ಕರಾವಳಿ

9 ತಿಂಗಳಿನಲ್ಲಿ ಮೂರು ಜಿಲ್ಲಾಧಿಕಾರಿಗಳನ್ನು ನೋಡಿದ ಉಡುಪಿ  ಜನರು..!; ಉಡುಪಿ ಜಿಲ್ಲೆಗೆ ಹೊಸ ಡಿಸಿ ಡಾ| ವಿಶಾಲ್‌

Pinterest LinkedIn Tumblr

Udupi_Dc-Dr.Vishal

ಉಡುಪಿ : ಉಡುಪಿ ಜಿಲ್ಲಾಧಿಕಾರಿಯಾಗಿ ಸೆ. 1ರಂದು ಅಧಿಕಾರ ಸ್ವೀಕರಿಸಿದ್ದ ಎಸ್‌.ಎಸ್‌.ಪಟ್ಟಣಶೆಟ್ಟಿಯವರನ್ನು ಅಧಿಕಾರ ಸ್ವೀಕರಿಸಿದ ಎರಡು ತಿಂಗಳ ಮೊದಲೇ ಎತ್ತಂಗಡಿ ಮಾಡಲಾಗಿದೆ. ಈ ಹಿಂದೆ ಇದ್ದ ಡಾ|ಮುದ್ದುಮೋಹನ್‌ ಅವರನ್ನು ಆರು ತಿಂಗಳಲ್ಲಿ ಎತ್ತಂಗಡಿ ಮಾಡಲಾಗಿತ್ತು.

ಹೊಸ ಜಿಲ್ಲಾಧಿಕಾರಿಯಾಗಿ ಯುವ ಐಎಎಸ್‌ ಅಧಿಕಾರಿ ಡಾ|ಆರ್‌.ವಿಶಾಲ್‌ ಅವರನ್ನು ನಿಯುಕ್ತಿಗೊಳಿಸಲಾಗಿದೆ. ವಿಶಾಲ್‌ ಅವರು 2004ನೆಯ ತಂಡದ ಐಎಎಸ್‌ ಅಧಿಕಾರಿ. ಇವರು ಅಖೀಲ ಭಾರತ ಮಟ್ಟದಲ್ಲಿ ಐಎಎಸ್‌ ಅಂತಿಮ ಪರೀಕ್ಷೆಯಲ್ಲಿ 8ನೆಯ ರ್‍ಯಾಂಕ್‌ ಗಳಿಸಿದ ಪ್ರತಿಭಾವಂತರು. ಮೂಲತಃ ಹುಬ್ಬಳ್ಳಿಯವರಾದ ಡಾ|ವಿಶಾಲ್‌ ಅವರು ಹುಬ್ಬಳ್ಳಿಯ ಕಿಮ್ಸ್‌ನ ಕೊನೆಯ ತಂಡದ ಎಂಬಿಬಿಎಸ್‌ ವಿದ್ಯಾರ್ಥಿ.

ವಿಶಾಲ್‌  ಅವರು ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ 16 ತಿಂಗಳು ಸೇವೆ ಸಲ್ಲಿಸಿದ್ದರು. ಬಳಿಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಆದೇಶವನ್ನು ರದ್ದುಪಡಿಸಿ ಉಡುಪಿಗೆ ವರ್ಗಾವಣೆ ಮಾಡಲಾಗಿದ್ದು ಆ ಸ್ಥಾನಕ್ಕೆ ಉಡುಪಿ ಜಿಲ್ಲಾಧಿಕಾರಿ ಪಟ್ಟಣಶೆಟ್ಟಿಯವರನ್ನು ವರ್ಗಾಯಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಮುನ್ನ ವಿಶಾಲ್‌ ಅವರು ಬೆಂಗಳೂರು ಮಹಾನಗರಪಾಲಿಕೆ ಚುನಾವಣಾ ಹೆಚ್ಚುವರಿ ಆಯುಕ್ತರು, ಅದಕ್ಕೂ ಹಿಂದೆ ಗುಲ್ಬರ್ಗ ಜಿಲ್ಲಾಧಿಕಾರಿಯಾಗಿ ಮೂರು ವರ್ಷ, ಹಣಕಾಸು ಇಲಾಖೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದರು.

ಒಟ್ಟಿನಲ್ಲಿ ಕಳೆದ ೯ ತಿಂಗಳ ಅವಧಿಯಲ್ಲಿ ಮೂರು ಜಿಲ್ಲಾಧಿಕಾರಿಗಳನ್ನು ನೋಡುವ ಮೂಲಕ ಉಡುಪಿ ಜನರು ಗೊಂದಲಕ್ಕೀಡಾಗಿದ್ದಾರೆ.

 

Write A Comment