಧಿ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಆದರೆ, ಇಲ್ಲಿ ಭೂಸ್ವಾಧೀನ ಮತ್ತು ಭೂಸಮತಟ್ಟು ಮಾಡಲು ಅತೀ ಹೆಚ್ಚಿನ ಹಣದ ಅಗತ್ಯವಿದೆ. ಖಾಸಗಿ ಸಂಸ್ಥೆಗಳು ಇದಕ್ಕೆ ಹೂಡಿಕೆ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಹೇಳಿದರು.

ZP_minister_Meet_5

ರೈ- ಖಾದರ್ ನಡುವೆ ಭಿನ್ನಾಭಿಪ್ರಾಯ: ಕೈ ಬಿಟ್ಟ ಪ್ರಸ್ತಾಪ!

ದ.ಕ. ಜಿಲ್ಲೆಯಲ್ಲಿ ಗ್ರಾಮ ಠಾಣಾ ವ್ಯಾಪ್ತಿ ಅಸ್ತಿತ್ವ ದಲ್ಲಿ ಇಲ್ಲದಿರುವುದರಿಂದ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9 ಮತ್ತು 11 ‘ಎ’ಯನ್ನು ವಿತರಿ ಸುವಾಗ ನಗರಾಭಿವೃದ್ಧಿ ಇಲಾಖೆಯ ಸಕ್ಷಮ ಪ್ರಾಧಿಕಾರದಿಂದ ಏಕನಿವೇಶನ/ ಬಡಾವಣೆ ನಕ್ಷೆ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಜಿ.ಪಂ.ನ ನಾಮನಿರ್ದೇಶಿತ ಸದಸ್ಯರೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಈ ಮಧ್ಯೆ ಸಚಿವರಾದ ರೈ ಮತ್ತು ಖಾದರ್ ನಡುವೆ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿ ಕೊನೆಗೆ ಪ್ರಸ್ತಾಪವನ್ನೇ ಕೈಬಿಟ್ಟ ಪ್ರಸಂಗ ನಡೆಯಿತು.

ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲಿರುವ, ಭವಿಷ್ಯದಲ್ಲಿ ಪಟ್ಟಣವಾಗಿ ಬೆಳೆಯುವ ಲಕ್ಷಣ ಗಳಿರುವ 53 ಗ್ರಾಮಗಳನ್ನು ಹೊರತುಪಡಿಸಿ ಉಳಿದ 271 ಗ್ರಾಮಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಬೇಕೆಂಬ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿತ್ತು.

ಸಚಿವ ಖಾದರ್ ಮಾತನಾಡುತ್ತಾ, ಈ ಪಟ್ಟಿಯಲ್ಲಿಲ್ಲದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಜನಾಡಿ, ಬೊಳಿಯಾರು ಹಾಗೂ ಬಾಳೆಪುಣಿ ಗ್ರಾಮಗಳಿಗೆ ಈ ನಿಯಮ ದಿಂದ ವಿನಾಯಿತಿ ನೀಡಬೇಕು. ಒಂದು ಸಮಸ್ಯೆ ಬಗೆಹರಿಸಲು ಹೋಗಿ ಮತ್ತೊಂದು ಸಮಸ್ಯೆ ಸೃಷ್ಟಿಸುವುದು ಬೇಡ ಎಂದರು.

ಇದು ಜನರ ಭವಿಷ್ಯದ ಹಿತದೃಷ್ಟಿಯಿಂದ ಮಾಡಲಾಗಿರುವ ಪ್ರಸ್ತಾವನೆ ಎಂದು ಸಚಿವ ರೈ ವಿಷಯ ಮನದಟ್ಟು ಮಾಡಲು ಪ್ರಯತ್ನಿಸಿದರು.

ಆದರೆ ಖಾದರ್ ಪಟ್ಟು ಬಿಡದೆ, ತಮ್ಮ ವ್ಯಾಪ್ತಿಯ ಮೂರು ಗ್ರಾಮಗಳನ್ನು ಈ ಪ್ರಸ್ತಾವನೆಯಿಂದ ಕೈಬಿಡಬೇಕೆಂದು ಒತ್ತಾಯಿಸಿದರು. ಹೀಗೆ ಕೆಲ ಹೊತ್ತು ವಾಗ್ವಾದ ನಡೆದು ಖಾದರ್ ತಮ್ಮ ಪಟ್ಟು ಬಿಡದೆ ಮುಂದಿನ ಸಭೆಯಲ್ಲಿ ಚರ್ಚಿಸುವಂತೆ ತಿಳಿಸಿದಾಗ, ಸಚಿವ ರಮಾನಾಥ ರೈಯವರು, ಈ ಪ್ರಸ್ತಾಪವನ್ನೇ ಕೈ ಬಿಡೋಣ. ಈಗಿರುವ ಸ್ಥಿತಿಯೇ ಮುಂದುವರಿಯಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಸುವರ್ಣ, ಮೀನಾಕ್ಷಿ ಮಂಜುನಾಥ್, ಸಿ.ಕೆ.ಚಂದ್ರಕಲಾ, ಸಿಇಒ ತುಳಸಿ ಮದ್ದಿನೇನಿ, ಎಸ್ಪಿ ಡಾ.ಎಸ್. ಡಿ. ಶರಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment