ರಿಯಾದ್: “ಮನುಕುಲವನ್ನು ಗೌರವಿಸಿ” ಎಂಬ ಸಂದೇಶದೊಂದಿಗೆ ಅಕ್ಟೋಬರ್ 25ರಿಂದ ನವೆಂಬರ್ 2ರ ತನಕ ಗುಲ್ಬರ್ಗಾದಿಂದ ಮಂಗಳೂರಿನವರೆಗೆ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮುಂದಾಳುತ್ವದಲ್ಲಿ ಎಸ್.ಎಸ್.ಎಫ್ ಬೆಳ್ಳಿಹಬ್ಬದ ಪ್ರಯುಕ್ತ ನಡೆಯಲಿರುವ “ಕರ್ನಾಟಕ ಯಾತ್ರೆ” ಯ ಪ್ರಚಾರಾರ್ಥ ಇಲ್ಲಿನ ಬತ್ತಾದ ಪ್ರತಿಷ್ಠಿತ ರಮಾದ್ ಹೋಟೆಲ್ ಸಭಾಂಗಣದಲ್ಲಿ ಬೃಹತ್ ಮಾನವತಾ ಸಮಾವೇಶವು ಇತ್ತೀಚಿಗೆ ನಡೆಯಿತು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ನಗರದ ಆಸುಪಾಸಿನ ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಕನ್ನಡಿಗ ಮುಸ್ಲಿಮರು ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮುಖ್ಯ ಅತಿಧಿಯಾಗಿ ಪಾಲ್ಗೊಂಡ ಉಜಿರೆ ‘ಮಲ್ಜಅ್ ಸಮಾಜ ಸೇವಾ ಪ್ರತಿಷ್ಠಾನ’ದ ಮುಖ್ಯಸ್ಥ ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಾತನಾಡಿ ” ಇಡೀ ಮಾನವ ಜನಾಂಗವು ಓರ್ವ ತಂದೆ ತಾಯಂದಿರ ಮಕ್ಕಳಾಗಿ ಹುಟ್ಟಿ ಬೆಳೆದವರಾಗಿದ್ದು ಮುಂದಿನ ತಲೆಮಾರುಗಳಲ್ಲಿ ಅವರು ವಿವಿಧ ಧರ್ಮ, ಪಂಥ, ಪಂಗಡಗಳಾಗಿ ಹರಿ ಹಂಚಾಗಿ ಹೋಗಿದ್ದಾರೆ. ಮಾನವರು ಎನ್ನುವ ನೆಲೆಯಲ್ಲಿ ಎಲ್ಲರನ್ನೂ ಗೌರವಿಸಬೇಕಾದ ಧರ್ಮ ನಮ್ಮದು, ಇಸ್ಲಾಮೀ ಶಿಕ್ಷಣವು ಈ ಅಂಶವನ್ನು ತುಂಬಾ ಮಹತ್ವದ್ದೆಂದು ಪರಿಗಣಿಸಿದೆ, ಪ್ರವಾದಿ(ಸ.ಅ) ತನ್ನ ಬದುಕಿನಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವ ಕಲ್ಪಿಸುವುದರ ಜತೆಗೆ ಅದನ್ನು ತನ್ನ ಅನುಯಾಯಿಗಳಿಗೂ ಸಾರಿ ಹೇಳಿದ್ದಾರೆ, ಸಾಮಾಜಿಕ ವಾತಾವರಣವೇ ಕಲುಷಿತವಾಗುತ್ತಿರುವ ಇಂದಿನ ದಿನಗಳಲ್ಲಿ ದೇಶದ ಘನ ವಿದ್ವಾಂಸರೂ, ಶಿಕ್ಷಣ ಹರಿಕಾರರೂ ಎಲ್ಲಕ್ಕಿಂತ ಮುಖ್ಯವಾಗಿ ಓರ್ವ ಸಾಮಾಜಿಕ ಹಿತ ಚಿಂತಕರೂ ಆಗಿರುವ ಸುನ್ನೀ ಸಮಾಜದ ಧೀಮಂತ ನಾಯಕ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ತನ್ನ ಬಿಡುವಿಲ್ಲದ ಸಮಯಗಳನ್ನು ಕರ್ನಾಟಕ ಜನತೆಯ ಆಶೋತ್ತರಗಳಿಗಾಗಿ ಮೀಸಲಿರಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಮರಸ್ಯ ಬಯಸುವ ಎಲ್ಲರೂ ಈ ಯಾತ್ರೆಯೊಂದಿಗೆ ಕೈ ಜೋಡಿಸೋಣ” ಎಂದು ಅವರು ಕರೆ ನೀಡಿದರು.
