ಕರಾವಳಿ

‘ನನ್ನ ಕಸ ನನ್ನ ಜವಾಬ್ದಾರಿ’ : ಧರ್ಮಪ್ರಾಂತದ 114 ಚರ್ಚ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಅಭಿಯಾನ

Pinterest LinkedIn Tumblr

valencia_kasa_velvari

ಮಂಗಳೂರು, ನ.2: ದ.ಕ. ಹಾಗೂ ಕಾಸರಗೋಡು ತಾಲೂಕನ್ನು ಒಳಗೊಂಡ ಮಂಗಳೂರು ಧರ್ಮಪ್ರಾಂತದ 114 ಚರ್ಚ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಶನಿವಾರ ನಡೆಯಿತು.

ವೆಲೆನ್ಸಿಯಾ ವೃತ್ತದ ಬಳಿ ನಡೆದ ಸಮಾರಂಭದಲ್ಲಿ ಕಾಗದದ ಪ್ಯಾಕೆಟ್‌ನಲ್ಲಿದ್ದ ಲಡ್ಡನ್ನು ತಿಂದು ಕಸವನ್ನು ಎಸೆಯದೆ ಕಿಸೆಗೆ ಹಾಕುವ ಮೂಲಕ ‘ನನ್ನ ಕಸ ನನ್ನ ಜವಾಬ್ದಾರಿ’ ಎಂಬುದನ್ನು ತೋರಿಸಿಕೊಡುವ ಮೂಲಕ ಮಂಗಳೂರು ಬಿಷಪ್ ರೆ.ಫಾ .ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಸ್ವಚ್ಛತೆಯ ಕೊರತೆ ನೀಗಿ ಇತರ ಜಿಲ್ಲೆಗಳಿಗೆ ಮಾದರಿಯಾಗಲಿ’ ಎಂದರು.

4 ತಿಂಗಳ ಹಿಂದೆಯೇ ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಛತೆಯ ಸಂಕಲ್ಪ ಕೈಗೊಂಡಿದೆ. ಎಲ್ಲರೂ ಕಸದ ಜವಾಬ್ದಾರಿ ವಹಿಸಿಕೊಂಡರೆ ಸ್ವಚ್ಛ ಭಾರತ ಕನಸು ನನಸಾಗಲಿದೆ ಎಂದು ಮೇಯರ್ ಮಹಾಬಲ ಮಾರ್ಲ ಹೇಳಿದರು.

ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅಪಾರ. ಪ್ರಸ್ತುತ ಸ್ವಚ್ಛತೆ ಕಾಪಾಡಲು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

‘ನನ್ನ ಕಸ ನನ್ನ ಜವಾಬ್ದಾರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯವನ್ನು ಕ್ರಿಶ್ಚಿಯನ್ ಸಮುದಾಯದವರು ಚರ್ಚ್ ವ್ಯಾಪ್ತಿಯ ರಸ್ತೆ ಬದಿ, ಸುತ್ತಮುತ್ತ ಪರಿಸರವನ್ನು ಶುಚಿಗೊಳಿಸಿದರು. ಕ್ರಿಶ್ಚಿಯನ್ ಶಿಕ್ಷಣ ಮಂಡಳಿಯ ಅಧೀನದ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಫಾದರ್ ಮುಲ್ಲರ್ ಸಂಸ್ಥೆಯ ಎನ್ನೆಸ್ಸೆಸ್ ಘಟಕದ ಸದಸ್ಯರು ವೆಲೆನ್ಸಿಯಾ ವೃತ್ತದಿಂದ ಫಾದರ್ ಮುಲ್ಲರ್ ವೃತ್ತದವರೆಗೆ ಮತ್ತು ಸುವರ್ಣ ಲೇನ್ ರಸ್ತೆಯ ಆಸುಪಾಸು ಪ್ರದೇಶ ಸ್ವಚ್ಛಗೊಳಿಸಿದರು.

‘ಕಸವನ್ನು ಎಲ್ಲೆಡೆ ಎಸೆಯದೆ ನಾನೇ ಅದರ ವಿಲೇವಾರಿ ಮಾಡಿ, ನನ್ನ ಪರಿಸರವನ್ನು ಶುಚಿಯಾಗಿಡುವುದರಿಂದ ನನ್ನ ದೇಶ ಭಾರತವನ್ನೇ ಸ್ವಚ್ಛವಾಗಿಡುತ್ತೇನೆ ಎಂದು ಭಾರತ ದೇಶದ ಹೆಸರಲ್ಲಿ ಪ್ರತಿಜ್ಞೆ ಮಾಡುತ್ತೇನೆ’ಎಂಬ ಪ್ರತಿಜ್ಞಾ ವಿಧಿಯನ್ನು ಈ ಸಂದರ್ಭ ಬೋಧಿಸಲಾಯಿತು. ಕಸದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ರೋಶನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಮಂಗಳೂರು ಧರ್ಮಪ್ರಾಂತದ ಪಾಲನಾ ಮಂಡಳಿ ಕಾರ್ಯದರ್ಶಿ ಎಂ.ಪಿ.ನೊರೊನ್ಹ ವಂದಿಸಿದರು. ಅನಿಲ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.
25 ಸಾವಿರ ಮಂದಿ ಭಾಗಿ

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ ಹಾಗೂ ಜೆಪ್ಪು ಸಂತ ಆಂತೋನಿ ಆಶ್ರಮದ ನಿರ್ದೇಶಕ ಾ.ಒನಿಲ್ ಡಿಸೋಜ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ ವ್ಯಾಪ್ತಿಯ 114 ಚರ್ಚ್‌ಗಳ ಒಟ್ಟು 25,000 ಮಂದಿ ಇಂದಿನ ಈ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

Write A Comment