ಕುಂದಾಪುರ: ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಶಿರೂರು ಗ್ರಾಮವನ್ನು ದತ್ತು ಸ್ವೀಕರಿಸಿ, ಆ ಮೂಲಕ ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಶಿರೂರು ಗ್ರಾಮಪಂಚಾಯತ್ ವಠಾರದಲ್ಲಿ ನಡೆದ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗಿನ ಜನಸಂಪರ್ಕ ಸಭೆಯಲ್ಲಿ ಘೋಷಿಸಿದರು.
ಪಡಿತರ ಚೀಟಿ ವಿತರಣೆಯಲ್ಲಿನ ಸಮಸ್ಯೆಯಿಂದಾಗಿ ಜನರು ಪರದಾಡುವಂತಾಗಿದೆ. ಪಡಿತರ ಚೀಟಿ ಪಡೆಯಲು 40 ಕಿ. ಮೀ ದೂರದ ಕುಂದಾಪುರಕ್ಕೆ ತೆರಳಬೇಕಾಗಿದ್ದು, ಅದನ್ನು ಪಂಚಾಯಿತಿನಲ್ಲಿಯೇ ನೀಡುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳ ಸಮ್ಮಖದಲ್ಲಿ ಗ್ರಾಮಸ್ಥರು ಒಕ್ಕೊರಳಿನಿಂದ ಆಗ್ರಹಿಸಿದರು.
ಶಿರೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ಚೀಟಿಗೆ ೧೫೯೨ ಅರ್ಜಿ ಸಲ್ಲಿಕೆಯಾಗಿದೆ, ಇದರಲ್ಲಿ ೭೬೦ ಪಡಿತರ ಚೀಟಿ ಈಗಾಗಲೇ ವಿತರಣೆಯಾಗಿದ್ದು, ೩೦೦ ಚೀಟಿ ಸಮರ್ಪಕ ದಾಖಲೆಯ ಕೊರತೆಯಿಂದ ತಿರಸ್ಕೃತಗೊಂಡಿದೆ, ಉಳಿದ ಚೀಟಿಗಳನ್ನು ಶೀಘ್ರ ವಿತರಣೆ ಮಾಡಲಾಗುವುದು, ಅಲ್ಲದೇ ಚುನಾವಣೆಯ ನಂತರ ಪಡಿತರ ಚೀಟಿಯಲ್ಲಿನ ಅಕ್ರಮ ತಡೆಗಟ್ಟಲು ಎಸ್‌ಎಂಎಸ್ ವ್ಯವಸ್ಥೆ ಬಂದಿದ್ದು ಇದರಿಂದಾಗಿ ಜನರಿಗೆ ಸ್ವಲ್ಪ ಮಟ್ಟಿಗೆ ಗೊಂದಲ ಎರ್ಪಟ್ಟಿದೆ. ಪಂಚಾಯಿತಿನಲಿಯೇ ಪಡಿತರ ಚೀಟಿ ವಿತರಿಸಲು ಸಾಪ್ಟ್‌ವೇರ್ ತೊಡಕ್ಕಾಗಿದ್ದು, ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಶೀಘ್ರ ಬಗೆಹರಿಯಲಿದೆ. ಎಂದು ತಹಶೀಲ್ದಾರ್ ಗಾಯತ್ರಿ ನಾಯಕ್ ಗ್ರಾಮಸ್ತರ ಆಗ್ರಹಕ್ಕೆ ಪ್ರತಿಕ್ರೀಯೆ ನೀಡಿದರು.
ಮೀನುಗಾರಿಕೆ ರಸ್ತೆ ಹಲವು ವರ್ಷಗಳಿಂದ ದುರಸ್ತಿ ಮಾಡದೇ ಇರುವುದರಿಂದ ಸಂಪೂರ್ಣ ಗುಂಡಿ ಬಿದ್ದಿದ್ದು, ಇದರಲ್ಲಿ ಜನರು ಸಂಚಾರ ದುಸ್ತರವಾಗಿದೆ, ಶೀಘ್ರ ರಸ್ತೆ ದುರಸ್ತಿಗೊಳಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೪ ಮೀನುಗಾರಿಕಾ ರಸ್ತೆಗಳಿವೆ, ಇದರ ದುರಸ್ತಿಗೆ ಈ ವರ್ಷ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ, ಅನುದಾನ ಬಿಡುಗಡೆಯಾದ ಬಳಿಕ ಅದನ್ನು ಶಾಸಕರ ಗಮನಕ್ಕೆ ತಂದು ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ರಸ್ತೆ ದುರಸ್ತಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಇದರಿಂದಾಗಿ ರಸ್ತೆ ದುರಸ್ತಿಗೊಳಿಸಿದ ವರ್ಷದೊಳಗೆ ಹೇಗೆ ಗುಂಡಿಗಳು ಬೀಳುತ್ತವೆ ಇದಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಶಿರೂರಿನ ಕರಾವಳಿ ಭಾಗದಲ್ಲಿನ ರಸ್ತೆಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ, ಇಲ್ಲಿನ ಚರಂಡಿ ಜಾಗ ಖಾಸಗಿ ವ್ಯಕ್ತಿಗಳಿಂದ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸುವಂತೆ ಐದಾರು ವರ್ಷಗಳಿಂದ ಸಂಬಂಧಿತರಿಗೆ ಮನವಿ ಮಾಡಲಾಗಿದೆ, ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ, ಇದನ್ನು ಶೀಘ್ರ ತೆರವುಗೊಳಿಸಿ ರಸ್ತೆ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ನಿರ್ಮಿಸಬೇಕು ಎಂದು ಪಂಚಾಯತ್ ಸದಸ್ಯರೊಬ್ಬರು ಆಗ್ರಹಿಸಿದರು, ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಲ್ಲಿನ ಅತಿಕ್ರಮಣ ತೆರವುಗೊಳಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು. ಹೀಗೆ ಹತ್ತು-ಹಲವು ವಿಶಯಗಳ ಬಗ್ಗೆ ಚರ್ಚೆ ನಡೆಯಿತು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ. ಪಂ. ಸದಸ್ಯೆ ಸಾವಿತ್ರಿ ಅಳ್ವೆಗದ್ದೆ, ಗ್ರಾಮ ಪಂಚಾಯತ್ ಅಧ್ಯಕ್ಷರು, sಸದಸ್ಯರು ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು

