ಕರಾವಳಿ

ಹಿಂದೂ ಸಂಘಟನೆ ತೊರೆದಿದ್ದ ಪ್ರಮುಖ ಮುಖಂಡರು ಶೀಘ್ರದಲ್ಲೇ ಶ್ರೀರಾಮ ಸೇನೆಗೆ ಸೇರ್ಪಡೆ…? ವಾಲ್ಕೆ, ಆನಂದ ಶೆಟ್ಟಿ, ಸುದತ್ತ ಜೈನ್…

Pinterest LinkedIn Tumblr

Pravin_walke_sudatt

ಮಂಗಳೂರು: ಭಿನ್ನಾಭಿಪ್ರಾಯದಿಂದಾಗಿ ಹಿಂದೂ ಸಂಘಟನೆಯಿಂದ ವಿಮುಖರಾಗಿ ಉಳಿದಿದ್ದ ಶ್ರೀರಾಮ ಸೇನೆ ಮತ್ತು ಬಜರಂಗದಳದ ಹುಟ್ಟಿಗೆ ಕಾರಣವಾಗಿದ್ದ ಹಳೆಯ ಹುಲಿಗಳು ಮತ್ತೆ ಹಿಂದೂ ಸಂಘಟನೆ ಅಡಿಯಲ್ಲಿ ಒಂದುಗೂಡಲಿದ್ದಾರೆ.

ಈಗಾಗಲೇ ಮೂರು ಸುತ್ತಿನ ಮಾತುಕತೆ ನಡೆದಿದ್ದು ಸೋಮವಾರ ನಡೆಯಲಿರುವ ಮಹತ್ವದ ಸಭೆಯ ಬಳಿಕ ಜಿಲ್ಲೆಯಲ್ಲಿ ಬಜರಂಗದಳ ಮತ್ತು ಶ್ರೀರಾಮ ಸೇನೆಯನ್ನು ಹುಟ್ಟು ಹಾಕಿದ್ದ ಪ್ರವೀಣ್ ವಾಲ್ಕೆ, ಆನಂದ ಶೆಟ್ಟಿ ಅಡ್ಯಾರ್ ಅದೇ ರೀತಿ ಅಖಿಲ ಭಾರತ ಕಾರ್ಮಿಕ ಸಂಘ ಹುಟ್ಟು ಹಾಕಿದ್ದ ಸುದತ್ತ ಜೈನ್ ಸಹಿತ ನೂರಾರು ಕಾರ್ಯಕರ್ತರು ಶ್ರೀರಾಮ ಸೇನೆಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಖಚಿತ ಮಾಹಿತಿ ಬೆಳಕಿಗೆ ಬಂದಿದೆ.

ಮೂರು ದಶಕದ ಹಿಂದೆ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಆರಂಭವಾದ ರಥಯಾತ್ರೆ ನೇತೃತ್ವ ನೋಡಿಕೊಳ್ಳಲು ರಚಿಸಲಾದ ಯುವಕರ ತಂಡವೊಂದಕ್ಕೆ `ಬಜರಂಗದಳ’ ಎನ್ನುವ ಹೆಸರು ಇಡುವ ಮೂಲಕ ಹುಟ್ಟಿಕೊಂಡ ಸಂಘಟನೆ 1996ರಲ್ಲಿ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ನಡೆದ ಸಭೆಯ ಬಳಿಕ ರಾಜ್ಯಕ್ಕೂ ವಿಸ್ತರಣೆಗೊಂಡಿತ್ತು. ಅಂದು ಮಂಗಳೂರು ಜಿಲ್ಲೆಯ ನೇತೃತ್ವವನ್ನು ವಹಿಸಿಕೊಂಡು ಬಲಿಷ್ಠವಾದ ಬಜರಂಗಿಗಳ ತಂಡವನ್ನು ಕಟ್ಟಿ, ಹತ್ತಾರು ಕೇಸುಗಳನ್ನು ಒಬ್ಬಂಟಿಗನಾಗಿ ತನ್ನ ಮೇಲೆ ಎಳೆದುಕೊಂಡು ಹಿಂದು ತ್ವಕ್ಕಾಗಿ ಹೋರಾಟ ಮಾಡಿಕೊಂಡಿದ್ದ ಪ್ರವೀಣ್ ವಾಲ್ಕೆ ಬಳಿಕದ ದಿನಗಳಲ್ಲಿ ಸಂಘಟನೆಯ ಆಂತರಿಕ ಕಚ್ಚಾಟದ ಮತ್ತು ಭಿನ್ನಾಭಿಪ್ರಾಯದ ಪರಿಣಾಮ ಸಂಘಟನೆಯಿಂದ ವಿಮುಖರಾಗಿದ್ದರು. ಆ ಸಂದರ್ಭದಲ್ಲಿ ಇನ್ನೂ ಹಲವಾರು ಮಂದಿ ಕಾರ್ಯಕರ್ತರು ಸಂಘಟನೆಯಿಂದ ದೂರ ಉಳಿದಿದ್ದರು.

