ಕರಾವಳಿ

ಕಳಪೆ ವಿದ್ಯುತ್ ಕಾಮಗಾರಿ ಇಂಜಿನಿಯರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಯರ್ ಆದೇಶ.

Pinterest LinkedIn Tumblr

mcc_mayor_meet_1

ಮಂಗಳೂರು, ಅ.30: ಕಾವೂರು ಹಾಗೂ ಕೂಳೂರು ಪಂಪ್‌ಹೌಸ್‌ನಲ್ಲಿ ಎಲೆಕ್ಟ್ರಿಕಲ್ ಬೋರ್ಡ್‌ನ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜೂನಿಯರ್ ಎಂಜಿನಿಯರ್(ಜೆ‌ಇ) ಹಾಗೂ ಅಸಿಸ್ಟೆಂಟ್ ಎಂಜಿನಿಯರ್(ಎ‌ಇ)ಗೆ ಶೋಕಾಸು ನೋಟಿಸ್ ನೀಡುವಂತೆ ಮೇಯರ್ ಮಹಾಬಲ ಮಾರ್ಲ ಆದೇಶಿಸಿದ್ದಾರೆ.

mcc_mayor_meet_3mcc_mayor_meet_2

ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತು ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಈ ಆದೇಶ ನೀಡಿದರು. ಸದಸ್ಯರಾದ ಹರಿನಾಥ್‌ರವರು ವಿಷಯ ಪ್ರಸ್ತಾಪಿಸಿ, ಕಾವೂರು ಕೂಳೂರು ಪಂಪ್‌ಹೌಸ್‌ಗಳಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಎಲೆಕ್ಟ್ರಿಕಲ್ ಬೋರ್ಡ್ ಅಳವಡಿಸುವ ಗುತ್ತಿಗೆ ಪಡೆದವರು ಕಾಮಗಾರಿ ನಿರ್ವಹಿಸಿ ತೆರಳಿದ ಕೆಲ ದಿನಗಳಲ್ಲೇ ಎಲೆಕ್ಟ್ರಿಕಲ್ ಬೋರ್ಡ್ ಭಸ್ಮವಾಗಿದೆ.

ಗುತ್ತಿಗೆ ವಹಿಸಿಕೊಂಡವರು ಅದಾಗಲೇ ಮುಂಬೈಗೆ ತೆರಳಿರುವುದರಿಂದ ಈ ಬಗ್ಗೆ ಕೇಳುವುದಾದರೂ ಯಾರನ್ನು ಎಂದು ಪ್ರಶ್ನಿಸಿದರು. ಮಾತ್ರವಲ್ಲದೆ, ಮನಪಾ ವ್ಯಾಪ್ತಿಯಲ್ಲಿ ಜೆಸಿಬಿ ಇಲ್ಲ, ನೀರಿನ ಟ್ಯಾಂಕರ್ ಇಲ್ಲ, ಬೀದಿ ದೀಪಗಳು ಉರಿಯುತ್ತಿಲ್ಲ. ಹಿಂದೆ ಒಬ್ಬ ಎಂಜಿನಿಯರ್ ಇದ್ದಾಗಲೂ ಮನಪಾ ಕಾಮಗಾರಿಗಳು ಸುವ್ಯವಸ್ಥಿತವಾಗಿ ನಡೆಯುತ್ತಿತ್ತು. ಇದೀಗ 26 ಮಂದಿ ಎಂಜಿನಿಯರ್‌ಗಳಿದ್ದರೂ ಏನು ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಹರಿನಾಥ್ ಆಕ್ರೋಶ ವ್ಯಕ್ತಪಡಿಸಿದರು.

mcc_mayor_meet_4 mcc_mayor_meet_5

ಸದಸ್ಯರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಮೇಯರ್ ಮಹಾಬಲ ಮಾರ್ಲ, ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ತಿಳಿಸಲಾಗಿದೆ ಎಂದು ಎಚ್ಚರಿಸಿದರು.

ಬೀದಿ ಬದಿ ವ್ಯಾಪಾರಿಗಳ ಬಗ್ಗೆ ದ್ವಂದ್ವ ನಿಲುವೇಕೆ?
ಒಂದು ಕಡೆ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸವಲತ್ತುಗಳನ್ನು ಕಲ್ಪಿಸುವುದಾಗಿ ಮನಪಾದಲ್ಲಿ ಕಾರ್ಯಾಗಾರ ನಡೆಸಿ ಹೇಳುತ್ತಿದ್ದರೆ ಮತ್ತೊಂದು ಕಡೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಿಗಳ ಬಗ್ಗೆ ದ್ವಂದ್ವ ನಿಲುವೇಕೆ ಎಂದು ಸದಸ್ಯ ದಯಾನಂದ ಶೆಟ್ಟಿ ಪ್ರಶ್ನಿಸಿದರು. ಸರಕಾರ ಹಾಗೂ ಸುಪ್ರೀಂ ಕೊೀರ್ಟ್ ಮಾನದಂಡದಂತೆ ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಮನಪಾ ಬದ್ಧವಾಗಿದೆ.

ಈ ಬಗ್ಗೆ ಅರ್ಹ ಬೀದಿಬದಿ ವ್ಯಾಪಾರಿಗಳ ಪಟ್ಟಿ ಮಾಡಲಾಗಿದೆ. ಆದರೆ ರಸ್ತೆ ಬದಿಗಳಲ್ಲಿ ದಿನೇ ದಿನೇ ಅನಧಿಕೃತ ಫಾಸ್ಟ್‌ಫುಡ್‌ಗಳ ಅಂಗಡಿಗಳು ತಲೆ ಎತ್ತುತ್ತಿವೆ. ಉತ್ತರಪ್ರದೇಶ, ಬಿಹಾರಗಳಲ್ಲಿ ಪಾನಿ ಪುರಿ ಮಾಡುವವರೇ ಇಲ್ಲ. ಎಲ್ಲರೂ ಮಂಗಳೂರಿನಲ್ಲಿದ್ದಾರಂತೆ ಎಂದು ಹೇಳಿದ ಮೇಯರ್, ಒಂದು ಬಕೆಟ್ ನೀರು ಇಟ್ಟುಕೊಂಡು ಗ್ರಾಹಕರಿಗೆ ಆಹಾರ ಸರಬರಾಜು ಮಾಡುವ ವ್ಯವಸ್ಥೆ ಇಲ್ಲಿ ನಡೆಯುತ್ತಿದೆ. ಇದರಿಂದ ಮುಂದೆ ಸಾಂಕ್ರಾಮಿಕ ರೋಗಗಳು ಜಾಸ್ತಿ ಆದಾಗ ಬೊಟ್ಟು ಮಾಡುವುದು ಮನಪಾದತ್ತ. ಹಾಗಾಗಿ ಈ ಬಗ್ಗೆ ನಿಯಂತ್ರಣ ಅಗತ್ಯವಾಗಿದೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದರು.

Write A Comment