ಮಂಗಳೂರು,ಅ.೦8: ಮೂಡಬಿದರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ವು ನಡೆಸಿಕೊಂಡು ಬರುತ್ತಿರುವ ನಾಡ – ನುಡಿ – ಸಂಸ್ಕ್ರತಿಯ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮ “ಆಳ್ವಾಸ್ ನುಡಿಸಿರಿ” ನವೆಂಬರ್ 14 15 ಮತ್ತು 16 (ಶುಕ್ರವಾರ, ಶನಿವಾರ, ಮತ್ತು ಭಾನುವಾರ) ಈ ಮೂರು ದಿನಗಳ ಕಾಲ ‘ಕರ್ನಾಟಕ : ವರ್ತಮಾನದ ತಲ್ಲಣಗಳು’ ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಮೂಡುಬಿದಿರೆ ವಿಧ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ನುಡಿಸಿರಿಯ ರೂವಾರಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
ಬುಧವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಹೆಸರಾಂತ ಕವಿಗಳು, ಸಂಘಟನಾತ್ಮಕ ಕಾರ್ಯಗಳಲ್ಲಿ ಖ್ಯಾತರೂ ಆಗಿರುವ ನಾಡೋಜ ಡಾ.ಸಿದ್ಧಲಿಂಗಯ್ಯನವರು ಆಳ್ವಾಸ್ ನುಡಿಸಿರಿ 2014 ರ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ನಗರದ ಹಿರಿಯ ಕಾದಂಬರಿಕಾರ, ಸಾಮಾಜಿಕ ಹೋರಾಟಗಾರ, ಮಡಿಕೇರಿಯಲ್ಲಿ ನಡೇದ 80 ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ನಾಡಿನ ಹೆಮ್ಮೆಯ ಸಾಹಿತಿ ನಾ.ಡಿ.ಸೋಜ ಅವರು ಆಳ್ವಾಸ್ ನುಡಿಸಿರಿ 2014 ರ ಉದ್ಘಾಟನೆಯನ್ನು ನೆರವೇರಿಸಲಿರುವರು ಎಂದರು.
ಆಳ್ವಾಸ್ ನುಡಿಸಿರಿಯನ್ನು ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು – ನುಡಿಯ ಎಚ್ಚರವನ್ನೂ, ಸಂಸ್ಕ್ರತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ವಿಧ್ಯಾರ್ಥಿಗಳಿಗೆ ಹಾಗೂ ಪ್ರತಿನಿಧಿಗಳಿಗೆ ಸಂಪೂರ್ಣ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಇತರ ಪ್ರತಿನಿಧಿಗಳಿಗೆ 100/- ರೂ ಪ್ರತಿನಿಧಿ ಶುಲ್ಕದೊಂದಿಗೆ ಮೂರು ದಿನಗಳ ಕಾಲ ವಸತಿ, ಊಟೋಪಚಾರದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ನಾಡಿನ ಪ್ರಸಿದ್ಧ ಸಾಹಿತಿಗಳು, ವಿದ್ವಾಂಸರು. ಕವಿಗಳು ಭಾಗವಹಿಸುವ ಈ ಸಮ್ಮೇಳನವನ್ನು ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಯಶಸ್ವಿಗೊಳಿಸಬೇಕೆಂಬುದು ಮೋಹನ್ ಆಳ್ವ ಅವರು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಾಹಿತಿ ನಾ.ದಾಮೋದರ ಶೆಟ್ಟಿ ಅವರು ಪೂರಕ ಮಾಹಿತಿಗಳನ್ನು ನೀಡಿದರು.

