ಕರಾವಳಿ

ಅಮೆರಿಕಾದಲ್ಲಿ ವಿಜಯಿಯಾಗಲಿ ಪಿ.ಸಿ. ವಿಜಯ ಕಾಂಚನ್

Pinterest LinkedIn Tumblr

vijaya_kancha_photo_2

ಮಂಗಳೂರು ,ಅ.04: ಪೊಲೀಸ್ ಕಾನ್‌ಸ್ಟೇಬಲ್‌ಗಳಂದರೆ ಸಾರ್ವಜನಿಕರಿಗೆ ಇರುವ ಗೌರವ ಅಷ್ಟಕ್ಕಷ್ಟೇ. ಅವರ ಮೇಲೆ ಇರುವ ಗೌರವಕ್ಕಿಂತ ತಾತ್ಸಾರ ಮನೋಭವವೇ ಅಧಿಕ. ಇದರಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳ ತಪ್ಪಿಲ್ಲ ಎಂದೇನಲ್ಲ…! ಆದರೆ, ಇಲ್ಲೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರೇ ವಿಜಯ ಕಾಂಚನ್.

vijaya_kancha_photo_7

ವಿಜಯ ಕಾಂಚನ್1994 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡವರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು ರೌಡಿ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸಿ ರೌಡಿಗಳಲ್ಲಿ ನಡುಕ ಹುಟ್ಟಿಸಿರುವ ದೃಢಕಾಯ. ಆರಂಭದಲ್ಲಿ ದೇಹದಾರ್ಢ್ಯದಲ್ಲಿ ಆಸಕ್ತರಾಗಿದ್ದ ಅವರು ಬಳಿಕ ಪವರ್ ಲಿಫ್ಟಿಂಗ್‌ನಲ್ಲಿ ತನ್ನ ಆಸಕ್ತಿಯನ್ನು ಕ್ರೋಢೀಕರಿಸಿ ಯಶಸ್ವಿಯಾಗಿರುವ ದಕ್ಷ ಪೊಲೀಸ್ ಕಾನ್‌ಸ್ಟೇಬಲ್.

vijaya_kancha_photo_3

ರಾಜ್ಯ, ರಾಷ್ಟ್ರ, ಏಷ್ಯಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿರುವ ಅವರು ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ. ಅ.17 ರಿಂದ 19 ರವರೆಗೆ ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ವಿಶ್ವ ಮುಕ್ತ ಪವರ್ ಲಿಫ್ಟಿಂಗ್ ಚಾಂಪಿಂiiನ್‌ಶಿಪ್‌ನಲ್ಲಿ ಭಾಗವಹಿಸಲು ಅವರು ಸಜ್ಜಾಗುತ್ತಿದ್ದಾರೆ. ಇದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೂ ಹೆಮ್ಮೆಯ ವಿಷಯ.

vijaya_kancha_photo_4

ಅದ್ವಿತೀಯ ಸಾಧಕ ವಿಜಯ ಕಾಂಚನ್:
ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲಾ ಪದಕಗಳನ್ನು ಗೆದ್ದು ತರುವ ವಿಜಯ ಕಾಂಚನ್ ಪವರ್ ಲಿಫ್ಟಿಂಗ್‌ನಲ್ಲಿ ಮಾಡಿರುವ ಸಾಧನೆ ಅದ್ವಿತೀಯ. 2010 ರಲ್ಲಿ ಪಿಲಿಫೈನ್ಸ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಬಾರಿಗೆ ಭಾಗವಹಿಸಿ ಭಾರತಕ್ಕೆ ಕಂಚಿನ ಪದಕ ತಂದು ಕೊಟ್ಟವರು ವಿಜಯ ಕಾಂಚನ್.

2011 ರಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 3 ಬೆಳ್ಳಿಯ ಪದಕಗಳನ್ನು ಗೆದ್ದು ಅದ್ವಿತೀಯ ಸಾಧನೆಗೈದರು. 2012 ರಲ್ಲಿ ಕಜಕಿಸ್ಥಾನದಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮತ್ತೆ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.

