ಮಂಗಳೂರು, ಅ.11: ಕೊಟ್ಟಾರ- ಕೊಡಿಕಲ್ ಕೂಡು ರಸ್ತೆಯ ಬಳಿಯೇ ಫೈಓವರ್ ಸೇತುವೆಯೂ ಸಂಪರ್ಕಿಸುತ್ತಿರುವುದರಿಂದ ಇಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿರುವ ಈ ಪ್ರದೇಶದಲ್ಲಿ ಸೂಕ್ತ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನಗರ ಟ್ರಾಫಿಕ್ ಪೊಲೀಸ್ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಮಸ್ಯೆಯ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಮಸ್ಯೆಯ ಪರಿಹಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಫೈಓವರ್ ಅಂತ್ಯವಾಗುವಲ್ಲಿ ಕೊಡಿಕಲ್ ಸಂಪರ್ಕ ರಸ್ತೆ ಇದೆ. ಇದೇ ಪ್ರದೇಶದಲ್ಲಿ ಹೆದ್ದಾರಿಯ ಇನ್ನೊಂದು ಕಡೆಯಿಂದ ಬರುವ ವಾಹನಗಳು ಯು ಟರ್ನ್ ತೆಗೆದುಕೊಳ್ಲುತ್ತಿರುವುದರಿಂದ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳು ಉಂಟಾಗುತ್ತಿವೆ. ಆದುದರಿಂದ ಫೈಓವರ್ ಪಕ್ಕದ ಸರ್ವಿಸ್ ರಸ್ತೆಯನ್ನು ಇನ್ನಷ್ಟು ದೂರು ವಿಸ್ತರಿಸುವ ಮತ್ತು ಕೋಡಿಕಲ್‌ನಿಂದ ಬರುವ ವಾಹನಗಳು ಕೂಳೂರು ಜಂಕ್ಷನ್‌ವರೆಗೆ ಹಾಗೂ ತಿರುವು ಪಡೆಯುವ ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹೆದ್ದಾರಿಯ ಇನ್ನೊಂದು ಕಡೆಯಿಂದ ಯು ಟರ್ನ್ ಪಡೆಯುವುದನ್ನೂ ತಡೆಯಲು ಯೋಚಿಸಲಾಗಿದೆ. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದೇನೆ ಎಂದು ಐವನ್ ಮಾಹಿತಿ ನೀಡಿದರು.
ಸ್ಥಳೀಯ ಕಾರ್ಪೊರೇಟರ್ , ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಟ್ರಾಫಿಕ್ ಪೊಲೀಸ್ ಅಧಿಕಾರಿ ಗೋಕುಲ್, ಇಂಜಿನಿಯರ್ ಎಂ.ಎಸ್, ನಾಗೇಶ್ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಲು ಉಪಸ್ಥಿತರಿದ್ದರು.








