ಕರಾವಳಿ

ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳೊಡನೆ ಚರ್ಚಿಸುವೆ: ಶಾಸಕ ಗೋಪಾಲ ಪೂಜಾರಿ

Pinterest LinkedIn Tumblr

ಕುಂದಾಪುರ: ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಖಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚು. ಶಿಕ್ಷಣದ ಗುಣ ಮಟ್ಟ ಹೆಚ್ಚಿಸುವಲ್ಲಿ ಅತಿಥಿ ಉಪನ್ಯಾಸಕರ ಸೇವೆ ಅತ್ಯಗತ್ಯ, ಗಗನಕ್ಕೇರುತ್ತಿರುವ ಬೆಲೆಗಳಿಗನುಸಾರವಾಗಿ ಉಪನ್ಯಾಸಕರಿಗೆ ನೀಡುತ್ತಿರುವ ಸಂಬಳ ಏನೇನೂ ಸಾಲದು. ಸೇವೆ ಖಾಯಾಮಾತಿ, ಮಾಸಿಕ ಇಪ್ಪತ್ತೈದು ಸಾವಿರ ಸಂಬಳ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆದು, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳೊಡನೆ ಮುಕ್ತ ಚರ್ಚೆಗೆ ಸದ್ಯದಲ್ಲಿಯೇ ಅವಕಾಶ ನೀಡುತ್ತೇನೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಭರವಸೆ ನೀಡಿದರು.

Guest lecturer samavesha

ಅವರು ರವಿವಾರ ಕೋಟೇಶ್ವರ ಸರಸ್ಪತಿ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ಭಂಡಾರ್ಕಾರ್‍ಸ್ ಕಾಲೇಜಿನ ಉಪನ್ಯಾಸಕ ಡಾ. ಹಯವದನ ಮೂಡುಸಗ್ರಿ ಮಾತನಾಡಿ, ಸ್ವಾತಂತ್ರ್ಯ ಗಳಿಸಿ ಇಷ್ಟು ವರ್ಷ ಕಳೆದರೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಂವಿದಾನದ ಆಶಯ ಜಾರಿಗೆಯಾಗಿಲ್ಲ, ಸರ್ಕಾರವೇ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಕನಿಷ್ಠ ಸಂಬಳಕ್ಕೆ ದುಡಿಸಿಕೊಂಡರೂ ಅವರ ವೇತನಕ್ಕಾಗಿ ಹೋರಾಟದ ಮೂಲಕ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಕೃಷಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾನತೆ ಮತ್ತು ತಮ್ಮ ಹಕ್ಕುಗಳಿಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದರು.

ಉಡುಪಿ ಜಿಲ್ಲಾ ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಪರಿಪೂರ್ಣ ವ್ಯಕ್ತಿ ಮತ್ತು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಉಪನ್ಯಾಸಕರ ಪಾತ್ರ ಬಹಳ ಮುಖ್ಯ, ಈ ನಿಟ್ಟಿನಲ್ಲಿ ಸರ್ಕಾರ ಉಪನ್ಯಾಸಕರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ, ಪ್ರತಿ ಜಿಲ್ಲೆಯಲ್ಲೂ ಪಕ್ಷಬೇದವಿಲ್ಲದೆ ಎಲ್ಲಾ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ತಮ್ಮ ಅಹವಾಲುಗಳನ್ನು ನೀಡಿ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕು ಎಂದರು.

ಉಡುಪಿ, ಮಂಗಳೂರು,ಕೊಡಗು ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಜಿಲ್ಲಾ ಎಬಿವಿಪಿ ಸಂಚಾಲಕ ಚೇತನ ಉಪಸ್ಥಿತರಿದ್ದರು. ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಗುಲಾಬಿ ಸ್ವಾಗತಿಸಿದರು. ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರವಿಚಂದ್ರ ವಂದಿಸಿದರು.

Write A Comment