ಕರಾವಳಿ

ಡಾ.ಸದಾನಂದ ಪೆರ್ಲರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ.

Pinterest LinkedIn Tumblr

Sadananda_Perl_1

ಮಂಗಳೂರು,ಅ.29: ಕರ್ನಾಟಕ ಸರಕಾರದ ವಾರ್ತಾ ಇಲಾಖೆಯ 2013 ನೆ ಸಾಲಿನ “ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’ಗೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ. ಸದಾನಂದ ಪೆರ್ಲ ಅವರು ಮಂಗಳೂರು ಆಕಾಶವಾಣಿಯಲ್ಲಿ 2010 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಗುಲ್ಬರ್ಗಾ ಆಕಾಶವಾಣಿಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದಾರೆ. “ಕಾಸರಗೋಡಿನ ಕನ್ನಡ ಹೋರಾಟ’ ಕುರಿತು ಕಾಸರಗೋಡಿನ ಕನ್ನಡ ಪರ ಚಳವಳಿಯ ಮೊತ್ತ ಮೊದಲ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಇವರು ತಮ್ಮ ಸೇವಾವಧಿಯಲ್ಲಿ ಅಭಿವೃದ್ಧಿಗೆ ಪೂರಕವಾಗಿ ನೂರಾರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವರು. ಇವರು ಕಾಸರಗೋಡಿನ “ಪ್ರತಿಸೂರ್ಯ” ಸಂಜೆದೈನಿಕದಲ್ಲಿ ವರದಿಗಾರ/ಸಹಸಂಪಾದಕರಾಗಿ 1989 ರಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದವರು. 1992 ರಿಂದ ಬೆಂಗಳೂರಿನ “ಸಂಯುಕ್ತ ಕರ್ನಾಟಕ” ದೈನಿಕದ ಉಪಸಂಪಾದಕ ವರದಿಗಾರ ಹುದ್ದೆಗೆ ಆಯ್ಕೆ ಹೊಂದಿ 2 ವರ್ಷಗಳ ಕಾಲ ಪತ್ರಕರ್ತನಾಗಿ ದುಡಿದರು. 1994 ರಲ್ಲಿ ಆಕಾಶವಾಣಿಯ ಪ್ರಸಾರ ನಿರ್ವಾಹಕ ಹುದ್ದೆಗೆ ಸೇರಿದರು.

ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದವರು. ನೀವೇನಂತೀರಿ? – ನೇರ ಫೋನ್-ಇನ್ ಕಾರ್ಯಕ್ರಮದ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಜನಮನಕ್ಕೆ ಮುಟ್ಟಿಸಿದವರು.

“ಮನಮಂಥನ”-ಮನೋ ಆರೋಗ್ಯದ ಕುರಿತ ಕಾರ್ಯಕ್ರಮದ ಮೂಲಕ ಜಾಗೃತಿಯನ್ನು ಮೂಡಿಸಲು ನೆರವಾದವರು. ಇವರ ನಿರ್ಮಾಣ ನೆರವಿನ “ಖರೇವಂದ್ರ ತಪ್ಪು” ನಾಟಕವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. “ಮಳೆ ನಿಂತ ಮೇಲೆ”, “ವರ್ಷಧಾರೆ ಕರುಣಧಾರೆ” ಮುಂತಾದ ವಿಶೇಷ ರೂಪಕಗಳನ್ನು ಪ್ರಸಾರ ಮಾಡಿದ್ದಾರೆ. ಹೈದರಾಬಾದ್ ಕರ್ನಾಟಕದ ವಿಕಸನಕ್ಕೆ ಸಂಬಂಧಿಸಿದ ಸರಣಿ ಕಾರ್ಯಕ್ರಮ ಆಯೋಜಿಸಿ ಪ್ರಸ್ತುತಪಡಿಸಿರುವುದು ವಿಶೇಷವಾಗಿದೆ. ಮಂಗಳೂರು ಆಕಾಶವಾಣಿಯಲ್ಲಿ ಅಭಿವೃದ್ಧಿಯ ನೆಲೆಯಲಿ “ಕಲ್ಯಾಣ ವಾಣಿ” “ಸುಖ ಸಂಸಾರಕ್ಕೆ ಹಲವು ಸೂತ್ರಗಳು” “ಕೇಳು ಸಖೀ ಮನದ ಮಾತು”, “ರೇಡಿಯೋ ಪಾರ್ಲರ್” ಮುಂತಾದ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಬಿತ್ತರಿಸಿ, ಬಾನುಲಿಯನ್ನು ಜನಧ್ವನಿಯನ್ನಾಗಿ ಮಾಡಿಸುವಲ್ಲಿ ಯಶಸ್ವಿ ಯಾದವರು.

 

Sadananda_Perl_2

ದೀನದಲಿತತರ ಶೋಷಿತರ ಧ್ವನಿಯಾಗಿ ನೇರ ಫೋನ್-ಇನ್ ಕಾರ್ಯಕ್ರಮದ ಮೂಲಕ ಜನಮುಖಿಯಾಗಿಸಿದವರು. ಸರಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ಇವುಗಳು ಅತ್ಯಂತ ಉಪಯುಕ್ತವಾಗಿದ್ದವು. ಪ್ರತೀ ಭಾನುವಾರ ಬೆಳಗ್ಗೆ ಪ್ರಸಾರವಾಗುವ “ಹರ್ಷ ವಾರದ ಅತಿಥಿ” ಯ ಮೂಲಕ ವಿವಿಧ ಕ್ಷೇತ್ರಗಳ ಗಣ್ಯರ ಸಾಧನೆಗಳನ್ನು ಜನಮನಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿ ಇದೀಗ 165  ಕಂತುಗಳನ್ನು ತಲುಪಿರುವುದು ಯಶಸ್ಸಿನ ಹೆಜ್ಜೆಯ ಗುರುತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳ ಮಹಿಳೆಯರು ಸ್ವಾವಲಂಬನೆಯ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟ ಕುರಿತು “ಬದುಕು ಕಟ್ಟುವ ದಾರ” ಹಾಗೂ “ಸಾವಿರದ ದಾರ” ಮುಂತಾದ ಜನಮುಖಿ ರೂಪಕಗಳನ್ನು ಸಿದ್ಧಪಡಿಸಿ ಬಿತ್ತರಗೊಳಿಸಿದ್ದಾರೆ.

