ಮಂಗಳೂರು,ನ.01 : ಜೆಪ್ಪು-ಕುಡುಪಾಡಿ ಬಳಿ ರೈಲ್ವೆ ಕ್ರಾಸಿಂಗ್ ಸೇತುವೆಗೆ ಆಗ್ರಹಿಸಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಆ ಪ್ರದೇಶದ ನಾಗರಿಕರ ಕನಸು ನನಸಾಗುವ ದಿನಗಳು ಹತ್ತಿರವಾಗಿದ್ದು , ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ಮಂಗಳೂರು ಮಹಾನಗರಪಾಲಿಕೆ ಭರಿಸಿದೆ.
ರೈಲ್ವೆ ಕ್ರಾಸಿಂಗ್ ಸೇತುವೆ ನಿರ್ಮಾಣ ಕಾಮಗಾರಿಯ ವೆಚ್ಚವನ್ನು 3,61,28,294 ರೂ. ಮೊತ್ತದ ಚೆಕ್ಕನ್ನು ಮಹಾಪೌರ ಮಹಾಬಲ ಮಾರ್ಲ ಅವರು ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಕಾಂತರಾಜು ಅವರಿಗೆ ಹಸ್ತಾಂತರಿಸಿದರು.
ಜೆಪ್ಪು-ಕುಡುಪಾಡಿ ನಾಗರಿಕರ ಬಹುದಿನಗಳ ಕನಸು ನನಸಾಗಿದೆ. ಮಂಗಳೂರು ಮಹಾನಗರಪಾಲಿಕೆ ಇದೇ ಮೊದಲ ಬಾರಿಗೆ ರೈಲ್ವೆ ಸೇತುವೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ ಎಂದು ಹೇಳಿದ ಮಹಾಬಲ ಮಾರ್ಲ, ಮೂರು-ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆ ಲಭ್ಯವಾಗಲಿ ಎಂದು ಹಾರೈಸಿದರು. ಉಪ ಆಯುಕ್ತರ ಮೂಲಕ ಚೆಕ್ಕನ್ನು ರೈಲ್ವೆ ಅಧಿಕಾರಿಗಳಿಗೆ ತಲುಪಿಸಲಾಗುವುದು. ಇದಲ್ಲದೆ ಕುಡುಪಾಡಿ ರಸ್ತೆ ಅಗಲೀಕರಣದ ಮತ್ತಿತರ ಬೇಡಿಕೆಗಳು ಬಂದಿದೆ. ಅವುಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಉಪ ಮೇಯರ್ ಕವಿತಾ, ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ , ಕಾರ್ಪೊರೇಟರ್ ಅಪ್ಪಿ, ಟಿ.ಕೆ.ಶೈಲಜಾ, ಜೆಸಿಂತಾ ಆಲ್ಫ್ರೆಡ್, ರತಿಕಲಾ , ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಡಿ.ಕೆ., ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ, ಸ್ಥಳೀಯ ನಾಗರಿಕರಾದ ಜಯರಾಜ್ ಕುಡುಪಾಡಿ, ಅಶೋಕ್ ಕುಡುಪಾಡಿ, ಪುರುಷೋತ್ತಮ ಚಿತ್ರಾಪುರ, ಆಯುಕ್ತ ಗೋಕುಲ್‌ದಾಸ್ ನಾಯಕ್, ಟಿ.ಕೆ.ಸುಧೀರ್,ಹರ್ಬಟ್ ಕಡೆಕಾರ್, ರಘುವೀರ ಬಪ್ಪಲ, ರವೀಂದ್ರ ಕುಮಾರ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.