ಕರಾವಳಿ

ಶ್ರೀ ಕ್ಷೇತ್ರ ಬದನಡಿ ಹೊಂಡಮಯ ರಸ್ತೆ ದುರಸ್ತಿಗೆ ಆಗ್ರಹ.

Pinterest LinkedIn Tumblr

2btl-badanadi-road

ಬಂಟ್ವಾಳ,ನ.೦3: ಮೂಡುಬಿದ್ರೆ ರಸ್ತೆ ನಡುವಿನ ರಾಯಿ-ಬದನಡಿ ಸಂಪರ್ಕ ರಸ್ತೆಯು ಸಂಪೂರ್ಣ ಹೊಂಡಮಯವಾಗಿದ್ದು ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯ ಭಕ್ತರಿಂದ ಆಗ್ರಹ ಕೇಳಿ ಬಂದಿದೆ.ಸುಮಾರು 800 ವರ್ಷಗಳಿಗೂ ಮಿಕ್ಕಿ ಹಳೆಯ ಪುರಾತನ ಹಿನ್ನೆಲೆ ಹೊಂದಿರುವ ಇಲ್ಲಿನ ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ನ.೨೬ರಿಂದ ೨೮ರತನಕ ವಾರ್ಷಿಕ ‘ಷಷ್ಠೀ ಮಹೋತ್ಸವ’ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಪಂಚಮಿ ಉತ್ಸವ, ನಡೆಸ್ನಾನ, ಸಾರ್ವಜನಿಕ ಅನ್ನಸಂತರ್ಪಣೆ, ದೇವರ ಬಲಿ ಉತ್ಸವ, ಪರಿವಾರ ದೈವಗಳ ನೇಮೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಿದ್ದಾರೆ.

2btl-badandi

ಕಳೆದ ವರ್ಷವೂ ಇಲ್ಲಿನ ಹದಗೆಟ್ಟ ರಸ್ತೆಯಲ್ಲಿ ಬಾಡಿಗೆ ರಿಕ್ಷಾ ಮೂಲಕ ದೇವಳಕ್ಕೆ ಆಗಮಿಸುತ್ತಿದ್ದ ಮಹಿಳೆಯೊಬ್ಬರು ರಿಕ್ಷಾ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತೀ ವರ್ಷ ಇಲ್ಲಿನ ಭಜನಾ ಮಂಡಳಿ ವತಿಯಿಂದಲೇ ಸ್ಥಳೀಯರು ಸ್ವತಃ ಶ್ರಮದಾನ ಮೂಲಕ ರಸ್ತೆ ದುರಸ್ತಿಗೊಳಿಸುತ್ತಿದ್ದು, ಈ ಬಾರಿ ರಸ್ತೆಯುದ್ದಕ್ಕೂ ಜೆಲ್ಲಿ ಎದ್ದು ಹೋಗಿ ಚೆಲ್ಲಾಪಿಲ್ಲಿಯಾಗಿದೆ.
ಕಳೆದ 12 ವರ್ಷಗಳ ಹಿಂದೆ ನಡೆದ ದೇವಳದ ಪುನರ್‌ನವೀಕರಣ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಂದಿನ ಸಚಿವರಾಗಿದ್ದ ಬಿ.ರಮಾನಾಥ ರೈ ಅವರು ತುರ್ತು ರಸ್ತೆ ವಿಸ್ತರಣೆ ಕಾಮಗಾರಿ ನಡೆಸಿದ್ದರು. ಆ ಬಳಿಕ ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ದಿ.ಕೆ.ಸಂತೋಷ್ ಭಂಡಾರಿ ರಸ್ತೆ ಡಾಂಬರೀಕರಣಗೊಳಿಸಿದ್ದು, ಹಾಲಿ ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ ಅವರು ಒಂದು ಬಾರಿ ಮಾತ್ರ ತೇಪೆ ಕಾಮಗಾರಿ ನಡೆಸಿದ್ದಾರೆ ಎನ್ನುತ್ತಾರೆ ಇಲ್ಲಿನ ಭಕ್ತರು.

ಇದೇ ರಸ್ತೆಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ರಸ್ತೆಗೆ ಪುನರ್ ಡಾಂಬರೀಕರಣ ಮತ್ತು ದುರಸ್ತಿ ಏಕೆ ಸಾಧ್ಯವಾಗುತ್ತಿಲ್ಲ…? ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ಇಲ್ಲಿನ ರಸ್ತೆ ಬದಿ ಚರಂಡಿ ನಿರ್ವಹಣೆ ಮತ್ತು ಹೊಂಡ ಮುಚ್ಚುವ ಕಾಮಗಾರಿ ನಡೆಸಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಾ ಗಮನ ಹರಿಸುತ್ತಿಲ್ಲ. ಈ ರಸ್ತೆ ದುಸ್ಥಿತಿ ಬಗ್ಗೆ ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪವೂ ಸ್ಥಳೀಯರಿಂದ ವ್ಯಕ್ತವಾಗಿದೆ.

 

Write A Comment