ಕರಾವಳಿ

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ – ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಡಿವೈ‌ಎಫ್‌ಐ ಪ್ರತಿಭಟನೆ

Pinterest LinkedIn Tumblr

ಕುಂದಾಪುರ : ಆರೋಗ್ಯದ ಹಕ್ಕು ಸಂವಿಧಾನ ಕೊಡ ಮಾಡಿದ ಮೂಲಭೂತವಾದ ಹಕ್ಕು, ಆ ಹಕ್ಕಿನ ಭಾಗವಾಗಿಯೇ ಸ್ವತಂತ್ರ ಭಾರತದಲ್ಲಿ ಸರಕಾರಿ ಆರೋಗ್ಯ ಸೇವೆಯನ್ನು ದೇಶದೆಲ್ಲೆಡೆ ವ್ಯಾಪಕವಾಗಿ ಕಟ್ಟುವ ಪ್ರಯತ್ನವನ್ನು ಮಾಡಲಾಯಿತು. ಗ್ರಾಮ ಮಟ್ಟದಿಂದ ಹಿಡಿದು ಹೋಬಳಿ, ತಾಲೂಕು, ಜಿಲ್ಲಾ ಮಟ್ಟದವರೆಗೆ ಆಸ್ಪತ್ರೆಗಳನ್ನು ಕಟ್ಟಲಾಯಿತು.

ಆದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ಸರಕಾರದ ನೀತಿಗಳು ಬದಲಾಗಿವೆ. ಸೇವಾ ಕ್ಷೇತ್ರವಾದ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ವ್ಯಾಪಾರೀಕರಣಗೊಳಿಸಲಾಗುತ್ತಿದೆ. ಎಲ್ಲೆಡೆ ನಾಯಿಕೊಡೆಗಳಂತೆ ಖಾಸಗಿ ನರ್ಸಿಂಗ್ ಹೋಂಗಳು, ಹೈಟೆಕ್ ಆಸ್ಪತ್ರೆಗಳು ತಲೆ ಎತ್ತುತ್ತಿವೆ. ವಿಧವಿಧದ ಪರೀಕ್ಷಾ ಯಂತ್ರಗಳು, ಖಾಸಗಿ ಲ್ಯಾಬ್‌ಗಳು ನಿರ್ಮಾಣಗೊಂಡಿದೆ. ವೈದ್ಯರು ಮಾತ್ರವಲ್ಲದೆ, ವಿವಿಧ ವ್ಯಾಪಾರ, ಉದ್ದಿಮೆ, ದಂಧೆಗಳಲ್ಲಿ ತೊಡಗಿಸಿಕೊಂಡವರು ಇಂದು ಅತೀ ಹೆಚ್ಚು ಲಾಭ ತರುವ ಆರೋಗ್ಯ ಕ್ಷೇತ್ರದಲ್ಲಿ ಹಣ ಹೂಡತ್ತಿದ್ದಾರೆ. ಲಾಭವೇ ಗುರಿಯಾದ ಈ ವೈದ್ಯಕೀಯ ಕೇಂದ್ರಗಳು ಜನತೆಯ ಅನಾರೋಗ್ಯವನ್ನೇ ಗುರಿಯಾಗಿಸಿಕೊಂಡು ಜನಸಾಮಾನ್ಯರನ್ನು ಲೂಟಿಮಾಡುತ್ತಿವೆ.

Kundapura_DYFI_Protest

 

ವಿಧವಿಧವಾದ ಅನಗತ್ಯ ಪರೀಕ್ಷೆಗಳು, ಅನಗತ್ಯವಾದ ದುಬಾರಿ ಚಿಕಿತ್ಸೆಗಳು ಹೀಗೆ ಆರೋಗ್ಯದ ಸಮಸ್ಯೆಗಳ ಬಗ್ಗೆ ಜನರಿಗಿರುವ ತಿಳುವಳಿಕೆಯ ಕೊರತೆ ಮತ್ತು ಆತಂಕವನ್ನು ಬಳಸಿಕೊಂಡು ದುಬಾರಿ ಶುಲ್ಕಗಳನ್ನು ವಿಧಿಸುತ್ತಿವೆ. ಸರಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿಯಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಜನಸಾಮಾನ್ಯರು ಈ ರೀತಿಯ ದುಬಾರಿ ವೆಚ್ಚಗಳಿಗೆ ಬಲಿಪಶುವಾಗುತ್ತಿದ್ದಾರೆ. ದುಬಾರಿ ವೆಚ್ಚ ಪಾವತಿ ಮಾಡಲಾಗದ ರೋಗಿಗಳು ಹಣ ಪಾವತಿಸುವವರೆಗೆ ಅಕ್ರಮ ಬಂಧನದಲ್ಲಿಡುವುದು, ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟವರ ಮೃತದೇಹಗಳನ್ನು ಬಿಟ್ಟುಕೊದಿರುವುದು ಮುಂತಾದ ಅಮಾನವೀಯ ಕಾನೂನುಬಾಹಿರ ಕೃತ್ಯಗಳನ್ನು ಖಾಸಗಿ ಆಸ್ಪತ್ರೆಗಳು ಸರಕಾರದ ಭಯವಿಲ್ಲದೆ ನಡೆಸುತ್ತಿವೆ.

