ಕರಾವಳಿ

ಕಾನೂನು ದುರುಪಯೋಗವಾಗದಂತೆ ತಡೆಯೋದು ಪೊಲೀಸ್ ಇಲಾಖೆ ಜವಬ್ದಾರಿ: ಸಾರ್ವಜನಿಕರೊಂದಿಗೆ ಮುಕ್ತ ಸಂವಾದದಲ್ಲಿ ಐಜಿಪಿ ಅಮೃತ್‌ಪಾಲ್

Pinterest LinkedIn Tumblr

ಕುಂದಾಪುರ: ನಮ್ಮ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕಾನೂನು ಮೂಲಕ ಮಾತ್ರವೇ ಸಾಧ್ಯ. ಇದರ ದುರುಪಯೋಗವಾಗದಂತೆ ತಡೆಯುವುದು ಪೊಲೀಸ್ ಇಲಾಖೆಯ ಕರ್ತವ್ಯ ಹಾಗೂ ಬದ್ದತೆಯಾಗಿದೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮ್ರತ್‌ಪಾಲ್ ಹೇಳಿದ್ದಾರೆ.

ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಕುಂದಾಪುರ ಪೊಲೀಸ್ ಉಪವಿಭಾಗದ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ನಡೆದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

IGP-Amrathpal_ctizen meet

ಸಾರ್ವಜನಿಕರು ನೀಡುವ ಅಭಿಪ್ರಾಯ ಹಾಗೂ ಅವರ ಕುಂದು ಕೊರತೆಗಳನ್ನು ಆಲಿಸಿ ಅದಕ್ಕೊಂದು ಪರಿಹಾರ ರೂಪಿಸುವ ಸಲುವಾಗಿ ಹಾಗೂ ಪೊಲೀಸ್ ಇಲಾಖೆಯ ಕಾರ್‍ಯ ಶೈಲಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಈ ಸಂವಾದ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದಾಗಿ ಮಾತಿನ ಮೊದಲು ಹೇಳಿದ ಐಜಿಪಿ ಅಮ್ರತ್‌ಪಾಲ್ ಅವರು, ಸುಮಾರು ೧.೩೦ ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಸಾರ್ವಜನಿಕರಿಂದ ಬಂದ ವಿವಿಧ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರವನ್ನು ನೀಡಿದರು.

ಟ್ರಾಫಿಕ್ ಸಮಸ್ಯೆ ತೊಡಕು: ಸಭೆಯಲ್ಲಿ ಟ್ರಾಫಿಕ್ ಸಮಸ್ಯೆಗಳ ಕುರಿತು ಮಾತನಾಡಿದ ಬಿಜೆಪಿ ಮುಖಂಡ ಕಿಶೋರಕುಮಾರ, ಪತ್ರಕರ್ತ ಕೆ.ಜಿ ವೈದ್ಯ, ಕೆಂಚನೂರು ಸೋಮಶೇಖರ ಶೆಟ್ಟಿ, ಶ್ರೀಕೃಷ್ಣ ಕಾರಂತ್ ಕೋಣಿ, ಉಪನ್ಯಾಸಕ ಕೆ.ವಿ ನಾಯಕ್, ಡಾ.ಎಚ್.ಎಸ್ ಮಲ್ಲಿ, ನೇರಳಕಟ್ಟೆ ನಾರಾಯಣ ನಾಯಕ್ ಮುಂತಾದವರು ಬೆಳೆಯುತ್ತಿರುವ ಕುಂದಾಪುರದಲ್ಲಿ ಪ್ರತ್ಯೇಕವಾದ ಟ್ರಾಫಿಕ್ ಠಾಣೆ ಇದ್ದರೂ, ಅದನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ನಗರದಲ್ಲಿ ಇರುವ ಪ್ರಸ್ತುತ ಇರುವ ಪಾರ್ಕಿಂಗ್ ವ್ಯವಸ್ಥೆ ತೊಡಕಾಗಿದೆ ಎಂದರು.

