ಕರಾವಳಿ

ಏಷ್ಯನ್‌ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ ಮಮತಾ ಪೂಜಾರಿ, ಪೂವಮ್ಮಗೆ ಸನ್ಮಾನ

Pinterest LinkedIn Tumblr

asian_games_poovama_gold

ಮೂಡಬಿದಿರೆ, ಅ.29: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಕೀರ್ತಿಯನ್ನು ತಂದಿರುವ ಸಾಧಕ ಕ್ರೀಡಾಪಟುಗಳಾದ ಮಮತಾ ಪೂಜಾರಿ ಮತ್ತು ಪೂವಮ್ಮ ಅವರನ್ನು ಮೂಡಬಿದ್ರೆಯ ಪಂಡಿತ್ ರೆಸಾರ್ಟ್‌ನಲ್ಲಿ ರೆಸಾರ್ಟ್ ವತಿಯಿಂದ ಸನ್ಮಾನಿಸಲಾಯಿತು.

ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿಪಂಡಿತಾಚಾರ್ಯವರ್ಯ ಸ್ವಾಮೀಜಿ ಸಮಾರಂಭದಲ್ಲಿ ಕ್ರೀಡಾ ಪಟುಗಳನ್ನು ಸನ್ಮಾನಿಸಿ ಆಶೀರ್ವದಿಸಿದರು. ಅಲಂಗಾರು ಚರ್ಚ್‌ನ ಧರ್ಮ ಗುರು ರೆ. ಫಾ. ಬೆಸಿಲ್ ವಾಸ್ ಮಾತ ನಾಡಿ, ಕ್ರೀಡಾ ಸಾಧನೆಯಂತೆಯೇ ಜೀವನದಲ್ಲಿಯೂ ಕ್ರೀಡಾಸ್ಪೂರ್ತಿ ಯಿಂದ ಗುರಿ ಸಾಧಿಸಲಿ ಎಂದರು. ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಮಾತನಾಡಿ, ಕ್ರೀಡೆ ಎಂಬುದು ಒಂದು ವಿಶೇಷವಾದ ಸಾಧನೆ. ಸಾಧನೆಯ ಮೂಲಕ ಯಶಸ್ಸು ಗಳಿಸಬಹುದು ಎಂಬುದಕ್ಕೆ ಇವರು ಉದಾಹರಣೆಯಾಗಿದ್ದು ಮುಂದೆಯೂ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಮಂಜರಿ ಭಾರ್ಗವ್, ಪುರಸಭಾ ಸದಸ್ಯ ಪಿ.ಕೆ.ಥೋಮಸ್ ಉದ್ಯಮಿಗಳಾದ ಅಬುಲ್ ಆಲಾ, ರಂಜನ್ ರಾವ್ ಮಾತನಾಡಿದರು. ಸನ್ಮಾನಕ್ಕೆ ಉತ್ತರಿಸಿದ ಮಮತಾ ಪೂಜಾರಿ ಮತ್ತು ಪೂವಮ್ಮ ಮಾತನಾಡಿ, ತಮ್ಮ ಸಾಧನೆಯನ್ನು ಪ್ರೋತ್ಸಾಹಿಸುವ ಮೂಲಕ ರೆಸಾರ್ಟ್ ಸಾಮಾಜಿಕ ಬದ್ಧತೆಯನ್ನು ತೋರಿದೆ. ಕ್ರೀಡಾ ಸಾಧನೆ ಮಾಡುವ ಎಲ್ಲಾ ಕ್ರೀಡಾಪಟುಗಳಿಗೂ ಇದೇ ರೀತಿಯ ಪ್ರೋತ್ಸಾಹ ನೀಡಿ ಎಂದರು.

ರೆಸಾರ್ಟ್‌ನ ಆಡಳಿತ ನಿರ್ದೇಶಕಿ ರೂಬಿ ಅಗರ್‌ವಾಲ್ ಸ್ವಾಗತಿಸಿ, ಸನ್ಮಾನಿತರನ್ನು ಪರಿಚಯಿಸಿದರು. ಪ್ರಮೋಟರ್ ಲಾಲ್ ಗೋಯಲ್ ವಂದಿಸಿದರು. ರೀಟಾ ಡಿಸೋಜ, ಗ್ರೇಸಿ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

Write A Comment