ಬಳಿಕದ ದಿನದಲ್ಲಿ ಶ್ರೀರಾಮ ಸೇನೆಯನ್ನು ಕಟ್ಟಿಕೊಂಡು ಅದಕ್ಕಾಗಿ ದುಡಿದಿದ್ದರು, ಆದರೆ ಅಲ್ಲೂ ಒಂದಷ್ಟು ಭಿನ್ನಾಭಿಪ್ರಾಯ ಮೂಡಿದ ಕಾರಣ ಹಿಂದೂ ಸಂಘಟನೆಗಳಿಂದಲೇ ದೂರ ಉಳಿದಿದ್ದರು ಪ್ರವೀಣ್ ವಾಲ್ಕೆ. ಇದೇ ಸಾಲಿನಲ್ಲಿ ಮತ್ತೆ ಕೆಲವರು ಶ್ರೀರಾಮ ಸೇನೆಯಿಂದ ಹೊರಬಂದಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕ ಸೇನೆಯಲ್ಲಿದ್ದ ಸುದತ್ತ ಜೈನ್ ಶಿರ್ತಾಡಿ ಸೇನೆಯೊಳಗಿನ ರಾಜಕೀಯದಿಂದ ಬೇಸತ್ತು ಹೊರ ಬಂದು ಅಖಿಲಭಾರತ ಕಾರ್ಮಿಕ ಸಂಘವನ್ನು ಕಟ್ಟಿದ್ದರು.

ಹಳೆಯ ಹುಲಿಗಳು ಸಂಘ ಟನೆಯಿಂದ ಹೊರ ಬಂದ ಬಳಿಕ ಶ್ರೀರಾಮ ಸೇನೆಯ ಬಲ ಕುಗ್ಗುತ್ತಾ ಬಂದಿದ್ದರೆ, ಬಜರಂಗದಳದಲ್ಲಿ ಮೂಲ ತತ್ವಕ್ಕಿಂತ ವ್ಯತಿರಿಕ್ತ ಕೆಲ ಘಟನೆಗಳು ಆರಂಭವಾಗಿದ್ದವು. ಹಿಂದುತ್ವವನ್ನು ಪ್ರೀತಿಸುವ ಬದಲಾಗಿ ಹೊಡಿ ಬಡಿ ಸಂಸ್ಕೃತಿ ಅಧಿಕವಾಗಲು ಆರಂಭವಾಗಿತ್ತು. ಈ ಸಮಯದಲ್ಲೂ ಬಜರಂಗದಳದ ಕೆಲ ನಾಯಕರು ಮತ್ತು ಹಿರಿಯರು ಪ್ರವೀಣ್ ವಾಲ್ಕೆ ಅವರನ್ನು ಮತ್ತೆ ಬಜರಂಗದಳಕ್ಕೆ ಕರೆತರುವ ಯತ್ನ ನಡೆಸಿದರಾದರೂ ಅದು ವಿಫಲವಾಗಿತ್ತು. ಕೆಲ ವರುಷಗಳ ತನಕ ಈ ಪ್ರಯತ್ನ ಮುಂದುವರಿಯುತ್ತಲೇ ಇದ್ದವು.