ಪವರ್ ಲಿಫ್ಟಿಂಗ್‌ನಲ್ಲಿ ಬೆಂಚ್ ಪ್ರೆಸ್ ಅವರ ನೆಚ್ಚಿನ ವಿಭಾಗ. ಜಮ್ಮುವಿನಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಅವರು ಚಿನ್ನದ ಪದಕ ಗಳಿಸಿದ್ದರು. ಬೆಂಚ್ ಪ್ರೆಸ್, ಡೆಡ್ ಲಿಫ್ಟ್ ಮತ್ತು ಸ್ಕಾಟ್‌ನಲ್ಲಿ ತನ್ನ ಸಾರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ವಿಜಯ ಕಾಂಚನ್.

vijaya_kancha_photo_5

ಸರಕಾರದ ಸಹಕಾರ ಅಗತ್ಯ: 
ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಸದಾ ಕರ್ತವ್ಯ ನಿರತರಾಗಿರುವ ವಿಜಯ ಕಾಂಚನ್‌ನಂತಹ ಕ್ರೀಡಾಪಟುಗಳಿಗೆ ಸರಕಾರದ ಪ್ರೋತ್ಸಾಹ ಅತ್ಯಗತ್ಯ. ಏಷ್ಯಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕಾದರೆ ವಿಜಯ ಕಾಂಚನ್ ಅವರಿಗೆ 2 ಲಕ್ಷ ರೂ.ಗಳಾದರೂ ಬೇಕಾಗುತ್ತದೆ.

ಕೈಯಿಂದ ಖರ್ಚು ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅವರು ರಾಜ್ಯ, ದೇಶಕ್ಕೆ ಕೀರ್ತಿಯನ್ನು ತಂದುಕೊಡುತ್ತಾರೆ. ಆದರೆ, ಇಂತಹ ಕ್ರೀಡಾಪಟುಗಳಿಗೆ ಖರ್ಚು ಮಾಡಿದ ಹಣದ ಅರ್ಧ ಭಾಗವನ್ನಷ್ಟೇ ಸರಕಾರ ಭರಿಸುತ್ತದೆ. ಅದೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಿಂದಿರುಗಿ ಬಂದ ಅನೇಕ ದಿನಗಳ ಬಳಿಕ…!

vijaya_kancha_photo_6

ಈ ನಿಟ್ಟಿನಲ್ಲಿ ಸರಕಾರ ಇಂತಹ ಕ್ರೀಡಾಪಟುಗಳಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ಮುಂಗಡ ಹಣದ ವ್ಯವಸ್ಥೆಯನ್ನು ಮಾಡಬೇಕು. ಇಲ್ಲದಿದಲ್ಲಿ ಇಂತಹ ಕ್ರೀಡಾಪಟುಗಳು ಸಾಲ ಮೂಲಗಳನ್ನು ಮಾಡಿಕೊಂಡು ಒತ್ತಡದ ಸನ್ನಿವೇಶದಲ್ಲಿ ಸ್ಪರ್ಧೆಯಲ್ಲಿ ಭಾಗವಿಸಬೇಕಾಗುತ್ತದೆ. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅತ್ಯಗತ್ಯ.

ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ವಿಜಯ ಕಾಂಚನ್ ಅವರಿಗೆ 2012 ರಲ್ಲಿ ಮುಖ್ಯ ಮಂತ್ರಿಗಳ ಚಿನ್ನದ ಪದಕದ ಗೌರವ ದೊರಕಿತ್ತು. ಅ.6 ರಂದು ದಿಲ್ಲಿಗೆ ತೆರಳಲಿರುವ ವಿಜಯ ಕಾಂಚನ್ ಅ.14 ರಂದು ಅಲ್ಲಿಂದ ಅಮೆರಿಕಾಕ್ಕೆ ತೆರಳಲಿದ್ದಾರೆ. ವಿಜಯ ಕಾಂಚನ್ ಅವರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯ ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂಬುದು ನಮ್ಮೆಲ್ಲರ ಆಶಯ.

Write A Comment