ಕರಾವಳಿ

‘ವಿಶ್ವ ತುಳುವೆರೆ ಪರ್ಬ’ : ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಮಿತಿ ಪ್ರಮುಖರಿಗೆ ಮಾರ್ಗದರ್ಶನ.

Pinterest LinkedIn Tumblr

vishwa_tulu_salmelna_11a

ಮಂಗಳೂರು, ಅ:30 : ಮಂಗಳೂರಿನ ಅಡ್ಯಾರ್‌ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಡಿ. 12ರಿಂದ 14ರ ವರೆಗೆ ನಡೆಯಲಿರುವ ‘ವಿಶ್ವ ತುಳುವೆರೆ ಪರ್ಬ’ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಸಮಿತಿ ಗೌರವಾಧ್ಯಕ್ಷ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಮಿತಿ ಪ್ರಮುಖರಿಗೆ ಬುಧವಾರ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಗದರ್ಶನ ನೀಡಿದರು.

ಸಹ್ಯಾದ್ರಿ ಆವರಣದ ಯಾವ ಭಾಗದಲ್ಲಿ ಯಾವ ಕಾರ್ಯಕ್ರಮ ಹಾಗೂ ಅದರ ರೂಪುರೇಷೆ ಕುರಿತು ಡಾ| ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಒಟ್ಟು ತಯಾರಿ ಹೇಗಿರಬೇಕು ಮತ್ತು ಕಾರ್ಯಕ್ರಮಗಳು ಯಾವ ಸ್ವರೂಪದಲ್ಲಿ ನಡೆಯಬೇಕು ಎಂಬ ಕುರಿತಾಗಿಯೂ ಅವರು ಸಮಿತಿಗೆ ಸಲಹೆ, ಸೂಚನೆ ನೀಡಿದರು.

ತುಳುನಾಡಿನ ವಿವಿಧ ಜನಾಂಗಗಳ ಖಾದ್ಯಗಳ ಪರಿಚಯ ನೀಡುವ ಅಟಿಲ್‌ ಅರಗಣೆ ( ಫುಡ್‌ಕೋರ್ಟ್‌) ಆಯೋಜನೆ ಯಶಸ್ವಿಯಾಗಬೇಕು ಹಾಗೂ ಪ್ರದರ್ಶನ ಮಳಿಗೆ, ಪ್ರದರ್ಶನಾಲಯಗಳು ದೇಶವಿದೇಶಗಳಿಂದ ಆಗಮಿಸುವ ತುಳುವರಿಗೆ ತುಳು ವಿಶ್ವರೂಪ ದರ್ಶನ ಮಾಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಬೇಕು ಹಾಗೂ ತುಳುನಾಡ ವೈಭವ, ಸಾಂಸ್ಕೃತಿಕ ಕಲಾ ಪ್ರಕಾರಗಳು ಆಕರ್ಷಕವಾಗಿ ನಡೆಯಬೇಕು ಎಂದು ಅವರು ಹೇಳಿದರು.

ಇದೇ ವೇಳೆ ಅವರು ಕಾರ್ಯಕ್ರಮಕ್ಕೆ ಪ್ರಾರಂಭಿಕ ನೆಲೆಯಲ್ಲಿ ಆರ್ಥಿಕ ಸಹಾಯ ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ, ವಿಶ್ವ ತುಳುವೆರೆ ಪರ್ಬ ಸಮಿತಿಯ ಸಂಯೋಜಕರಾದ ಎ.ಸಿ. ಭಂಡಾರಿ, ದಾಮೋದರ ನಿಸರ್ಗ, ಅಡ್ಯಾರು ಮಹಾಬಲ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಕಾರ್ಯಾಧ್ಯಕ್ಷ ನಿಟ್ಟೆ ಶಶಿಧರ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌, ‘ಉದಯವಾಣಿ’ ಸಹ ಉಪಾಧ್ಯಕ್ಷ ಆನಂದ್‌ ಕೆ., ‘ನಮ್ಮ ಕುಡ್ಲ’ ನಿರ್ದೇಶಕ ಲೀಲಾಕ್ಷ ಕರ್ಕೆರ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಉಮೇಶ್‌ ಎಂ. ಭೂಷಿ, ಸಮಿತಿ ಪ್ರಮುಖರಾದ ಕರುಣಾಕರ ಶೆಟ್ಟಿ, ತಾರಾನಾಥ ಶೆಟ್ಟಿ ಬೋಳಾರ್‌, ಜಯಲಕ್ಷ್ಮೀ ಆಳ್ವ, ಶ್ರೀಲತಾ, ಜಯಲಕ್ಷ್ಮೀ ಹೆಗ್ಡೆ, ದಯಾನಂದ ಕಟೀಲು, ಕದ್ರಿ ನವನೀತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Write A Comment