ಸಮಸ್ಯೆಗಳು ಎಲ್ಲೆಲ್ಲಿ: ರಾತ್ರಿ ಪಾಳಯದಲ್ಲಿಯೂ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು, ನಗರ ವ್ಯಾಪ್ತಿಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಂಗಮ್‌ನಿಂದ ಕೋಡಿ ವಿನಾಯಕದವರೆಗೂ ರಿಂಗ್ ರಸ್ತೆಯನ್ನು ವಿಸ್ತರಿಸಿ ಅಭಿವೃದ್ದಿಗೊಳಿಸಲು ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ನಿರ್ಭಂದಿತ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಹಾಗೂ ಸಂಚಾರಿ ನಿಯಮವನ್ನು ಉಲ್ಲಂಘಿಸುವವರಿಗೆ ದೊಡ್ಡ ಮೊತ್ತದ ದಂಡವನ್ನು ಹಾಕಬೇಕು ಎಂಬುದು ಸಭೆಯಲ್ಲಿ ನೆರೆದವರಿಂದ ಬಂದ ಟ್ರಾಫಿಕ್ ಸಮಸ್ಯೆ ಗೊಂದಲದ ಬಗೆಗಿನ ಪರಿಣಾಮಕಾರಿ ಮಾತುಗಳು. ಉಳಿದಂತೆ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಗಾಗಿ ನಿರ್ಮಿಸಲಾದ ತಾತ್ಕಾಲಿಕ ತಡೆಗೋಡೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸಬೇಕಾದವರ ದಿಕ್ಕು ತಪ್ಪುತ್ತಿದೆ. ಚಿಕ್ಕನ್ ಸಾಲ್ ರಸ್ತೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಏಕ ಮುಖ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ರೈಲ್ವೆ ಸ್ಟೇಶನ್‌ಗೆ ಪರ್ಮಿಟ್ ಹೊಂದಿರುವ ಬಸ್ಸುಗಳಿಗೆ ಕಡ್ಡಾಯವಾಗಿ ಅಲ್ಲಿಗೆ ತೆರಳಲು ಸೂಚಿಸಬೇಕು. ರಸ್ತೆ ಬದಿಯಲ್ಲಿ ವಾಣಿಜ್ಯ ಫಲಕಗಳನ್ನು ನಿಲ್ಲಿಸುವವರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳಿಲ್ಲಿ ಕೇಳಿಬಂತು.

IGP-Amrathpal_ctizen meet (3) IGP-Amrathpal_ctizen meet (2) IGP-Amrathpal_ctizen meet (4) IGP-Amrathpal_ctizen meet (1) IGP-Amrathpal_ctizen meet (5)

ನೆರೆದವರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಐಜಿಪಿಯವರು ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಲು ಮೂಡ್ಲಕಟ್ಟೆ ಎಂಐಟಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ನೀಲನಕಕಾಶೆ ತಯಾರಿಸಿ ಇದಕ್ಕೆ ಪೂರಕವಾದ ಯೋಜನೆ ರೂಪಿಸಲಾಗುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ದ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕುಂದಾಪುರ ಹಾಗೂ ಕೋಟ ಪೊಲೀಸ್ ಠಾಣಾ ನಡುವೆ ಸಾಕಷ್ಟು ಗ್ರಾಮೀಣ ಪ್ರದೇಶಗಳು ಬರುವುದರಿಂದಾಗಿ ಕೋಟೇಶ್ವರ ಅಥವಾ ಕಾಳಾವರವನ್ನು ಕೇಂದ್ರವಾಗಿರಿಸಿಕೊಂಡು ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾಡಿದ ಮನವಿ ಪ್ರತಿಕ್ರಿಯಿಸಿದ ಐಜಿಪಿ ಯವರು ಎರಡು ವಾರದ ಒಳಗೆ ಈ ಕುರಿತು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಸ್ಥಳದಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿಯವರು ಪ್ರಾಸ್ಯಿಕ್ಯೂಶನ್ ವಿಫಲತೆಯ ಕುರಿತು ಮಾತನಾಡುತ್ತಾ, ಕೆಲವು ಪೊಲೀಸರು ಠಾಣೆಗೆ ಬಂದವರಿಗೆ ನಿರ್ದಿಷ್ಠ ವಕೀಲರ ಬಳಿ ತೆರಳಿ ಎಂದು ಸಲಹೆ ನೀಡುವುದಲ್ಲದೆ, ಇದಕ್ಕಾಗಿ ಕಿಕ್ ಬ್ಯಾಕ್ ಪಡೆದುಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಇದೊಂದು ಗಂಭೀರ ಆರೋಪವಾಗಿದೆ, ಈ ಬಗ್ಗೆ ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ನೇರ ತನಗೆ ಲಿಖಿತ ದೂರು ಸಲ್ಲಿಸಿದಲ್ಲಿ, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕುಂದಾಪುರ ಮಹಿಳಾ ಠಾಣೆಯನ್ನು ಉಡುಪಿಗೆ ಸ್ಥಳಾಂತರಿಸುವ ಕುರಿತಂತೆ ಮಾತನಾಡಿದ ಪುರಸಭೆಯ ಮಾಜಿ ಅಧ್ಯಕ್ಷೆ ಗುಣರತ್ನ ಅವರು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಕುಂದಾಪುರ ತಾಲೂಕಿಗೆ ಈ ಠಾಣೆ ಅಗತ್ಯವಾಗಿದ್ದು, ಯಾವುದೆ ಕಾರಣಕ್ಕೂ ಸ್ಥಳಾಂತರ ಮಾಡದಂತೆ ಮನವಿ ಮಾಡಿಕೊಂಡಾಗ, ಐಜಿಪಿ ಅವರು ನಮ್ಮ ಕೈಲಾದಷ್ಟು ಈ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದರು.

