ಮಂಗಳೂರು,ಅ.17: ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ವೀನಾ ಕಾರಣ ಹಲ್ಲೆ ನಡೆಸಿದ ಕಾವೂರು ಪೊಲೀಸ್ ಠಾಣಾ ಎಸ್‌ಐ ಉಮೇಶ್ ಕುಮಾರ್ ಹಾಗೂ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪೊಲೀಸ್ ಪೇದೆಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ದ.ಕ.ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ಬಜರಂಗದಳ ಮಂಗಳೂರು ಘಟಕದ ನೂರಾರು ಕಾರ್ಯಕರ್ತರು ಶುಕ್ರವಾರ ಕಾವೂರು ಪೊಲೀಸ್ ಠಾಣಾ ಮುಂಭಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ವಿಶ್ವಹಿಂದೂ ಪರಿಷತ್‌ನ ಮುಖಂಡ ಜಗದೀಶ್ ಶೇಣವ ಅವರು ಮಾತನಾಡಿ, ಪ್ರಕರಣವೊಂದಕ್ಕೆ ಸಮ್ಮಂದ ಪಟ್ಟಂತೆ ಪೊಲೀಸ್ ಠಾಣೆಗೆ ಹಾಜರಾಗಲು ನಿರಾಕರಿಸಿ ನ್ಯಾಯಾಲಯದಿಂದ ಜಾಮೀನು ಪಡೆಯಲು ಯತ್ನಿಸಿದ ಕಾರಣಕ್ಕಾಗಿ ಭಜರಂಗದಳದ ಕಾರ್ಯಕರ್ತ ಚರಣ್ ಮೇಲೆ ಕಾವೂರು ಠಾಣಾ ಎಸ್‌ಐ ಉಮೇಶ್ ಕುಮಾರ್ ಅವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಗಂಭೀರ ಗಾಯಗೊಂಡ ಚರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಈ ದೌರ್ಜನ್ಯಕ್ಕೆ ಇಬ್ಬರು ಪೇದೆಗಳು ಸಹಕರಿಸಿದ್ದಾರೆ ಎಂದು ಆರೋಪಿಸಿದರು.
ಚರಣ್ ಮೇಲೆ ವೀನಾ ಕಾರಣ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ ಕಾವೂರು ಪೊಲೀಸ್ ಠಾಣಾ ಎಸ್‌ಐ ಉಮೇಶ್ ಕುಮಾರ್ ಹಾಗೂ ಈ ಇಬ್ಬರು ಪೇದೆಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಜಗದೀಶ್ ಶೇಣವ ಆಗ್ರಹಿಸಿದರು.
ನಿರಂತರ ಪ್ರತಿಭಟನೆ : ಶೇಣವ
ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಜಗದೀಶ್ ಶೇಣವ ಅವರು, ಘಟನೆ ನಡೆದ ತಕ್ಷಣ ಈ ಪ್ರಕರಣಕ್ಕೆ ಸಮ್ಮಂದಿಸಿದಂತೆ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ನ ಕಾರ್ಯಕರ್ತರು ಎಸ್.ಐ ಅವರನ್ನು ಅಮಾನತು ಮಾಡಲು ಆಗ್ರಹಿಸಿ ಪೊಲೀಸ್ ಅಯುಕ್ತರಿಗೆ ದೂರು ನೀಡಿದ್ದರು. ಆದರೆ ಎಸ್‌ಐ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ಮಂಗಳೂರು ವಿಮಾನ ನಿಲ್ದಾಣ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದೇವೆ. ಎಸ್‌ಐ ಉಮೇಶ್ ಕುಮಾರ್ ಅವರನ್ನು ಇಂದು ಸಂಜೆಯೊಳಗೆ ಅಮಾನತುಗೊಳಿಸದಿದ್ದರೆ ನಾಳೆ ಇದೇ ಸ್ಥಳದಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ. ಎಸ್‌ಐ ಅಮಾನತು ಆಗುವವರೆಗೆ ನಾವು ಕಾವೂರು ಪರಿಸರದಲ್ಲಿ ನಿರಂತರವಾಗಿ ಧರಣಿ ಸತ್ಯಗ್ರಹ, ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ತನಿಖಾ ವರದಿ ಕೈಸೇರಿದ ಕೂಡಲೇ ಕ್ರಮ :ಡಿಸಿಪಿ
ಎಸೈ ವಿರುದ್ಧದ ಈ ಪ್ರಕರಣದ ತನಿಖೆ ಮೂಡಬಿದ್ರೆ ಠಾಣಾ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತ್ರತ್ವದಲ್ಲಿ ನಡೆಯುತ್ತಿದ್ದು, ತನಿಖಾ ವರದಿ ಕೈಸೇರಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ವಿಷ್ಣುವರ್ಧನ್ ಅವರು ಸುದ್ಧಿಗಾರರಲ್ಲಿ ತಿಳಿಸಿದ್ದಾರೆ.