ಮರ್ಕಝ್ ರಿಯಾದ್ ಘಟಕದ ಕಾರ್ಯದರ್ಶಿಯೂ ಇಲ್ಲಿನ ಕಿಂಗ್ ಸದ್ ವೈದ್ಯಕೀಯ ವಿದ್ಯಾಲಯದ ಉಪನ್ಯಾಸಕರೂ ಆದ ಡಾ ಅಬ್ದುಲ್ ಸಲಾಂ ಸಮಾವೇಶವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಫ್ ಬೆಳ್ಳಿಹಬ್ಬದ ಕೊಡುಗೆಯಾಗಿ ಕೆ.ಸಿ.ಎಫ್ ರಿಯಾದ್ ಘಟಕದ ವತಿಯಿಂದ ನೀಡಲಾಗುವ ಸಂಚಾರಿ ಗ್ರಂಥಾಲಯದ ಕೀಲಿಕೈಯ ಪ್ರತಿರೂಪವನ್ನು ಕೆ.ಸಿ.ಎಫ್ ಪ್ರಾಂತೀಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ಕಾರ್ಯದರ್ಶಿ ಫಾರೂಕ್ ಉಳ್ಳಾಲ್ ಹಾಗೂ ಕೋಶಾಧಿಕಾರಿ ನಝೀರ್ ಕಾಶಿಪಟ್ಣ ಸೇರಿ ಉಜಿರೆ ತಂಙಳ್ ರವರಿಗೆ ಹಸ್ತಾಂತರಿಸಿದರು.
ಎಸ್.ಎಸ್.ಎಫ್ ಸೇರಿದಂತೆ ವಿವಿಧ ಸುನ್ನಿ ಸಂಘಟನೆಗಳ ಕೇಂದ್ರೀಯ ಸೌಧ ನಿರ್ಮಾಣಕ್ಕಾಗಿ ಖರೀದಿಸಲಾಗುವ ಉದ್ದೇಶಿತ ಜಾಗದ ನಿಧಿಗೆ ಕೆ.ಸಿ.ಎಫ್ ತನ್ನ ಸದಸ್ಯರಿಂದ ಸಂಗ್ರಹಿಸಿದ ಒಂದು ದಿನದ ವೇತನ 1,50,000ರೂಪಾಯಿ ಮೊತ್ತವನ್ನು ಹನೀಫ್ ಬೆಳ್ಳಾರೆ, ಇಸ್ಮಾಈಲ್ ಜೋಗಿಬೆಟ್ಟು ಹಾಗೂ ಇಲ್ಯಾಸ್ ಲತೀಫಿ ಸೇರಿ ಹಸ್ತಾಂತರಿಸಿದರು.
ಬೆಳ್ಳಿಹಬ್ಬದ ಪ್ರಯುಕ್ತ ಎಸ್.ಎಸ್.ಎಫ್ ಅನೇಕ ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದು ಅವುಗಳ ಪೈಕಿ ಅತ್ಯಂತ ಉಪಯುಕ್ತವೆನಿಸಿದ ಸಮಾಜದ ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ವಿತರಿಸುವ ಕಾರ್ಯಕ್ರಮಕ್ಕೆ ಕೆ.ಸಿ.ಎಫ್ ರಿಯಾದ್ ಘಟಕವು 60 ಹೊಲಿಗೆ ಯಂತ್ರಗಳನ್ನು ಈ ಸಭೆಯಲ್ಲಿ ಘೋಷಣೆ ಮಾಡಿತು. ಅದೂ ಅಲ್ಲದೇ ಶೀಘ್ರದಲ್ಲೇ ಗಲ್ಫ್ ಪ್ರಾಂತ್ಯದಿಂದ ತನ್ನ ಪ್ರಕಟಣೆಯನ್ನು ಆರಂಭಿಸಲಿರುವ ಸಂಘಟನೆಯ ಮುಖವಾಣಿ “ಗಲ್ಫ್ ಇಶಾರ” ದ ಚಂದಾ ಅಭಿಯಾನಕ್ಕೆ ಸಮಾವೇಶದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
“ಕರ್ನಾಟಕ ಯಾತ್ರೆ” ಎಂಬ ಕರಪತ್ರವನ್ನು ಈ ಸಂದರ್ಭದಲ್ಲಿ ಐ.ಸಿ.ಎಫ್ ರಿಯಾದ್ ಕಾರ್ಯದರ್ಶಿ ಆಲಿಕುಂಙ್ಞ ಮುಸ್ಲಿಯಾರ್ ರವರಿಗೆ ಪ್ರತಿ ನೀಡಿ ಅಬ್ದುಲ್ಲಾ ಸಖಾಫಿ ನಿಂತಿಕ್ಕಲ್ಲು ಬಿಡುಗಡೆಗೊಳಿಸಿದರು.
ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಸಿದ್ದೀಕ್ ಸಖಾಫಿ ಪೆರುವಾಯಿ ಆರಂಭದಲ್ಲಿ ಸ್ವಾಗತಿಸಿ, ಹೈದರ್ ಮರ್ದಾಳ ಕೊನೆಯಲ್ಲಿ ವಂದಿಸಿದರು,ನವಾಝ್ ಸಖಾಫಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.



