ಖಾಸಗಿ ವೈದ್ಯರ ಕ್ಲಿನಿಕ್‌ಗಳಿಂದ ಹಿಡಿದು ನರ್ಸಿಂಗ್ ಹೋಂಗಳು, ಆಸ್ಪತ್ರೆಗಳು, ತಾವು ನೀಡುವ ಸೇವೆಗಳ ವಿವರ ಮತ್ತು ಅವುಗಳ ದರವನ್ನು ಚಿಕಿತ್ಸೆಗೆ ಬರುವ ರೋಗಿ ಅಥವಾ ರೋಗಿಯ ಕಡೆಯವರಿಗೆ ನೀಡಬೇಕು ಎಂಬ ಕಡ್ಡಾಯ ನಿಯಮವಿದೆ. ಆದರೆ ಈ ನಿಯಮಗಳನ್ನು ಯಾವುದೇ ವೈದ್ಯರಾಗಲೀ, ಆಸ್ಪತ್ರೆಗಳಾಗಲೀ ಪಾಲಿಸುತ್ತಿಲ್ಲ. ಮತ್ತೆ ಇನ್ನೊಂದೆಡೆ ವೈದ್ಯರ ಕನ್ಸಲ್ಟಿಂಗ್ ಫೀಸ್‌ನಿಂದ ಹಿಡಿದು ಪ್ರತಿಯೊಂದು ಚಿಕಿತ್ಸೆ, ಪರೀಕ್ಷೆ, ಹಾಸಿಗೆ, ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿಗಳವರೆಗೆ ಅಸಮಾನವಾದ ವಿವಿಧ ರೀತಿಯ ದರಗಳನ್ನು ವಿವಿಧ ಆಸ್ಪತ್ರೆಗಳು ವಸೂಲಿ ಮಾಡುತ್ತಿವೆ. ಸೇವಾಕ್ಷೇತ್ರವಾದ ಆರೋಗ್ಯ ಕ್ಷೇತ್ರದಲ್ಲಿ ಈ ರೀತಿಯ ಅಸಮಾನ ದರ ಪದ್ಧತಿಗೆ ಅವಕಾಶವಿರಕೂಡದು. ಸಮಾನದರ್ಜೆಯ ಆಸ್ಪತ್ರೆಗಳಲ್ಲಿ ಸಮಾನ ದರ ಇರಬೇಕಿದೆ.

ಆದರೆ ಆರೋಗ್ಯದಂತಹ ಅತೀ ಅಗತ್ಯ, ಸೂಕ್ಷ್ಮವಾದ ಕ್ಷೇತ್ರದ ಈ ರೀತಿಯ ಅಸಮಾನತೆ, ಶೋಷಣೆಗಳ ವಿರುದ್ಧ ಸರಕಾರ, ಜನ ಪ್ರತಿನಿಧಿಗಳಾಗಲಿ ಧ್ವನಿ ಎತ್ತುತ್ತಿಲ್ಲ ಎಂದು ಡಿವೈ‌ಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಹೇಳಿದರು.

ಅವರು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯ ಎದುರುಗಡೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಇನ್ನೋರ್ವ ಮುಖಂಡರಾದ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, ಸರಕಾರ ಸಾರ್ವಜನಿಕ ಆರೋಗ್ಯಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ. ಖಾಸಗಿ ಆರೋಗ್ಯ ಕ್ಷೇತ್ರದ ತಿಮಿಂಗಿಲಗಳಿಗೆ ಅನುಕೂಲವಾಗುವಂತೆ ಸರಕಾರಿ ಆಸ್ಪತ್ರೆಗಳು ಪಾಳು ಬಿದ್ದಿವೆ. ಸರಿಯಾದ ಕಟ್ಟಡ, ಚಿಕಿತ್ಸಾ ಸಾಮಾಗ್ರಿಗಳು, ಪ್ರಯೋಗಾಲಯಗಳು, ತಜ್ಞ ವೈದ್ಯರ ಕೊರತೆ ಹೀಗೆ ಎಲ್ಲವೂ ಇಲ್ಲದಾಗಿದೆ. ಸರಕಾರಿ ಆರೋಗ್ಯ ಇಲಾಖೆಯ ಶೇಕಡಾ ಐವತ್ತರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಬಡಪಾಯಿ ರೋಗಿಗಳು ಸರಕಾರಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿನ ವ್ಯವಸ್ಥೆಯ ನಿರ್ಲಕ್ಷಕ್ಕೆ ಬಲಿಯಾಗುತ್ತಿದ್ದಾರೆ. ಸರಿಯಾದ ಚಿಕಿತ್ಸೆ ದೊರಕದೆ ಸಾಯುತ್ತಿದ್ದಾರೆ. ಸರಕಾರದ ನಿಯಮಗಳ ಪ್ರಕಾ‌ಋವೇ ಪ್ರತೀ ಐವತ್ತು ಸಾವಿರ ಜನಸಂಖ್ಯೆಗೆ ಒಂದು ಆರೋಗ್ಯಕೇಂದ್ರ, ಒಂದು ಲಕ್ಷ ಜನಸಂಖ್ಯೆಗೆ ಸಮುದಾಯ ಆಸ್ಪತ್ರೆ (೩೦ ಬೆಡ್), ತಾಲೂಕಿಗೊಂದು ತಾಲೂಕು ಆಸ್ಪತ್ರೆ (೧೦೦ ಹಾಸಿಗೆ) ಮತ್ತು ಜಿಲ್ಲಾಸ್ಪತ್ರೆಗಳು ಇರಬೇಕು. ಆದರೆ ಸರಕಾರಗಳ ವರದಿಯ ಪ್ರಕಾರವೇ, ಜನಸಂಖ್ಯೆಗೆ ಅನುಪಾತವಾಗಿ ಇರಬೇಕಾದದ್ದದಲ್ಲಿ ಕೇವಲ ಮೂವತ್ತು ಶೇಕಡಾದಷ್ಟು ಆರೋಗ್ಯ ಕೇಂದ್ರಗಳಾಗಲೀ, ಸಮುದಾಯ ಆಸ್ಪತ್ರೆಗಳಾಗಲೀ ಇಲ್ಲ. ಇರುವ ಆರೋಗ್ಯಕೇಂದ್ರ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಬಿಟ್ಟು ಕೊಡಲಾಗುತ್ತಿದೆ. ವೈದ್ಯ ವಿದ್ಯಾರ್ಥಿಗಳ ಕಲಿಕೆಗಾಗಿ ಬಡರೋಗಿಗಳನ್ನು ಬಳಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಬಿಪಿ‌ಎಲ್ ಕಾರ್ಡುದಾರರಿಗೆ ಮಾತ್ರ ಉಚಿತ ಚಿಕಿತ್ಸೆ ಎಂಬ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇಂತಹ ಪರಿಸ್ಥಿತಿಯಿಂದಾಗಿ ಅತೀ ಅಗತ್ಯವಾದ, ಸಂವಿಧಾನಬದ್ಧ ಹಕ್ಕಾಗಿರುವ ವೈದ್ಯಕೀಯ ಸೇವೆಯಿಂದ ಜನಸಾಮಾನ್ಯರು ವಂಚಿತರಾಗುತ್ತಿದ್ದಾರೆ ಅಥವಾ ತಮ್ಮ ಜೀವಮಾನದ ಗಳಿಕೆಗಳನ್ನು ಅದಕ್ಕಾಗಿ ಸುರಿಯುತ್ತಿದ್ದಾರೆ, ಸಾಲದ ಸುಳಿಗೆ ಬೀಳುತಿದ್ದಾರೆ ಇದಕ್ಕೆ ಸರಕಾರವೇ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಎಸ್‌ಎಫ್‌ಐನ ತಾಲೂಕು ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿ ಮಾತನಾಡಿದರು. ಪ್ರತಿಭಟನೆಯಲ್ಲಿ ಡಿವೈ‌ಎಫ್‌ಐ ತಾಲೂಕು ಅಧ್ಯಕ್ಷ ಸಂತೋಷ್ ಹೆಮ್ಮಾಡಿ, ಸುರೇಶ್ ಕಲ್ಲಾಗರ, ಸತೀಶ್ ತೆಕ್ಕಟ್ಟೆ, ರವಿ ವಿ.ಎಂ., ಮಂಜುನಾಥ ಶೋಗನ್, ಅಕ್ಷಯ ವಡೇರಹೋಬಳಿ, ಆಫ್ರೀನಾ, ಆಲ್ಡ್ರೀನ್, ಸುರೇಶ್ ಲಾಡು, ವೆಂಕಟೇಶ ಹೆಮ್ಮಾಡಿ ಉಪಸ್ಥಿತರಿದ್ದರು.

ಪ್ರತಿಭಟನೆಯ ನಂತರ ತಾಲೂಕು ಆರೋಗ್ಯ ಅಧಿಕಾರಿಯವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

 

ಬೇಡಿಕೆಗಳು :
೧) ನಗುಮಗು ಯೋಜನೆಗೆ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿರಿ.
೨) ’ಡಿ’ ದರ್ಜೆ ನೌಕರರ ಹುದ್ದೆ ಭರ್ತಿ ಮಾಡಿರಿ ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ.
೩) ಜನಲರ್ ವಾರ್ಡ್‌ನ ಹಳೆ ಕಟ್ಟಡವನ್ನು ದುರಸ್ಥಿಗೊಳಿಸಿ.
೪) ಶವ ವಿಲೇವಾರಿಗೆ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಿ.
೫) ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಿರಿ.
೬) ಸರಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಸಂಗ್ರಹ ಘಟಕವನ್ನು ಸ್ಥಾಪಿಸಿರಿ.

 

Write A Comment