ಮಹಿಳೆ ಹಾಗೂ ಮಕ್ಕಳ ಲೈಂಗಿಕ ಶೋಷಣಿ ಕಾಯ್ದೆ (ಫೋಸ್ಕೋ) ದುರ್ಬಳಕೆಯಾಗುತ್ತಿದೆಯಾಗುತ್ತಿದೆ ಹಾಗೂ ಸುಳ್ಳು ದೂರುಗಳು ದಾಖಲಾಗುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣUಳ ನಿಯಂತ್ರಣಕ್ಕಾಗಿ ಕಾನೂನು ಬಳಕೆ ಅಗತ್ಯವಾಗಿದೆ. ದೂರು ದಾಖಲಿಸಿದ ಬಳಕ ಆರೋಪಿತರನ್ನು ಬಂಧಿಸುವುದು ಹಾಗೂ ತನಿಖೆ ನಡೆಸಿ ಆರೋಪಗಳ ಸತ್ಯತೆಯನ್ನು ಪರಿಶೀಲಿಸುವುದು ತನಿಖಾಧಿಕಾರಿಗಳ ವಿವೇಚನೆ ಬಿಟ್ಟಿದ್ದು. ತನಿಖೆ ವೇಳೆಯಲ್ಲಿ ಆರೋಪ ಸುಳ್ಳು ಎಂದಾದಲ್ಲಿ `ಬಿ’ ರಿಪೋರ್ಟ್ ಹಾಕುತ್ತೇವೆ. ಈ ಆರೋಪ ಸತ್ಯ ಎಂದಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇದೇ ವೇಳೆ ಹೆದ್ದಾರಿಯಲ್ಲಿ ಮೀನು ಲಾರಿ ಹಾಗೂ ಜಲ್ಲಿ ಲಾರಿಗಳಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಉಂಟಾಗುವ ಸಮಸ್ಯೆ, ಗ್ರಾಮೀಣ ಭಾಗದಲ್ಲಿ ಪೊಲೀಸ್ ಜನ ಸಂಪರ್ಕ, ರಾತ್ರಿ ವೇಳೆ ಗಸ್ತು ಹೆಚ್ಚಿಸುವ ಕುರಿತು ಸಾರ್ವಜನಿಕರು ಕೇಳಿದ ಹಲವಷ್ಟು ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷಕುಮಾರ ಉಪಸ್ಥಿತರಿದ್ದರು.

ಕುಂದಾಪುರ ಉಪವಿಭಾಗದ ಡಿವೈ‌ಎಸ್ಪಿ ಸಿ.ಬಿ ಪಾಟೀಲ್ ಸ್ವಾಗತಿಸಿದರು, ವೃತ್ತನಿರೀಕ್ಷಕ ದಿವಾಕರ ಪಿ.ಎಂ. ನಿರೂಪಿಸಿದರು.

Write A Comment