ಇದೀಗ ಹೊಸ ಶಕೆ ಆರಂಭಗೊಂಡಂತಾಗಿದ್ದು, ಭಾರತೀಯ ಜನತಾ ಪಾರ್ಟಿ ಹಿಂದೂ ಸಂಘಟನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರಲು ಆರಂಭವಾಗಿದೆ, ಈ ಹಿಂದೊಮ್ಮೆ ಆಂತರಿಕ ಕಲಹದ ಪರಿಣಾಮ ಒಡೆದ ಮನೆಯಾಗಿದ್ದ ಬಿಜೆಪಿ ಮತ್ತು ಹಿಂದೂ ಸಂಘಟನೆ ಮತ್ತೆ ಒಂದಾಗುವ ಪ್ರಯತ್ನ ನಡೆಸಿದರೂ ಫಲ ನೀಡಿರಲಿಲ್ಲ. ಸಂಘಟನೆ ಕಾರ್ಯಕರ್ತರು ಜೈಲು ಪಾಲಾದಾಗ ಪಕ್ಷ ಬೆಂಬಲ ನೀಡಿಲ್ಲ ಎನ್ನುವ ದೂರು ಇದ್ದವು. ಈ ಎಲ್ಲಾ ಕಾರಣದಿಂದ ಮತ್ತೆ ಜಿಲ್ಲೆಯಲ್ಲಿ ಹಿಂದೂ ಸಂಘಟನೆಯನ್ನು ಬಲ ಪಡಿಸಬೇಕು ಎನ್ನುವ ಕಾರಣಕ್ಕೆ ಒಪ್ಪಂದ ಸೂತ್ರಗಳು ನಡೆಯುತ್ತಿದ್ದವು.

ಈ ಸಾಲಿನಲ್ಲಿ ಬಜರಂಗದಳ ಮುಂದೆ ಇದ್ದರೂ ಕೂಡಾ ವಾಲ್ಕೆ ರಾಮ ಸೇನೆಯತ್ತ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಆರ್ಯ ಸಮಾಜದಲ್ಲಿ ಮತ್ತು ಗೌಪ್ಯ ಸ್ಥಳದಲ್ಲಿ ನಡೆದಿದ್ದ ಮಾತುಕತೆಯಲ್ಲಿ ಒಂದು ತಾರ್ಕಿಕ ನಿರ್ಣಯಕ್ಕೆ ಬರಲಾಗಿದ್ದು, ಸೋಮವಾರ ಈ ಸಂಬಂಧ ನಡೆಯಲಿರುವ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡು ಅಧಿಕೃತವಾಗಿ ಶ್ರೀರಾಮ ಸೇನೆ ಸೇರ್ಪಡೆಯಾಗಲಿದ್ದಾರೆ.

ಅಖಿಲಭಾರತ ಕಾರ್ಮಿಕರ ಸಂಘಟನೆಯನ್ನು ಹಾಗೆಯೇ ಉಳಿಸಿಕೊಳ್ಳುವ ಮೂಲಕ ಸುದತ್ತ ಜೈನ್ ಕೂಡಾ ತನ್ನ ಹಳೆಯ ಮನೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಇಲ್ಲಿ ನೆಲೆ ಕಳೆದುಕೊಂಡಿರುವ ರಾಮಸೇನೆಗೆ ಜೀವ ತುಂಬುವ ಕೆಲಸ ನಡೆಯಲಿದೆ ಎನ್ನಲಾಗುತ್ತಿದೆ.

ಹಿಂದೂ ಧರ್ಮದ ಚಿಂತನೆ ಬಲಪಡಿಸಲು ಈ ನಿರ್ಧಾರ : ವಾಲ್ಕೆ

ಪೆಟ್ಟು ಹೊಡೆತ, ಬಡಿತ ಇವೆಲ್ಲ ಸಂಘಟನೆಗೆ ಹೇಳಿಸಿದ್ದಲ್ಲ, ಹಿಂದೂ ಹುಡುಗಿ ಮುಸ್ಲಿಂ ಹುಡುಗ ಮಾತನಾಡಿದ ತಕ್ಷಣ ಹೊಡೆಯುವುದು ಸಂಘಟನೆಯ ಉದ್ದೇಶವೂ ಅಲ್ಲ. ನೈಜವಾದ ಹಿಂದುತ್ವದ ಮತ್ತು ಹಿಂದೂ ಧರ್ಮದ ಚಿಂತನೆ ನಮ್ಮಲ್ಲಿ ಇರಬೇಕಾಗಿದೆ, ಈ ಚಿಂತನೆಯನ್ನೇ ಬಲ ಪಡಿಸುವ ಉದ್ದೇಶ ದಿಂದ ಶ್ರೀರಾಮ ಸೇನೆಗೆ ಬರುವ ಚಿಂತನೆ ನಡೆಸಿದ್ದೇನೆ ಎನ್ನುತಾರೆ ಪ್ರವೀಣ್ ವಾಲ್ಕೆ.

ವರದಿ ಕೃಪೆ : ಜಯಕಿರಣ.

Write A Comment