ಸೃಜನಶೀಲ ಲೇಖಕರಾಗಿ, ಅಂಕಣ ಬರಹಗಾರರಾಗಿ ವೈಚಾರಿಕ ಲೇಖನಗಳನ್ನು ಬರೆಯುವ ಇವರು “ಮಾರ್ಗದರ್ಶಿ” ಮಾಸಿಕದಲ್ಲಿ ಬರೆದ ಅಂಕಣಗಳ ಸಂಗ್ರಹ “ಒಂದಿಷ್ಟು ಮಾತು” ಕೃತಿಯಾಗಿ ಪ್ರಕಟಗೊಂಡಿದೆ. 12ನೇ ಶತಮಾನದಲ್ಲಿನ ಶಿವಶರಣ “ಶರಣ ಹೆಂಡದ ಮಾರಯ್ಯ” ಕುರಿತ ಅಧ್ಯಯನದ ಕಿರುಕೃತಿ ಹೊರತಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾಗಿ ಹಲವಾರು ಲೇಖನಗಳನ್ನು ತುಳು ಮತ್ತು ಕನ್ನಡದಲ್ಲಿ ಬರೆದ ಹೆಗ್ಗಳಿಕೆ ಇವರದು. ಸುಮಾರು 150 ಕ್ಕೂ ಹೆಚ್ಚು ವೈಚಾರಿಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಬೆಂಗಳೂರಿನಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಕ್ರೀಡಾಕೂಟದ ವರದಿಗಾರಿಕೆ, ಗುಲ್ಬರ್ಗಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಪಂದ್ಯಾವಳಿಯ ವರದಿಯನ್ನು ರಾಷ್ಟ್ರೀಯ ಕ್ರೀಡಾ ವಾಹಿನಿಯಲ್ಲಿ ಬಿತ್ತರಿಸಲು ನೆರವು, ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಕುರಿತಾಗಿ “ರೇಡಿಯೊ ಬ್ರಿಜ್” ಕಾರ್ಯಕ್ರಮದಲ್ಲಿ ನಿರೂಪಕನಾಗಿ ಮತ್ತು ಹಲವಾರು ನೇರ ಪ್ರಸಾರ ಕಾರ್ಯಕ್ರಮಗಳ ವೀಕ್ಷಕ ವಿವರಣೆಕಾರನಾಗಿ ಅನುಭವ ಹೊಂದಿದವರು. ಸಮುದಾಯ ಬಾನುಲಿ ಕುರಿತು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ರಾಜ್ಯ ವಿಜ್ಞಾನ ಕಮ್ಮಟದಲ್ಲಿ ಪ್ರಬಂಧ ಮಂಡನೆ, ಸಾಹಿತ್ಯ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ ಮಾಡಿ ವಿಚಾರ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡ ಇವರು ಗುಲ್ಬರ್ಗಾದ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾಗಿ ಶ್ರಮದಾನ, ರಕ್ತದಾನ, ವಸ್ತ್ರದಾನ, ಶಿಕ್ಷನ ನೆರವು ಕಾರ್ಯಕ್ರಮಗಳನ್ನು ಆಯೋಜಿಸಲು ನೇತೃತ್ವ ನೀಡಿದವರು. ಗುಲ್ಬರ್ಗಾದಲ್ಲಿ ನೆರೆ ಸಂಭವಿಸಿದ ಸಂದರ್ಭದಲ್ಲಿ ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪರಿಹಾರ ಕಾರ್ಯದಲ್ಲಿ ದಕ್ಷಿಣ ಕನ್ನಡ ಸಂಘವನ್ನು ತೊಡಗಿಸಿಕೊಳ್ಳುವಲ್ಲಿ ಶ್ರಮ ವಹಿಸಿದವರು. ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನದ ಜೊತೆಗೂಡಿ “ಚಿಗುರು ಚಿನ್ಮಯ” ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಹಭಾಗಿಯಾದವರು. ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟ ಸಭೆ, ಜಿಲ್ಲಾ ಯುವಜನೋತ್ಸವ, ಗುಲ್ಬರ್ಗಾ ಉತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲಾಡಳಿತದ ಜೊತೆ ಕೈಜೋಡಿಸಿದ ಹೆಗ್ಗಳಿಕೆ ಇವರದು.

ಇವರು ಕಾಸರಗೋಡು ಜಿಲ್ಲೆಯ ಪೆರ್ಲದ ದಿವಂಗತ ಮಾನಪ್ಪ ಪೂಜಾರಿ ಹಾಗೂ ಶ್ರೀಮತಿ ರಾಧಮ್ಮ ದಂಪತಿಯ ಪುತ್ರ. ಇವರ ಪತ್ನಿ ಶ್ರೀಮತಿ ಪ್ರಮೀಳಾ ಎಂ.ಕೆ. ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಹಾಯಕ ಆಯುಕ್ತರು. ಇವರಿಗೆ ಶ್ರೇಯಾಂಕ್ ಮತ್ತು ಪ್ರಾಂಜಲ್ ಇಬ್ಬರು ಪುತ್ರರು.

Write A Comment